Site icon Vistara News

Sugar Factory | ಮಂಡ್ಯ ಜನರ ಕನಸು ನನಸು; ಮೈಶುಗರ್ ಕಾರ್ಖಾನೆಗೆ ಕಾಯಕಲ್ಪ

sugar factory

ಮಂಡ್ಯ: ಜಿಲ್ಲೆಯ ಜನರ ಜೀವನಾಡಿ ಮೈ ಶುಗರ್ ಕಾರ್ಖಾನೆ (Sugar Factory) ಪುನಾರಂಭಕ್ಕೆ ಶುಭ ಗಳಿಗೆ ಕೂಡಿ ಬಂದಿದ್ದು, ಗುರುವಾರ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ. ಗೋಪಾಲಯ್ಯ ಮತ್ತು ರೇಷ್ಮೆ, ಯುವ ಸಬಲೀಕರಣ, ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು.

ನಾಲ್ಕೈದು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈ ಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಸರ್ಕಾರಿ ಸ್ವಾಮ್ಯದಲ್ಲೇ ನಡೆಸಲು ಸರ್ಕಾರ ನಿರ್ಧರಿಸಿತ್ತು. ಅದರಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮೈಶುಗರ್ ಕಾರ್ಖಾನೆ ಪುನಶ್ಚೇತನಗೊಳಿಸಲಾಗುತ್ತಿದ್ದು, ಮೊದಲ ಹೆಜ್ಜೆಯಾಗಿ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಗಿದೆ‌ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು.

ಇದನ್ನೂ ಓದಿ | ಚೀನಾದಂತೆ ಭಾರತ ಜಗತ್ತಿನ ಕಾರ್ಖಾನೆಯಾಗಬೇಕಾದ ಅವಶ್ಯಕತೆ ಈಗ ಇಲ್ಲ!

ತುಕ್ಕು ಹಿಡಿಯುವ ಹಂತಕ್ಕೆ ತಲುಪಿದ್ದ ಕಾರ್ಖಾನೆ

ಮಂಡ್ಯದಲ್ಲಿ ಮೈಶುಗರ್ ಕಾರ್ಖಾನೆ ತುಕ್ಕುಹಿಡಿಯುವ ಹಂತಕ್ಕೆ ತಲುಪಿತ್ತು. ಹಿಂದಿನ ಸರ್ಕಾರಗಳು ಇದರ ಪುನಶ್ಚೇತನಕ್ಕೆ ಮನಸ್ಸು ಮಾಡಿರಲಿಲ್ಲ. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಂಡ್ಯ ಭಾಗದ ಜನರ ಕನಸುಗಳಿಗೆ, ಭಾವನೆಗಳಿಗೆ ಸ್ಪಂದಿಸಿ ಮೈಶುಗರ್ ಕಾರ್ಖಾನೆಗೆ ಕಾಯಕಲ್ಪ ನೀಡಲಾಗಿದೆ. ಎಲ್ಲರ ಸಹಕಾರದಿಂದ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡಲಾಗಿದೆ ಎಂದರು.

ಶೀಘ್ರದಲ್ಲೇ ಕಬ್ಬು ಅರೆಯಲು ಪ್ರಾರಂಭಿಸಿ, ರೈತರಿಗೆ ಅನುವು ಮಾಡಿಕೊಡುತ್ತೇವೆ. ಫ್ಯಾಕ್ಟರಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸಚಿವ ಕೆ.ಗೋಪಾಲಯ್ಯ ಅವರು ಹೇಳಿದರು.

ಸಮಾರಂಭದಲ್ಲಿ ಸಂಸದೆ ಸುಮಲತಾ, ಶಾಸಕ ಶ್ರೀನಿವಾಸ್, ಮಾಜಿ ಪರಿಷತ್ ಸದಸ್ಯ ಶ್ರೀಕಂಠೇಗೌಡ, ಮೈಶುಗರ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಎಸ್ ಅಶ್ವಥಿ, ಎಸ್‌ಪಿ ಯತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ | ಬೇಡಿಕೆ ಈಡೇರಿಸಿದರೆ CMಗೆ ಶೇಂಗಾ ಹೋಳಿಗೆ ಊಟ, ಕಲ್ಲುಸಕ್ಕರೆ ತುಲಾಭಾರ!

Exit mobile version