Site icon Vistara News

State politics | ವಾರಾಂತ್ಯದಲ್ಲಿ ಸಿಎಂ ಬೊಮ್ಮಾಯಿ ದಿಲ್ಲಿಗೆ: ಚುನಾವಣೆ ಬಗ್ಗೆ ಚರ್ಚೆ, ಸಂಪುಟ ವಿಸ್ತರಣೆಯೂ ಫಿಕ್ಸ್‌

ಸಚಿವ ಸಂಪುಟ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ತಿಂಗಳ ಬಳಿಕ ದಿಲ್ಲಿಗೆ ಹೊರಟಿದ್ದಾರೆ. ಈ ವಾರಾಂತ್ಯದಲ್ಲಿ ಅವರು ದಿಲ್ಲಿಗೆ ಹೋಗುತ್ತಿದ್ದು, ಸರ್ಕಾರ ಮತ್ತು ಪಕ್ಷಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಇಟ್ಟುಕೊಂಡು ರಾಷ್ಟ್ರ ರಾಜಧಾನಿಗೆ ಪ್ರಯಾಣಿಸಲಿದ್ದಾರೆ.

ಪ್ರಮುಖ ಉದ್ದೇಶಗಳು
ಭೇಟಿಯ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ, ಸೇರಿದಂತೆ ಪಕ್ಷ ಮತ್ತು ಸರಕಾರದ ಹಲವು ಮುಖಂಡರನ್ನು ಭೇಟಿ ಮಾಡಲಿದ್ದಾರೆ.
ನವೆಂಬರ್ 10ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ ಉದ್ಘಾಟನೆ ಮತ್ತು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಮಾಡಲಿರುವ ಪ್ರಧಾನಿ ಮೋದಿ ಅವರಿಗೆ ಅಧಿಕೃತ ಆಹ್ವಾನ ನೀಡುವುದು ಬೊಮ್ಮಾಯಿ ಅವರು ಪ್ರಮುಖ ಉದ್ದೇಶಗಳಲ್ಲಿ ಒಂದು.

ರಾಜ್ಯದಲ್ಲಿ ಬಹುಕಾಲದಿಂದ ಸಂಪುಟ ವಿಸ್ತರಣೆ ನನೆಗುದಿಗೆ ಬಿದ್ದಿದೆ. ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಮಂತ್ರಿ ಆಗಲೇಬೇಕು ಎಂದು ಹಠ ತೊಟ್ಟು ಕುಳಿತಿದ್ದಾರೆ. ಕೊನೆಯ ಸುತ್ತಿನ ಸಂಪುಟ ವಿಸ್ತರಣೆಯೂ ಬಾಕಿ ಇದೆ. ಹೀಗಾಗಿ ಈ ಬಗ್ಗೆ ಅವರು ಅಮಿತ್ ಶಾ, ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ೨೦೨೩ರ ಮೇ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ರೂಪುರೇಷೆ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿ ಈ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.

ರಾಯಚೂರು ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಮಂಜೂರು ಕುರಿತು ಕೇಂದ್ರದ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದರೆ, ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ವಳ ನಿರ್ಧಾರದ ಮಾಹಿತಿಯನ್ನು ಕೇಂದ್ರದ ಕಾನೂನು ಇಲಾಖೆ ಸಚಿವರಿಗೆ ತಿಳಿಸಿ ಮುಂದಿನ ತಿಳಿಸಲಿರುವ ಸಿಎಂ ಕೇಂದ್ರದಿಂದಲೂ ಆಗಬೇಕಾದ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲು ಮನವಿ ಮಾಡಲಿದ್ದಾರೆ. ನೀರಾವರಿ ಯೋಜನೆಗಳ ಬಗ್ಗೆಯೂ ಚರ್ಚೆಯೂ ನಡೆಯಲಿದೆ.

ಬಿಎಸ್‌ ಯಡಿಯೂರಪ್ಪ ಇಂದು ದೆಹಲಿಗೆ ಪಯಣ
ಈ ನಡುವೆ, ಮಾಜಿ ಸಿಎಂ, ಬಿಜೆಪಿಯ ಕೇಂದ್ರೀಯ ಸಲಹಾ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು ಮಂಗಳವಾರ ದೆಹಲಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11.30 ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ಬಿಎಸ್‌ವೈ ಅವರು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಬಿಎಸ್‌ವೈ ಭಾಗಿಯಾಗುವರು.

ಕೇಂದ್ರಿಯ ಮಂಡಳಿಗೆ ಆಯ್ಕೆಯಾದ ಬಳಿಕ ಮೊದಲ ಬಾರಿ ಈ ಮಹತ್ವದ ಸಭೆಯಲ್ಲಿ ಬಿಎಸ್‌ವೈ ಭಾಗಿಯಾಗುತ್ತಿದ್ದಾರೆ. ಸಂಜೆ 5 ಗಂಟೆಗೆ ನಡೆಯಲಿರುವ ಸಭೆ ವಿವಿಧ ರಾಜ್ಯಗಳ ಮುಂಬರುವ ಚುನಾವಣಾ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇಂದಿನ ಸಭೆಯಲ್ಲಿ ಚುನಾವಣಾ ಎದುರಿಸುವ ರಾಜ್ಯಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗುವ ಸಾಧ್ಯತೆ ಇದೆ.

ದೆಹಲಿಯ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿರುವ ಬಿಎಸ್‌ವೈ ಮೊದಲ ಬಾರಿಗೆ ದೇಶ ಮಟ್ಟದಲ್ಲಿ ತನ್ನ ರಾಜಕೀಯ ಅನುಭವಗಳನ್ನು ತೆರೆದಿಡಲಿದ್ದಾರೆ. ಬುಧವಾರ ಸಂಜೆ ಅವರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಇದನ್ನೂ ಓದಿ| ಸಚಿವ ಸಂಪುಟ ವಿಸ್ತರಣೆ | ಶೀಘ್ರವೇ ದೆಹಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಚರ್ಚೆ: ಸಿಎಂ ಬೊಮ್ಮಾಯಿ

Exit mobile version