ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಗುದ್ದಲಿ ಪೂಜೆ ಮಾಡಲು ಹೋದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮೇಲೆ ಕಲ್ಲು ಹಾಗೂ ಮೊಟ್ಟೆ ಎಸೆದಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಈ ದಾಳಿಯನ್ನು ತಾವು ಕಟುವಾಗಿ ಖಂಡಿಸುವುದಾಗಿ ಹೇಳಿದ್ದಾರೆ.
ವಿಷಯಗಳು ಏನೇ ಇರಲಿ ಅದನ್ನು ಕಾನೂನಾತ್ಮಕವಾಗಿ ಬಗೆಹರೆಸಿಕೊಳ್ಳಬೇಕು. ಆದರೆ, ಯೋಗೇಶ್ವರ್ ಮೇಲೆ ಕಲ್ಲು ಹಾಗೂ ಮೊಟ್ಟೆ ಎಸೆದಿರುವುದು ಸರಿಯಲ್ಲ. ಯಾರೂ ಸಹ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಪ್ರಕರಣ?
ರಾಮನಗರದ ೫ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಭೂಮಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಉದ್ಘಾಟಕರಾಗಿ ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಆಗಮಿಸುತ್ತಿದ್ದರೆ, ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಪರಿಷತ್ ಸದಸ್ಯರ ಖೋಟಾದಲ್ಲಿ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಎಂದು ಆಮಂತ್ರಣ ಪತ್ರದಲ್ಲಿ ಹಾಕಲಾಗಿದೆ. ಈ ಬಗ್ಗೆ ಗರಂ ಆಗಿದ್ದ ಮಾಜಿ ಮುಖ್ಯಮಂತ್ರಿ, ರಾಮನಗರ ಶಾಸಕ ಎಚ್.ಡಿ. ಕುಮಾರಸ್ವಾಮಿ, “ನನ್ನ ಹಕ್ಕುಚ್ಯುತಿ ಆಗಿದೆ. ನನಗೆ ಆಹ್ವಾನ ನೀಡಲಾಗಿಲ್ಲ” ಎಂದು ಆರೋಪಿಸಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಸಂಬಂಧ ಜೆಡಿಎಸ್ ಕಾರ್ಯಕರ್ತರು ಬೆಳಗ್ಗೆ ಭೂಮಿ ಪೂಜೆ ನಡೆಯುವ ಸ್ಥಳಗಳಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಲ್ಲದೆ, ಸಿ.ಪಿ.ಯೋಗೇಶ್ವರ್ ಕಾರಿನ ಮೇಲೆ ಕಲ್ಲು ಹಾಗೂ ಮೊಟ್ಟೆ ಎಸೆಯಲಾಗಿತ್ತು. ಅಲ್ಲದೆ, ಅವರ ಕಾರಿಗೆ ಘೇರಾವ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಇಡೀ ಕಾರ್ಯಕ್ರಮವನ್ನು ರದ್ದುಪಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.
ಇದನ್ನೂ ಓದಿ | ಯಾರು ಭಾರತ್ ಜೋಡೊ ಮಾಡಿದ್ದಾರೆ, ಯಾರು ತೋಡೊ ಮಾಡಿದ್ದಾರೆ ಜನರಿಗೆ ತಿಳಿದಿದೆ: ಸಿಎಂ ಬೊಮ್ಮಾಯಿ