ಬೆಂಗಳೂರು: ಆಗಿಂದಾಗ್ಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ಅದರ ಸಚಿವರು ಹಾಗೂ ಸ್ವತಃ ಪ್ರಧಾನಿ ಮೋದಿಯನ್ನು ಟೀಕೆ ಮಾಡುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಇದೀಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಸೋವಿಯೆತ್ ಯೂನಿಯನ್ ಸಮಯದ ಲೇಬರ್ ಕ್ಯಾಂಪ್‌ಗಳಿಗೆ ಹೋಲಿಕೆ ಮಾಡಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಈ ಹಿಂದೆ ಸಚಿವರಾಗಿದ್ದವರು, ಬಿಜೆಪಿ ಹಿರಿಯ ನಾಯಕರೆನ್ನಿಸಿಕೊಂಡವರು. ಆದರೆ ಪ್ರಧಾನಿ ಮೋದಿಯವರ ಕಾರ್ಯಶೈಲಿ ಕುರಿತು ಕಳೆದ ಮೂರ್ನಾಲ್ಕು ವರ್ಷಗಳಿಂದ ನೇರವಾಗಿ ದಾಳಿ ನಡೆಸುತ್ತಿದ್ದಾರೆ. ಪ್ರಮುಖವಾಗಿ ಟ್ವಿಟರ್‌ನಲ್ಲಿ ಆಗಿಂದಾಗ್ಗೆ ಕಾಲೆಳೆಯುತ್ತಿರುತ್ತಾರೆ. ಕಳೆದ ಒಂದೆರಡು ವರ್ಷದಿಂದ ಸುಬ್ರಮಣಿಯನ್ ಸ್ವಾಮಿ ಕಣ್ಣು, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೇಲೆ ಬಿದ್ದಿದೆ.
2021ರಲ್ಲಿ ಟ್ವೀಟ್ ಮಾಡಿದ್ದ ಸುಬ್ರಮಣಿಯನ್ ಸ್ವಾಮಿ, ಹೋಟೆಲ್ ವೇಟರ್ ರೀತಿ ಬಟ್ಟೆ ತೊಡುವ ಎಸ್. ಜೈಶಂಕರ್ ಅವರನ್ನು ಲಂಡನ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ, ಇದು ಅಸತ್ಯವಾದರೆ ದಯವಿಟ್ಟು ತಿಳಿಸಿ ಎಂದು ಕಾಲೆಳೆದಿದ್ದರು.
೨೦೨೨ರ ಜೂನ್‌ನಲ್ಲಿ ಟ್ವೀಟ್ ಮಾಡಿ, ರಷ್ಯಾದಿಂದ ಶೇ. 25 ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದ್ದೇವೆ ಎಂದು ಜೈಶಂಕರ್ ಹೇಳಿದ್ದು, ಇದು ಶೇ.1 ಮೀರುವುದಿಲ್ಲ ಎನ್ನುವುದಿಲ್ಲ ಎಂಬ ಕುರಿತು ಜೈಶಂಕರ್ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ | ವಿಸ್ತಾರ TOP 10 NEWS | ಬೊಮ್ಮಾಯಿ ಸಿಎಂ ಸೀಟು ಭದ್ರದಿಂದ ಜೈಶಂಕರ್ ಅವರ ಸಿಂಪ್ಲಿಸಿಟಿವರೆಗೆ ಪ್ರಮುಖ ಸುದ್ದಿಗಳಿವು
ಇದೀಗ ಜೈಶಂಕರ್ ಮೇಲಿನ ದಾಳಿಯನ್ನು ಸುಬ್ರಮಣಿಯನ್ ಸ್ವಾಮಿ ಮುಂದುವರಿಸಿದ್ದಾರೆ. ಎಸ್. ಜೈಶಂಕರ್ ಅವರಿಗೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಪಕ್ಷವನ್ನು ಬಲವರ್ಧನೆ ಮಾಡುವಂತೆ ಉಸ್ತುವಾರಿ ನೀಡಲಾಗಿದೆ. ಇತ್ತೀಚೆಗಷ್ಟೆ ಕ್ಷೇತ್ರಕ್ಕೆ ಆಗಮಿಸಿದ ಜೈಶಂಕರ್, ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಜತೆಗೂಡಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರ, ವಿವಿಧ ಪಕ್ಷಗಳ ನಾಯಕರ ಪಕ್ಷ ಸೇರ್ಪಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಸೋವಿಯೆತ್ ಮಾದರಿ ಕಳಿಸಲಾಗಿದೆಯೇ?
ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಏಕೆ ವಹಿಸಿದೆ? ಸೋವಿಯೆತ್ ಯೂನಿಯನ್ ಮಾದರಿಯಲ್ಲಿ ಸೈಬೀರಿಯಾಕ್ಕೆ ಕಳಿಸುವ ರೀತಿಯೇ ಇದು? ಎಂದು ಪ್ರಶ್ನಿಸಿದ್ದಾರೆ.
ಎರಡನೇ ವಿಶ್ವ ಯುದ್ಧದ ಸಮಯದಲ್ಲಿ, ರಾಜಕೀಯ ಕೈದಿಗಳು, ಇತರೆ ಅಪರಾಧಿಗಳೆಲ್ಲರನ್ನೂ ಸೈಬೀರಿಯಾಕ್ಕೆ ಅಟ್ಟುತ್ತಿದ್ದರು. ಅಲ್ಲಿನ ಗುಲಾಗ್ ಸೇರಿ ವಿವಿಧ ಲೇಬರ್ ಕ್ಯಾಂಪ್‌ಗಳಲ್ಲಿರಿಸಿ ಶಿಕ್ಷೆ ನೀಡುತ್ತಿದ್ದರು. ಸೈಬೀರಿಯಾಕ್ಕೆ ಹೋಗುವುದು ಎಂದರೆ ಚಿತ್ರಹಿಂಸೆ ಅನುಭವಿಸುವುದು ಎನ್ನುವುದು ಖಾತ್ರಿಯಾಗಿತ್ತು.
ಇದೀಗ ಜೈಶಂಕರ್ ಅವರನ್ನು ಪನಿಷ್‌ಮೆಂಟ್ ನೀಡಿ ಬೆಂಗಳೂರು ಗ್ರಾಮಾಂತರಕ್ಕೆ ಅಟ್ಟಲಾಗಿದೆ ಎಂಬ ಅರ್ಥದಲ್ಲಿ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಸ್ವಾಮಿ ಮಾತಿನಿಂದ ಟ್ವಿಟರ್ ಬಳಕೆದಾರರು ಪರಸ್ಪರ ಕಾದಾಡಿಕೊಳ್ಳುತ್ತಿದ್ದಾರೆ. ಕನಕಪುರವನ್ನು ಯಾರು ಆಳುತ್ತಾರೆ, ಅವರು ವಿರೋಧಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಗೊತ್ತೇ? ಎಂದು ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಕುರಿತು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, ತಾವು ಕನಕಪುರ ನಿವಾಸಿಯಾಗಿದ್ದು, ನೀವು ಹೇಳುವಂತಹ ಕೆಟ್ಟ ಪರಿಸ್ಥಿತಿ ಅಲ್ಲಿ ಇಲ್ಲ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | ಭಾರತಕ್ಕೆ ಸಮಸ್ಯೆ ಆದಾಗ ನೀವೆಲ್ಲಿದ್ದಿರಿ? ಯುರೋಪ್‌ಗೆ ಪಾಠ ಮಾಡಿದ ಜೈಶಂಕರ್