Site icon Vistara News

SCST ಮೀಸಲಾತಿ ಹೆಚ್ಚಳ | ಪರಿಚ್ಛೇದ 9ರ ಮೇಲೆ ರಾಜ್ಯದ ಭರವಸೆ: ಯಶಸ್ವಿಯಾಗುತ್ತೇವೆ ಎಂದ ಸಿಎಂ

ಬೆಂಗಳೂರು: ಜನಸಂಖ್ಯೆಗೆ ಅನುಗುಣವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕೆಂಬ ಅನೇಕ ವರ್ಷಗಳ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ರಾಜ್ಯದಲ್ಲಿ ಎಸ್‌ಸಿ ಸಮುದಾಯಕ್ಕೆ ಶೇ.2, ಎಸ್‌ಟಿ ಸಮುದಾಯಕ್ಕೆ ಶೇ.4 ಮೀಸಲಾತಿ ಹೆಚ್ಚಿಸಲು ಸರ್ವ ಪಕ್ಷ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯ ತೀರ್ಮಾನದಂತೆ ಇದೀಗ ಎಸ್‌ಸಿ ಸಮುದಾಯದ ಒಟ್ಟು ಮೀಸಲಾತಿ ಶೇ.15ರಿಂದ ಶೇ.17ಕ್ಕೆ, ಎಸ್‌ಟಿ ಸಮುದಾಯದ ಮೀಸಲಾತಿ ಪ್ರಮಾಣ ಶೇ.3ರಿಂದ ಶೇ.7ಕ್ಕೆ ಏರಿಕೆ ಆಗಲಿದೆ. ಈ ಕುರಿತು ಶನಿವಾರ ನಡೆಯುವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಈಗಾಗಲೆ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣ ಶೇ.50 ಮೀರಿರುವ ಕಾರಣಕ್ಕೆ ಸಾಮಾನ್ಯ ನಿಯಮದ ಅಡಿಯಲ್ಲಿ ಮೀಸಲಾತಿ ಏರಿಕೆ ಮಾಡಲು ಸುಪ್ರೀಂಕೋರ್ಟ್‌ ತೀರ್ಪು ಅಡ್ಡಿಯಾಗುತ್ತದೆ.

ಈಗಾಗಲೆ ಪ್ರಸಿದ್ಧಿ ಪಡೆದಿರುವ ಇಂದಿರಾ ಸಾಹನಿ (1992) ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತಿಳಿಸಿರುವಂತೆ, ಎಲ್ಲ ಸಮುದಾಯಗಳ ಒಟ್ಟು ಮೀಸಲಾತಿ ಪ್ರಮಾಣ ಶೇ.50 ಮೀರುವಂತಿಲ್ಲ. ಹಾಗಾಗಿ 1994ರಲ್ಲಿ ತಮಿಳುನಾಡು ಸರ್ಕಾರ ಸಂವಿಧಾನದ 9ನೇ ಪರಿಚ್ಛೇದದ ಅಡಿಯಲ್ಲಿ The Tamil Nadu Backward Classes, Scheduled Castes and Scheduled Tribes (Reservation of Seats in Educational Institutions and of
appointments or posts in the Services under the State) Act, 1993 (Tamil Nadu
Act 45 of 1994) ಜಾರಿಗೆ ತಂದಿದೆ. ಅಂದರೆ ಒಂಭತ್ತನೇ ಪರಿಚ್ಛೇದದ ಅಡಿಯಲ್ಲಿ ಮಾಡಲಾದ ಕಾನೂನುಗಳನ್ನು ದೇಶದ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎಂಬ ರಕ್ಷಣೆ ದೊರಕುತ್ತದೆ.

ರಕ್ಷಣೆ ಸಿಗಲಿದೆ ಎಂದ ಸಿಎಂ ಬೊಮ್ಮಾಯಿ

ಸರ್ವಪಕ್ಷಗಳೊಂದಿಗೆ ಸಭೆಯ ನಂತರ ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ಅಧಿವೇಶನದಲ್ಲಿ ಹೇಳಿದಂತೆ ಸರ್ವಪಕ್ಷಗಳ ಸಭೆ ಕರೆದು, ಬಹಳ ವರ್ಷದ ನ್ಯಾಯಸಮ್ಮತವಾದ ಬೇಡಿಕೆ ಕುರಿತು ಚರ್ಚಿಸಿದ್ದೇವೆ. ಸಂವಿಧಾನದಲ್ಲಿ ಹೇಳಿರುವಂತೆ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡಬೇಕು ಎಂದು ಎಸ್‌ಸಿಎಸ್‌ಟಿ ಸಮುದಾಯದವರು ಕೇಳುತ್ತಿದ್ದರು. ಇದಕ್ಕೆ ಶುಭದಿನ ಬಂದಿದೆ. ಇದಕ್ಕೆ 240ಕ್ಕೂ ಹೆಚ್ಚು ದಿನದಿಂದ ಸ್ವಾಮೀಜಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಇದಕ್ಕೂ ಮುನ್ನವೂ ಸಾಕಷ್ಟು ಪಾದಯಾತ್ರೆ ಸಹ ಮಾಡಿದ್ದರು. ಸ್ವಾಮೀಜಿಯವರ ಪ್ರತಿಭಟನೆಗೆ ನಮ್ಮ ಪಕ್ಷದ ಅನೇಕ ನಾಯಕರು ಬೆಂಬಲಿಸಿದ್ದರು ಎಂದರು.

ನ್ಯಾ. ನಾಗಮೋಹನದಾಸ್‌ ಸಮಿತಿ ರಚನೆ ಆಗಿತ್ತು. ಆರು ತಿಂಗಳಾದರೂ ಸಮಿತಿ ಕಾರ್ಯಾಚರಣೆ ಮಾಡುತ್ತಿರಲಿಲ್ಲ. ನಮ್ಮ ಸರ್ಕಾರ ರಚನೆ ಆದ ನಂತರ ಆರು ತಿಂಗಳು ವಿಸ್ತರಣೆಯನ್ನು ಬಿ.ಎಸ್‌. ಯಡಿಯೂರಪ್ಪ ನೀಡಿದರು. ಮತ್ತೆ ನಾಗಮೋಹನದಾಸ್‌ ಅವರನ್ನು ಭೇಟಿಯಾಗಿ, ಆರು ತಿಂಗಳಲ್ಲೇ ವರದಿ ನೀಡುವಂತೆ ಕೋರಿ, ಅನೇಕ ಮಾಹಿತಿಗಳನ್ನು ನೀಡಿದ್ದೆವು. ಅವರು ನ್ಯಾಯಸಮ್ಮತವಾದ ವರದಿಯನ್ನು ನೀಡಿದರು. ನಂತರ ಮೀಸಲಾತಿ ಕುರಿತು ಆಗಮಿಸಿದ ಸುಪ್ರೀಂಕೋರ್ಟ್‌ ಆದೇಶವನ್ನೂ ಪರಿಗಣಿಸಿ ಮತ್ತೆ ಶಿಫಾರಸು ಪಡೆದುಕೊಳ್ಳಲಾಯಿತು.

ಇದನ್ನೂ ಓದಿ | ಬಿಜೆಪಿ ಕಾರ್ಯಕಾರಿಣಿ | ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕೋರ್‌ ಕಮಿಟಿ ಶಿಫಾರಸು, ಅ. 9ರೊಳಗೆ ನಿರ್ಣಯಕ್ಕೆ ಮನವಿ

ಇಂದ್ರಾ ಸಾಹನಿ ಪ್ರಕರಣದಂತೆ, ವಿಶೇಷ ಪ್ರಕರಣ ಎಂದು ಪರಿಗಣಿಸಲು ಸಮಿತಿ ಶಿಫಾರಸು ನೀಡಿದೆ. ಎಲ್ಲ ಪ್ರಕರಣಗಳನ್ನೂ ಸರ್ಕಾರ ಅಧ್ಯಯನ ಮಾಡಿದೆ. ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.15 ರಿಂದ ಶೇ.17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಏರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರಕ್ಕೆ ಮುನ್ನ ಬಿಜೆಪಿ ಸಭೆಯಲ್ಲೂ ಚರ್ಚೆ ಮಾಡಲಾಯಿತು. ಕೋರ್‌ ಕಮಿಟಿಯಲ್ಲೂ ಚರ್ಚಿಸಿ, ಸಾಮಾಜಿಕ ನ್ಯಾಯದ ಬದ್ಧತೆಯನ್ನು ಮುಂದವರಿಸಬೇಕು ಎಂದು ತಿಳಿಸಲಾಗಿತ್ತು. ಶನಿವಾರವೇ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ಅಂತಿಮ ಕಾರ್ಯಾದೇಶವನ್ನು ಹೊರಡಿಸಲಾಗುತ್ತದೆ ಎಂದರು.

ಎಸ್‌ಸಿಎಸ್‌ಟಿ ಮೀಸಲಾತಿ ಅಷ್ಟೆ ಅಲ್ಲದೆ, ಸಮಗ್ರ ಮೀಸಲಾತಿ ಬಗ್ಗೆಯೂ ಚಿಂತನೆ ಮಾಡಬೇಕಿದೆ. ಯಾವುದೇ ಸಮಾಜಕ್ಕೆ ಅನ್ಯಾಯ ಮಾಡದೇ ತೀರ್ಮಾನ ತೆಗೆದುಕೊಳ್ಳಲು ಕಾನೂನು ತಜ್ಞರ ಜತೆಗೆ ಚರ್ಚೆ ಮಾಡುತ್ತೇವೆ. ಒಬಿಸಿ ಮೀಸಲಾತಿ ಕುರಿತೂ ಚರ್ಚೆ ಮಾಡಲಾಗುತ್ತಿದ್ದೇವೆ. ಬೇರೆಬೇರೆ ಸಮುದಾಯಗಳ ಮೀಸಲಾತಿ ಕುರಿತ ವಿಚಾರ ಬೇರೆಬೇರೆ ಹಂತದಲ್ಲಿವೆ. ಈ ಪ್ರಕರಣದ ರೀತಿಯಲ್ಲೆ ಅವುಗಳನ್ನೂ ಕೂಲಂಕಷ ತನಿಖೆ ನಡೆಸಿ ನ್ಯಾಯ ನೀಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಈಗಾಗಲೆ ಇರುವ ಯಾವುದೇ ಮೀಸಲಾತಿಯನ್ನೂ ಕಡಿಮೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಬೊಮ್ಮಾಯಿ, 10% ಇಡಬ್ಲ್ಯುಎಸ್‌ ಮೀಸಲಾತಿಯನ್ನು, ಯಾವುದೇ ಮೀಸಲಾತಿ ಇಲ್ಲದಿರುವ, ಆರ್ಥಿಕ ಹಿಂದುಳಿದವರಿಗೆ ನೀಡುತ್ತೇವೆ. ಅದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಅದನ್ನೂ ಪರಿಗಣಿಸಿ ನಿರ್ಧಾರ ಮಾಡಲಾಗುತ್ತದೆ ಎಂದರು.

ಸುಪ್ರೀಂಕೋರ್ಟ್‌ ಪರಿಶೀಲಿಸಬಹುದು

ಸಂವಿಧಾನದ 9ನೇ ಪರಿಚ್ಛೇದದ ಅಡಿಯಲ್ಲಿ ತಮಿಳುನಾಡು ಸರ್ಕಾರ 1994ರಲ್ಲಿ ಮೀಸಲಾತಿ ನೀಡಿದ ನಂತರ 2007ರಲ್ಲಿ ಮತ್ತೊಂದು ಆದೇಶ ಬಂದಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಮೂಲಭೂತ ಹಕ್ಕಿಗೆ ತೊಂದರೆ ಆದರೆ ರಕ್ಷಣೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಐವತ್ತರ ದಶಕದಲ್ಲಿ ಭೂ ಸುಧಾರಣೆ ಕಾನೂನಿಗೆ ರಕ್ಷಣೆ ನೀಡಲು ಪರಿಚ್ಛೇದ ಒಂಭತ್ತನ್ನು ರೂಪಿಸಲಾಯಿತು. ತಮಿಳುನಾಡಿನಲ್ಲಿ 1994ರಿಂದಲೂ ಮೀಸಲಾತಿ ಜಾರಿಯಲ್ಲಿದೆ. ಈಗ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಇದ್ದರೂ ಇನ್ನೂ ತೀರ್ಮಾನ ಬಂದಿಲ್ಲ. ಹಾಗಾಗಿ ಕರ್ನಾಟಕದಲ್ಲೂ ಇದೇ ನಿಯಮದ ಅಡಿಯಲ್ಲಿ ಮೀಸಲಾತಿ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.

ಪರಿಚ್ಛೇದ 9ರಲ್ಲಿ ಈಗಾಗಲೆ ದೇಶಾದ್ಯಂತ 284 ಕಾನೂನುಗಳನ್ನು ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ಐದು ಕಾನೂನುಗಳೂ ಸೇರಿವೆ. ಇವುಗಳಲ್ಲಿ ತಮಿಳುನಾಡಿನ ಮೀಸಲಾತಿ ಕಾನೂನು ಹಾಗೂ ಇನ್ನಿತರೆ ಕೆಲವು ಕಾನೂನು ಹೊರತುಪಡಿಸಿ ಬಹುತೇಕ ಭೂ ಸುಧಾರಣೆ ಕುರಿತಾಗಿವೆ. ಭೂ ಸುಧಾರಣೆ ಕಾನೂನುಗಳನ್ನು ಯಾರೂ ಪ್ರಶ್ನೆ ಮಾಡಬಾರದು ಎನ್ನುವ ಕಾರಣಕ್ಕೆ ಒಂಭತ್ತನೇ ಪರಿಚ್ಛೇದವನ್ನು ರೂಪಿಸಲಾಯಿತು. ಆದರೆ ಈ ಕಾನೂನೂ ಸಂಪೂರ್ಣ ರಕ್ಷಣೆ ನೀಡುವುದಿಲ್ಲ.

2007ರಲ್ಲಿ ಐಆರ್‌ ಕೊಹೆಲೊ ವರ್ಸಸ್‌ ತಮಿಳೂನಾಡು ಸರ್ಕಾರ ಪ್ರಕರಣದಲ್ಲಿ, ಪರಿಚ್ಛೇದ 9ರಲ್ಲಿರುವ ಕಾನೂನುಗಳನ್ನೂ ನ್ಯಾಯಾಂಗ ಪರಿಶೀಲನೆ ಮಾಡಬಹುದು ಎಂದು ತಿಳಿಸಿದೆ. ರೂಪಿಸಿರುವ ಕಾನೂನು ಸಂವಿಧಾನದ ಮೂಲಭೂತ ಸಂರಚನೆಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆಯಾದರೆ ಅದನ್ನೂ ರದ್ದುಪಡಿಸಬಹುದು. ಹಾಗಾಗಿ ಇದೀಗ ರಾಜ್ಯ ಸರ್ಕಾರ ರೂಪಿಸುವ ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳ ಆದೇಶಕ್ಕೆ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ತಂದು ಸೇರ್ಪಡೆ ಮಾಡಬೇಕು. ಈ ಕಾನೂನು ಸಂವಿಧಾನದ ಮೂಲಭೂತ ಸಂರಚನೆಗೆ ವಿರುದ್ಧವಾಗಿಲ್ಲ ಎನ್ನುವುದನ್ನೂ ಮನವರಿಕೆ ಮಾಡಬೇಕು. ಹಾಗೂ ಈಗಾಗಲೆ 1994ರ ತಮಿಳುನಾಡು ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೆಲ್ಲದರ ಆಧಾರದಲ್ಲಿ, ಕರ್ನಾಟಕದಲ್ಲಿ ಹೊರಡುವ ಆದೇಶದ ಭವಿಷ್ಯ ನಿರ್ಧಾರವಾಗುತ್ತದೆ.

ಇದನ್ನೂ ಓದಿ | ಮೀಸಲಾತಿ ಹೆಚ್ಚಳ | ಕರ್ನಾಟಕದಲ್ಲೂ 50% ಮೀರಲಿದೆ ರಿಸರ್ವೇಷನ್: SCಗೆ 2%, STಗೆ 4% ಹೆಚ್ಚಿಸಲು ತೀರ್ಮಾನ

Exit mobile version