ಬೆಂಗಳೂರು: ಸಜ್ಜನಿಕೆ, ಸಮಾಜ ಸೇವೆಗಳ ಮೂಲಕ ಎಲ್ಲರ ಪ್ರೀತಿಪಾತ್ರರಾಗಿರುವ ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಮೈಸೂರು ರಾಜ ಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಮುಂದೆ ಮಂಡಿಯೂರಿ ನಮಸ್ಕರಿಸುತ್ತಿರುವ ಭಾವಚಿತ್ರವೊಂದು ಈಗ ಭಾರಿ ಸುದ್ದಿಯಲ್ಲಿದೆ. ಸುಧಾ ಮೂರ್ತಿಯಂಥವರು ರಾಜಮನೆತನದವರ ಮುಂದೆ ಈ ರೀತಿಯಾಗಿ ನಮಸ್ಕರಿಸುವುದು ಸರಿಯೇ, ರಾಜ ಮನೆತನದವರು ಎಂದ ಮಾತ್ರಕ್ಕೆ ಈಗಲೂ ಅಷ್ಟೆಲ್ಲ ಗೌರವ ಕೊಡಬೇಕಾ ಎಂಬ ಬಗ್ಗೆ ನೆಟ್ಟಿಗರ ಮಧ್ಯೆ ಚರ್ಚೆ ನಡೆಯುತ್ತಿದೆ. ಪರ ಮತ್ತು ವಿರುದ್ಧವಾಗಿ ಸಾಕಷ್ಟು ಅಭಿಪ್ರಾಯಗಳು ದಾಖಲಾಗಿವೆ. ಹೆಚ್ಚಿನವರು ಇದರಲ್ಲಿ ಏನು ತಪ್ಪು ಎಂದು ಪ್ರಶ್ನಿಸುವ ಮೂಲಕ ಸುಧಾ ಮೂರ್ತಿಯವರ ನಡವಳಿಕೆಗೆ ಸಹಮತ ಸೂಚಿಸಿದ್ದಾರೆ. ಕೆಲವರು ಇದನ್ನು ಕಟುವಾಗಿ ಪ್ರಶ್ನಿಸಿದ್ದಾರೆ.
ಈ ಚರ್ಚೆ ಶುರುವಾಗಿದ್ದು ಟ್ವಿಟರ್‌ನಲ್ಲಿ. ಗುರುಪ್ರಸಾದ್ ಡಿ. ಎನ್. ಎಂಬುವರು ತಮ್ಮ ಮಗುವಿನ ಹೋಮ್ ವರ್ಕ್ ಶೀಟ್ ಟ್ವೀಟ್ ಮಾಡಿದ್ದರು. ಅದರಲ್ಲಿ I —— to the King ಎನ್ನುವ ಒಂದು ಪ್ರಶ್ನೆ ಇದೆ. ಇಂಥ ಪ್ರಜಾಸತ್ತಾತ್ಮಕವಲ್ಲದ ಬೋಧನೆಗಳ ಬಗ್ಗೆ ಶಾಲೆಗಳು ಸ್ವಲ್ಪ ಜಾಗೃತೆ ವಹಿಸಬೇಕು. ಇವು ಮಕ್ಕಳ ಮನಸ್ಸಿನಲ್ಲಿ ತಪ್ಪು ಮೌಲ್ಯಗಳನ್ನು ತುಂಬುವ ಸಾಧ್ಯತೆ ಇದೆ ಎಂದು ಬರೆದಿದ್ದರು.
ಈ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಎಸ್. ಶ್ಯಾಮ್ ಪ್ರಸಾದ್ ಅವರು ಸುಧಾಮೂರ್ತಿ ಅವರು ಪ್ರಮೋದಾದೇವಿ ಒಡೆಯರ್ ಅವರ ಮುಂದೆ ಮಂಡಿಯೂರಿ ನಮಸ್ಕರಿಸುವ ಫೋಟೊವನ್ನು ಟ್ವೀಟ್ ಮಾಡಿದ್ದರು. ಅದು ಸಾಕಷ್ಟು ಚರ್ಚೆಗೆ ಕಾರಣವಾಯಿತು.
ಸುಧಾ ಮೂರ್ತಿ ಅವರ ಈ ನಡವಳಿಕೆಯನ್ನು ಪ್ರಶಂಸಿಸಿದ ಶಾಂತರಾಜ್ ಎಂಬುವರು, ʻʻಸುಧಾ ಮೂರ್ತಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಪುಸ್ತಕಗಳು ಅನೇಕ ಮಹಿಳೆಯರಿಗೆ ಪ್ರೇರಣೆಯಾಯಿತು. ರಾಜಮನೆತನಕ್ಕೆ ಆಕೆಯ ಸಾಷ್ಟಾಂಗ ಪ್ರಣಾಮವು ಭಾವನಾತ್ಮಕ ಅಭಿವ್ಯಕ್ತಿಯಾಗಿದೆʼʼ ಎಂದು ಹೇಳಿದ್ದಾರೆ.
ಬಳಿಕ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ʻʻಸುಧಾಮೂರ್ತಿ ಅವರು ಮೈಸೂರು ರಾಜಮನೆತನದ ಸದಸ್ಯರ ಮುಂದೆ ತಲೆ ಬಾಗಿ ನಮಸ್ಕರಿಸುವುದನ್ನು ನೋಡಿ. ಅವರು ನಮಗೆ ಮಾದರಿಯಾಗಬೇಕಿತ್ತುʼʼ ಎಂದು ಒಬ್ಬರು ಹೇಳಿದರು.
ರಾಜ ಮನೆತನದವರು ಎಂದ ಮಾತ್ರಕ್ಕೆ ಇಷ್ಟೆಲ್ಲ ಗೌರವ ಕೊಡಬೇಕಾ ಎನ್ನುವ ವಿಚಾರದಲ್ಲಿ ನೆಟ್ಟಿಗರ ಮಧ್ಯೆ ಭಿನ್ನ ಅಭಿಪ್ರಾಯಗಳು ಒಡಮೂಡಿದವು. ವರುಣ್ ಎಂಬವರು ಸುಧಾ ಮೂರ್ತಿ ಅವರನ್ನು ಬಲವಾಗಿ ಸಮರ್ಥಿಸಿ, ʻಇದು ನಮ್ಮ ಸಂಸ್ಕೃತಿ. ಕುಟುಕುಟು ಕುಟ್ಟುವ ಪತ್ರಕರ್ತರಿಗೆ ಇದು ಅರ್ಥವಾಗುವುದಿಲ್ಲ. ವಯಸ್ಸು, ಅಂತಸ್ತು, ಹುದ್ದೆಗಳ ಹಂಗಿಲ್ಲದೆ ಪ್ರತಿಯೊಬ್ಬರೂ ರಾಜಮಾತೆಗೆ ನಮಸ್ಕರಿಸುತ್ತಾರೆ. ಅವರ ಸಂಸ್ಕೃತಿ ಅವರಿಗೆ ಅದನ್ನು ಕಲಿಸಿದೆʼʼ ಎಂದು ಬರೆದಿದ್ದಾರೆ. ಆದರೆ, ಇನ್ನೊಬ್ಬರು ʻʻಗುಲಾಮಿ ಸಂಸ್ಕೃತಿ ಆಳವಾಗಿ ಬೇರೂರಿದೆʼ ಎಂದು ಕುಟುಕಿದರು.
ರಾಮಭಕ್ತ ಎನ್ನುವ ಹ್ಯಾಂಡಲ್‌ನಿಂದ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು ʻʻದಲಿತ ಕಾರ್ಯಕರ್ತರಿಗೆ ಯಾಕೆ ಮೈಸೂರು ಒಡೆಯರ್ ಮೇಲೆ ಇಷ್ಟೊಂದು ಅಸಹನೆʼʼ ಎಂದು ಕೇಳಿದ್ದಾರೆ. ಅದಕ್ಕೆ ವಿನಯ್ ಕೆ.ಎಸ್. ಎಂಬುವರು ಪ್ರತಿಕ್ರಿಯಿಸಿ, ʻನೀವು ಹೇಳೋದೇನು? ಈ ರೀತಿ ರಾಜಮನೆತನದವರ ಮುಂದೆ ಮಂಡಿಯೂರುವುದು ಸರಿಯೇʼ ಎಂದು ಕೇಳಿದ್ದಾರೆ. ಇದಕ್ಕೆ ಇನ್ನೊಬ್ಬರು ಪ್ರತಿಕ್ರಿಯೆ ನೀಡಿ, ʻʻಅದು ಅವರ ವೈಯಕ್ತಿಕ ಆಯ್ಕೆ. ಅವರೇನು ನೀವು ಯಾರ ಮುಂದಾದರೂ ಮಂಡಿಯೂರಿ ನಮಸ್ಕರಿಸಿ ಎಂದು ಹೇಳಿದ್ದಾರಾʼ ಎಂದು ಪ್ರಶ್ನಿಸಿದ್ದಾರೆ.
ʻʻಹಳೆ ಮೈಸೂರು ಪ್ರಾಂತ್ಯದ ಜನರಿಗೆ ರಾಜ ಮನೆತನದ ಮೇಲೆ ಅಪಾರವಾದ ಗೌರವವಿದೆ. ರಾಣಿಗೆ ತಲೆಬಾಗುವುದು ಸಾಮಾನ್ಯ ಪದ್ಧತಿʼ ಎಂದಿದ್ದಾರೆ ಸುಬ್ಬು ಅಯ್ಯರ್ ಎಂಬವರು. ಇದಕ್ಕೆ ಇನ್ನೊಬ್ಬರು ʻಊಳಿಗಮಾನ್ಯ ಸಿರಿವಂತರುʼʼ ಎಂದರು.
ಸುಧಾ ಮೂರ್ತಿ ಪರ ಪ್ರಬಲ ವಾದ
ಈ ನಡುವೆ, ನಾನಾ ಜಾಲತಾಣಗಳಲ್ಲಿ ಈ ವಿಷಯ ಚರ್ಚೆಯನ್ನು ಹುಟ್ಟುಹಾಕಿದೆ. ʻʻರಾಜ ಮನೆತನದವರ ಮುಂದೆ ಈ ದೇಶದ ಪ್ರಧಾನಿಯಾದರೂ ತಲೆ ಬಾಗಲೇಬೇಕು. ಅದು ಮನೆತನಕ್ಕೆ ಕೊಡುವ ಗೌರವʼʼ ಎನ್ನುವ ಅಭಿಪ್ರಾಯ ಹೆಚ್ಚಿನವರದ್ದು. ಒಬ್ಬ ಸಾಮಾನ್ಯ ಮಹಿಳೆ ಇಷ್ಟು ಎತ್ತರಕ್ಕೆ ಬೆಳೆದಿರುವುದೇ ಇಂಥ ದೊಡ್ಡ ಗುಣದಿಂದ ಎಂದಿದ್ದಾರೆ ಇನ್ನೊಬ್ಬರು. ʻತಲೆ ಬಾಗಿರುವುದು ನಮ್ಮ ಸಂಸ್ಕೃತಿ ಮತ್ತು ಸುಧಾ ಮೂರ್ತಿ ಅವರ ನಡವಳಿಕೆಯನ್ನು ತೋರಿಸುತ್ತದೆ.. ಇದರ ಬಗ್ಗೆ ಚರ್ಚೆಯೇ ಬೇಕಾಗಿಲ್ಲʼʼ ಎನ್ನುವುದು ಇನ್ನೊಬ್ಬರ ಅಭಿಮತ.
ಈ ಫೋಟೊ ಹೊಸದಲ್ಲ, ಮೂರು ವರ್ಷ ಹಳೆಯದು
ಅಂದ ಹಾಗೆ, ಈ ಫೋಟೊ ಮೂರು ವರ್ಷ ಹಳೆಯದು. ೨೦೧೯ರ ಜುಲೈ ೧೮ರಂದು ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ವಿದ್ಯಮಾನ ನಡೆದಿದೆ. ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸಮಾರಂಭ ಮೈಸೂರು ಅರಮನೆಯ ದರ್ಬಾರ್ ಹಾಲ್‌ನಲ್ಲಿ ನಡೆದಿತ್ತು. ಅಂದು ಒಂಬತ್ತು ಮಂದಿ ಸಾಧಕರಿಗೆ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಾದವರಲ್ಲಿ ಒಬ್ಬರಾದ ಸುಧಾ ಮೂರ್ತಿ ಅವರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರಿಂದ ಆಶೀರ್ವಾದವನ್ನು ಪಡೆಯುತ್ತಿರುವ ದೃಶ್ಯ ಇದು ಎಂದು ದಾಖಲಾಗಿದೆ.
ತಲೆ ಬಾಗುವುದು ಮೂರ್ತಿ ಕುಟುಂಬ ಸಜ್ಜನಿಕೆ
ಸುಧಾ ಮೂರ್ತಿ ಅವರು ಅತ್ಯಂತ ವಿನಮ್ರ ನಡವಳಿಕೆಯನ್ನು ಹೊಂದಿದವರಾಗಿದ್ದು, ಮಕ್ಕಳನ್ನೂ ಗೌರವದಿಂದಲೇ ಕಾಣುತ್ತಾರೆ. ಹಿರಿಯರೆಂದರೆ ಅತ್ಯಂತ ವಿನೀತ ಭಾವ. ಶ್ರದ್ಧೆಯಿಂದ ಕೈಮುಗಿಯುವುದು, ನಮಸ್ಕರಿಸುವುದು ಅವರಿಗೆ ರೂಢಿ. ಇದಕ್ಕೆ ಅವರ ಪತಿ, ಇನ್ಫೋಸಿಸ್ ಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿಯವರೂ ಹೊರತಲ್ಲ. ಅವರು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ರತನ್ ಟಾಟಾ ಅವರಿಗೆ ಬಾಗಿ ನಮಸ್ಕರಿಸಿದ್ದರು.
ಸ್ವತಃ ಅಮಿತಾಭ್ ಅವರೇ ಸುಧಾ ಮೂರ್ತಿಗೆ ನಮಸ್ಕರಿಸಿದ್ದರು
ಸುಧಾ ಮೂರ್ತಿ ಅವರು ಹಲವರಿಗೆ ತಲೆ ಬಾಗಿದರೆ ಅವರ ಮುಂದೆ ತಲೆಬಾಗುವವರಿಗೇನೂ ಕಡಿಮೆ ಇಲ್ಲ. ಅವರಲ್ಲಿನ ಒಳ್ಳೆಯತನ, ಅವರು ತೋರುವ ಪ್ರೀತಿ, ನಡವಳಿಕೆ, ವಿನಮ್ರತೆಗಳನ್ನು ಕಂಡು ಸ್ವತಃ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೇ ಕಾಲಿಗೆ ನಮಸ್ಕರಿಸಿದ್ದರು. ಸುಧಾ ಮೂರ್ತಿ ಅವರು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಅಮಿತಾಭ್ ಅವರು ತೋರಿದ ಅತ್ಯುನ್ನತ ಗೌರವ ಇದಾಗಿತ್ತು.
ಇದನ್ನೂ ಓದಿ | ಹಳ್ಳಿ ಮಕ್ಕಳ ಜತೆ ಮಗುವಂತಾದ ಸುಧಾಮೂರ್ತಿ