Site icon Vistara News

Stock Market : ರಂಗಸ್ವಾಮಿ ಮೂಕನಹಳ್ಳಿಯವರ ನೂತನ ಪುಸ್ತಕ ಷೇರು ಮಾರುಕಟ್ಟೆ ಹೂಡಿಕೆ ಮಾರ್ಗದರ್ಶಿ ಬಿಡುಗಡೆ

Rangaswamy Mookanahalli's new book release

ಬೆಂಗಳೂರು: ಹೆಸರಾಂತ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿಯವರ ಬಹು ನಿರೀಕ್ಷಿತ ನೂತನ ಕೃತಿ ಷೇರು ಮಾರುಕಟ್ಟೆ-ಸಮಗ್ರ ಹೂಡಿಕೆ ಮಾರ್ಗದರ್ಶಿ ಗುರುವಾರ ಲೋಕಾರ್ಪಣೆಯಾಗಿದೆ. (Stock Market ) ಸಾವಣ್ಣ ಪ್ರಕಾಶನ ಸಂಸ್ಥೆಯಿಂದ ಪ್ರಕಟಿತವಾಗಿರುವ ಈ ಕೃತಿಯನ್ನು ವಿಸ್ತಾರ ನ್ಯೂಸ್‌ನ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಹಾಗೂ ಏಮ್‌ ಹೈ ಕನ್ಸಲ್ಟಿಂಗ್‌ನ ಸಿಇಒ ಎನ್.‌ ರವಿಶಂಕರ್‌ ಅವರು ಬಿಡುಗಡೆಗೊಳಿಸಿದರು. ಥಟ್‌ ಅಂತ ಹೇಳಿ ದೂರದರ್ಶನ ರಸಪ್ರಶ್ನೆ ಕಾರ್ಯಕ್ರಮದಿಂದ ನಾಡಿನಾದ್ಯಂತ ಮನೆಮಾತಾಗಿರುವ ಡಾ. ನಾ. ಸೋಮೇಶ್ವರ, ಹಿರಿಯ ಲೇಖಕ ಜೋಗಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಹಣಕಾಸು ಸಾಕ್ಷರತೆ (Finance literacy) ಇಂದಿನ ಅಗತ್ಯ

ಷೇರು ಮಾರುಕಟ್ಟೆ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಹರಿಪ್ರಕಾಶ್‌ ಕೋಣೆಮನೆ, ದೇಶ ಸ್ವಾತಂತ್ರ್ಯಗೊಂಡ ಸಂದರ್ಭದಲ್ಲಿ ಹಸಿವಿನ ಸಮಸ್ಯೆಯಿಂದ ಭಾರತವನ್ನು ಪಾರು ಮಾಡುವ ಸವಾಲು ಎಲ್ಲಕ್ಕಿಂತ ಮುಖ್ಯವಾಗಿತ್ತು. ಹೀಗಾಗಿ ಸರ್ಕಾರ ಆಹಾರ ಕೊರತೆಯನ್ನು ನೀಗಿಸಲು ಒತ್ತು ನೀಡಿತ್ತು. ಹಾಗೂ ಅದರಲ್ಲಿ ಯಶಸ್ವಿಯೂ ಆಯಿತು. ಹಸಿರು ಕ್ರಾಂತಿಯೂ ಸಂಭವಿಸಿತು. ದೇಶ ಈಗ ನಾನಾ ಬಗೆಯ ಆಹಾರೋತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಅವುಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಕೇವಲ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದಲ್ಲದೆ, ಈಗಿನ ಭಾರತ ರಕ್ಷಣಾ ವಲಯದ ಶಸ್ತ್ರಾಸ್ತ್ರಗಳ ರಫ್ತನ್ನೂ ಆರಂಭಿಸುವಷ್ಟು ಮುಂದುವರಿದಿದೆ. ಇದೇ ರೀತಿಯಲ್ಲಿ ಹಣಕಾಸು ಸಾಕ್ಷರತೆಯನ್ನು ಸಾಧಿಸಬೇಕಾದ, ಅದರ ಮೂಲಕ ಎಲ್ಲರ ವೈಯಕ್ತಿಕ, ಸಾಮಾಜಿಕ, ಆರ್ಥಿಕ ಪ್ರಗತಿಯನ್ನು ಕಾಣಬೇಕಾದ ಅವಶ್ಯಕತೆ ಉಂಟಾಗಿದೆ. ಎಲ್ಲರೂ ಪ್ರಗತಿಶೀಲರಾದಾಗ ದೇಶವೂ ಅಭಿವೃದ್ಧಿ ಹೊಂದಿದಂತಾಗುತ್ತದೆ. ಆದ್ದರಿಂದ ಉದ್ಯೋಗವನ್ನು ಹುಡುಕುವುದಕ್ಕಿಂತಲೂ, ಉದ್ಯೋಗಗಳನ್ನು ಸೃಷ್ಟಿಸಬಲ್ಲ ಉದ್ಯಮಶೀಲತೆಗೂ ಆದ್ಯತೆ, ಉತ್ತೇಜನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ರಂಗಸ್ವಾಮಿ ಮೂಕನಹಳ್ಳಿಯವರ ಷೇರು ಮಾರುಕಟ್ಟೆ ಕೃತಿ ಸಹಕಾರಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ರಂಗಸ್ವಾಮಿಯವರು ದೇಶ ಸುತ್ತು ಕೋಶ ಓದು ಎಂಬ ಹಿರಿಯರ ಮಾತನ್ನು ಅನುಸರಿಸಿದವರು. ಹಲವಾರು ದೇಶಗಳಲ್ಲಿದ್ದು ಗಳಿಸಿದ ಅನುಭವ, ಅಧ್ಯಯನದ ಜ್ಞಾನವನ್ನು ಬಳಸಿಕೊಂಡು ಈ ಕೃತಿಯನ್ನು ರಚಿಸಿದ್ದಾರೆ. ಸಮಾಜದ ವಿಕಾಸಕ್ಕೆ ಇಂಥ ಸೇವೆ ಅವಶ್ಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಏಮ್‌ ಹೈ ಕನ್ಸಲ್ಟಿಂಗ್‌ ಸಿಇಒ ಎನ್.‌ ರವಿಶಂಕರ್‌ ಅವರು ಮಾತನಾಡಿ, ಹಣದುಬ್ಬರದ ಪ್ರಮಾಣ ಶೇ.8ರ ಆಸುಪಾಸಿನಲ್ಲಿ ಜನಜೀವನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿರುವ ಪ್ರಸ್ತುತ ಸಂದರ್ಭದಲ್ಲಿ, ಷೇರು, ಮ್ಯೂಚುವಲ್‌ ಫಂಡ್‌, ಇಟಿಎಫ್‌ ಇತ್ಯಾದಿಗಳಲ್ಲಿ ಹೂಡಿಕೆಯ ಮೂಲಕ ಹೆಚ್ಚಿನ ಆದಾಯವನ್ನು ಗಳಿಸುವುದು ಅವಶ್ಯಕವಾಗಿದೆ. ಏಕೆಂದರೆ ಈಗಿನ ಬ್ಯಾಂಕ್‌ ಎಫ್‌ ಡಿ, ಆರ್‌ಡಿ, ಅಂಚೆ ಕಚೇರಿಯ ಉಳಿತಾಯ ಯೋಜನೆಗಳಾಗಲಿ, ಹಣದುಬ್ಬರದ ಪ್ರಮಾಣಕ್ಕಿಂತಲೂ ಹೆಚ್ಚಿನ ಆದಾಯವನ್ನು ಹೂಡಿಕೆದಾರರಿಗೆ ತಂದುಕೊಡುವುದಿಲ್ಲ. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಮುನ್ನ ಅವುಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ನಷ್ಟ ಕಟ್ಟಿಟ್ಟ ಬುತ್ತಿ. ಹೀಗಾಗಿ ಷೇರು ಜಗತ್ತಿನಲ್ಲಿ ಹೇಗೆ ಆದಾಯ ಗಳಿಸಬಹುದು ಎಂಬುದನ್ನು ತಿಳಿದುಕೊಳ್ಳಲು ರಂಗಸ್ವಾಮಿಯವರ ಈ ಕೃತಿ ಉಪಯುಕ್ತ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ನಡೆದ ಸಂವಾದ ಹಾಗೂ ಪ್ರಶ್ನೋತ್ತರದಲ್ಲಿ ಬಿಸಿನೆಸ ಸಲಹೆಗಾರ ನವೀನ್‌ ಕಟ್ಟೆ, ಚಾರ್ಟರ್ಡ್‌ ಅಕೌಂಟೆಂಟ್‌ ರಾಜೇಶ್‌ ಸತ್ರಸಾಲ, ಲೇಖಕ ರಂಗಸ್ವಾಮಿ ಮೂಕನಹಳ್ಳಿ ಭಾಗವಹಿಸಿದ್ದರು. ಓದುಗರು ಅಪಾರ ಆಸಕ್ತಿಯಿಂದ ಷೇರು ಮಾರುಕಟ್ಟೆ ಕುರಿತ ಪ್ರಶ್ನೆಗಳನ್ನು ಮುಂದಿಟ್ಟು ತಜ್ಞರಿಂದ ಉತ್ತರ ಪಡೆದರು. ಸಾವಣ್ಣ ಪ್ರಕಾಶನದ ಜಮೀಲ್‌ ಅವರು ಕೃತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಷೇರು ಮಾರುಕಟ್ಟೆ ಕೃತಿಯಲ್ಲೇನಿದೆ?

ರಂಗಸ್ವಾಮಿ ಮೂಕನಹಳ್ಳಿ ಅವರ ಷೇರು ಮಾರುಕಟ್ಟೆ- ಸಮಗ್ರ ಹೂಡಿಕೆ ಮಾರ್ಗದರ್ಶಿ ಕೃತಿಯಲ್ಲಿ, ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲು ಬೇಕಾಗಿರುವ ಫಂಡಮೆಂಟಲ್‌ ಅನಾಲಿಸಿಸ್‌, ಟೆಕ್ನಿಕಲ್‌ ಅನಾಲಿಸಿಸ್‌ ಜತೆಗೆ ಬಹು ಮುಖ್ಯವಾದ ಸೆಂಟಿಮೆಂಟ್‌ ಅನಾಲಿಸಿಸ್‌ ಬಗ್ಗೆ ವಿವರಗಳಿವೆ.

ಪ್ರೈಮರಿ ಮಾರುಕಟ್ಟೆ, ಸೆಕೆಂಡರಿ ಮಾರುಕಟ್ಟೆ, ಡಿರೈವೆಟಿಸ್‌ ಮಾರುಕಟ್ಟೆಯಲ್ಲಿನ ಫ್ಯೂಚರ್‌ ಮತ್ತು ಆಪ್ಷನ್‌ ವಹಿವಾಟುಗಳು ಹೇಗೆ ನಡೆಯುತ್ತವೆ ಎಂಬ ವಿವರಗಳು ಇವೆ. ಹೂಡಿಕೆದಾರರರು ಸಾಮಾನ್ಯವಾಗಿ ಮಾಡುವ ತಪ್ಪು ನಡೆಗಳು, ಅವರು ಎದುರಿಸುವ ಸವಾಲುಗಳು, ಅವುಗಳನ್ನು ಎದುರಿಸುವುದು ಹೇಗೆ ಎಂಬುದರ ವಿಶ್ಲೇಷಣೆ, ಒಳನೋಟಗಳು ಇವೆ. ಷೇರುದಾರರ ಹಕ್ಕುಗಳು, ಆಲ್ಗೊಟ್ರೇಡಿಂಗ್‌, ಸೆಕ್ಯುರಿಟೀಸ್‌, ಷೇರು ಮಾರುಕಟ್ಟೆಯ ಟರ್ಮಿನಾಲಜಿಗಳು, ಷೇರುಗಳಿಗೆ ಸಂಬಂಧಿಸಿದ ತೆರಿಗೆ ನೀತಿ ಬಗ್ಗೆ ಮಾಹಿತಿಗಳಿವೆ.

Exit mobile version