Site icon Vistara News

Student death | ಮಂಗಳೂರಿನಲ್ಲಿ ವೈದ್ಯ ವಿದ್ಯಾರ್ಥಿ ಸಾವು: ತನಿಖೆಯನ್ನು ಸಿಬಿಐಗೆ ವಹಿಸಲು ಸುಪ್ರೀಂ ಆರ್ಡರ್

Supreme Court

Supreme Court Strikes Down Electoral Bonds Scheme: What Are The Reasons? What is the Scheme?

ಬೆಂಗಳೂರು: ಮಂಗಳೂರಿನ ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿ ‌ ೨೦೧೪ರ ಮಾರ್ಚ್ 2ರಂದು ನಡೆದ ವೈದ್ಯಕೀಯ ವಿದ್ಯಾರ್ಥಿ, ಕೇರಳದ ಪಟ್ಟಣಂತಿಟ್ಟ ನಿವಾಸಿ ರೋಹಿತ್‌ ರಾಧಾಕೃಷ್ಣನ್‌ (22) ಅವರ ನಿಗೂಢ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂಕೋರ್ಟ್‌ ಆದೇಶಿಸಿದೆ.

ಅಂದು ರೋಹಿತ್‌ ರಾಧಾಕೃಷ್ಣನ್‌ (22) ಅವರ ಶಿರವಿಲ್ಲದ ದೇಹ ಅಪಘಾತಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನ್ಯಾಯಾಲಯದ ಸೂಚನೆಗಳ ಹೊರತಾಗಿಯೂ ಸಿಐಡಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿಲ್ಲ ಎಂಬುದನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಎಂ.ಆರ್‌. ಶಾ ಮತ್ತು ಎಂ.ಎಂ. ಸುಂದ್ರೇಶ್‌ ನೇತೃತ್ವದ ಪೀಠ ತನಿಖೆ ವರ್ಗಾವಣೆಯ ಜತೆಗೆ ಮೃತ ವಿದ್ಯಾರ್ಥಿಯ ತಂದೆಗೆ ದಂಡದ ರೂಪದಲ್ಲಿ ₹ 1 ಲಕ್ಷ ಪಾವತಿಸಬೇಕು ಎಂದು ಸಿಐಡಿಗೆ ಆದೇಶಿಸಿದೆ.

ತಂದೆ-ತಾಯಿಯ ಜತೆಯಲ್ಲಿ ರೋಹಿತ್

ಈ ಹಿಂದೆ ನ್ಯಾಯಾಲಯ ವಿವಿಧ ಆದೇಶಗಳನ್ನು ನೀಡಿದ್ದರೂ ಮೃತ ವಿದ್ಯಾರ್ಥಿ ವಿರುದ್ಧ ಅತಿವೇಗದ ವಾಹನ ಚಾಲನೆ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕಾಗಿ ದೋಷಾರೋಪ ಪಟ್ಟಿ ಸಲ್ಲಿಸಿದ್ದನ್ನು ಹೊರತುಪಡಿಸಿದರೆ ತನಿಖೆ ಪ್ರಗತಿ ಕಂಡಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.

ತನಿಖಾ ಸಂಸ್ಥೆ ಅಭಿಪ್ರಾಯಪಟ್ಟಿರುವಂತೆ ಇದು ಸರಳ ಅಪಘಾತ ಪ್ರಕರಣವಲ್ಲ ಎಂಬುದು  ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತನಿಖಾ ಸಂಸ್ಥೆಯಾಗಿರುವ ಬೆಂಗಳೂರಿನ ಸಿಐಡಿ ನಡೆಸಿದ ತನಿಖೆ ಬಗ್ಗೆ ನಮಗೆ ಯಾವುದೇ ತೃಪ್ತಿ ಇಲ್ಲ. ಸತ್ಯ ಹೊರಬರಬೇಕು ಎಂದು ಹೇಳಿದ ಕೋರ್ಟ್‌ ವಿದ್ಯಾರ್ಥಿ ವಿರುದ್ಧದ ಆರೋಪ ಪಟ್ಟಿಯನ್ನು ರದ್ದುಗೊಳಿಸಿತು.

ಅಪಘಾತದಿಂದ ಸಾವು ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮೃತ ವಿದ್ಯಾರ್ಥಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದನ್ನು ಪ್ರಶ್ನಿಸಿ ಮತ್ತು ಸಿಬಿಐ ತನಿಖೆ ಕೋರಿ ವಿದ್ಯಾರ್ಥಿಯ ತಂದೆ ತಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ಛಾಯಾಚಿತ್ರ ಮತ್ತಿತರ ದಾಖಲೆಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್‌ ಇದು ಮೇಲ್ನೋಟಕ್ಕೆ ಸರಳ ಅಪಘಾತ ಪ್ರಕರಣವಲ್ಲ. ಸಿಐಡಿ ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾದ ಕಾರಣ ಸಂಪೂರ್ಣ ಮತ್ತು ಸರಿಯಾದ ತನಿಖೆ ಕೈಗೊಳ್ಳಬೇಕು. “ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಅಧಿಕಾರ ಚಲಾಯಿಸಿ ಪ್ರಕರಣದ ತನಿಖೆಯನ್ನು ಬೆಂಗಳೂರಿನ ಸಿಬಿಐಗೆ ವರ್ಗಾಯಿಸಲು ಇದು ಸೂಕ್ತವಾದ ಪ್ರಕರಣವಾಗಿದೆ” ಎಂದು ಆದೇಶಿಸಿತು. ಪ್ರತಿ ಎರಡು ತಿಂಗಳಿಗೊಮ್ಮೆ ಕರ್ನಾಟಕ ಹೈಕೋರ್ಟ್‌ಗೆ ತನಿಖೆಯ ಪ್ರಗತಿಯ ಸ್ಥಿತಿಗತಿ ವರದಿಯನ್ನು ಸಿಬಿಐ ಸಲ್ಲಿಸಬೇಕು. ತಂದೆ ನ್ಯಾಯಕ್ಕಾಗಿ ಕಾಯುತ್ತಿರುವ ಕಾರಣ ಸಿಬಿಐ ತನ್ನ ತನಿಖೆಯನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಪೀಠ ಸೂಚಿಸಿದೆ.

ಏನಿದು ಅಪಘಾತ ವಿದ್ಯಮಾನ
ಮಂಗಳೂರಿನ ಮೆಡಿಕಲ್‌ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದ ರೋಹಿತ್‌ ಶವ ಶಿರವಿಲ್ಲದ ಸ್ಥಿತಿಯಲ್ಲಿ ಸಿಕ್ಕಿತ್ತು. ಆತ ತಡರಾತ್ರಿ ಗೆಳೆಯರೊಂದಿಗೆ ರೋಹಿತ್‌ ಬೀಚ್‌ಗೆ ಹೊರಟಿದ್ದ. ಗೆಳೆಯರು ನಗರದ ಹೋಟೆಲ್‌ ಒಂದರಲ್ಲಿ ಬಿರಿಯಾನಿ ಮತ್ತಿತರ ವಸ್ತುಗಳನ್ನು ಖರೀದಿಸಿದ್ದರು. ಸ್ನೇಹಿತರಿಬ್ಬರು ಬೇರೆ ಬೈಕ್‌ನಲ್ಲಿ ಹಿಂದಿನಿಂದ ಬರುತ್ತಿದ್ದರು. ರೋಹಿತ್ ಮುಂದೆ ಸಾಗಿದ್ದ. ರೋಹಿತ್‌ ಮೊಬೈಲ್‌ ತೆಗೆದುಕೊಂಡು ಹೋಗದ ಕಾರಣ ಗೆಳೆಯರ ಸಂಪರ್ಕಕ್ಕೆ ಬಂದಿರಲಿಲ್ಲ.‌ ಮರುದಿನ ಬೆಳಿಗ್ಗೆ ದುರ್ಘಟನೆ ಬೆಳಕಿಗೆ ಬಂದಿತ್ತು.

ಅಪಘಾತವಾದ ಸ್ಥಳದಿಂದ ಬೈಕ್‌ ಮತ್ತು ದೇಹ ಹಲವು ಮೀಟರ್‌ ದೂರಕ್ಕೆ ಹಾರಿದ್ದವು. ಎರಡು ಮರಗಳಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು. ದೇಹ ಮರಕ್ಕೆ ತಾಗಿ ಜರ್ಝರಿತವಾಗಿತ್ತು. ಶಿರ ದೇಹದಿಂದ ಬೇರ್ಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದರು.  ಅಂದಿನ ನಗರ ಪೊಲೀಸ್‌ ಕಮಿಷನರ್‌ ಆರ್‌ ಹಿತೇಂದ್ರ ತನಿಖೆಗೆ ಮಾರ್ಗದರ್ಶನ ನೀಡಿದ್ದರು. ಅತಿವೇಗದ ಹೊರತಾಗಿ ದುರ್ಘಟನೆಗೆ ಬೇರೆ ಕಾರಣಗಳಿಲ್ಲ ಎಂದು ಸ್ಥಳೀಯ ಪೊಲೀಸರು ಅಭಿಪ್ರಾಯಪಟ್ಟಿದ್ದರು.

ರೋಹಿತ್‌ ಅವರ ತಂದೆ ಎಂ ಎಸ್‌ ರಾಧಾಕೃಷ್ಣನ್‌ ವೃತ್ತಿಯಿಂದ ವಕೀಲರಾಗಿದ್ದು ಅವರ ತಾಯಿ ಬಹ್ರೈನ್‌ನಲ್ಲಿ ವೈದ್ಯೆ. ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ರಾಧಾಕೃಷ್ಣನ್‌ ಹೆಚ್ಚಿನ ತನಿಖೆಗೆ ಒತ್ತಾಯಿಸಿದ್ದರು. ಬಳಿಕ ಸಿಐಡಿ ತನಿಖೆಯ ನೇತೃತ್ವ ವಹಿಸಿತ್ತು. ಆದರೆ ಸಿಐಡಿ ತನಿಖಾ ವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ರಾಧಾಕೃಷ್ಣನ್‌ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಸಲ್ಲಿಸಿದ್ದರು. ಇದನ್ನು ಸುಪ್ರೀಂಕೋರ್ಟ್‌ ಪರಿಗಣಿಸಿತ್ತು.

Exit mobile version