ಧಾರವಾಡ: ಶಾಸಕರ ಹೆಸರಲ್ಲಿ ಡೆತ್‌ನೋಟ್ ಬರೆದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಶಕುಂತಲಾ ಮನಸೂರ ಎಂಬುವವರು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ (Suicide attempt) ಯತ್ನಿಸಿದವರು.
ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕಿರಿಯ ಸಹಾಯಕಿ ಆಗಿ ಕೆಲಸ ಮಾಡುತ್ತಿದ್ದ ಶಕುಂತಲಾ ಅವರನ್ನು ಲಂಚ ತೆಗೆದುಕೊಂಡ ಆರೋಪದ ಮೇಲೆ ಕಳೆದ ನಾಲ್ಕು ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಗಿತ್ತು.
ಸಚಿವ ಶ್ರೀರಾಮುಲು ಶನಿವಾರ ಧಾರವಾಡಕ್ಕೆ ಬಂದಾಗ, ಅಮಾನತು ತೆರವುಗೊಳಿಸುವಂತೆ ಮನವಿ ಕೊಡಲು ಮಹಿಳೆ ಬಂದಿದ್ದರು. ಶ್ರೀರಾಮುಲು ಸಿಗದೇ ಇದ್ದಾಗ ಧಾರವಾಡದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರಿಗೆ ಮನವಿ ಕೊಡಲು ಹೋಗಿದ್ದರು. ಈ ವೇಳೆ ಶಾಸಕರು ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಲಂಚ ಪಡೆದಿದ್ದರೆ ತನಿಖೆ ಮಾಡಲಿ
ಶಾಸಕರೇ ನನಗೆ ಕೆಲಸದಿಂದ ತೆಗೆಸಿದ್ದಾರೆ ಎಂದು ಶಕುಂತಲ ಾಆರೋಪ ಮಾಡಿದ್ದಾರೆ. ಲಂಚ ಪಡೆದಿದ್ದೇನೆ ಎಂದು ಕೆಲಸದಿಂದ ತೆಗೆದಿದ್ದಾರೆ. ಅದನ್ನು ತನಿಖೆ ಮಾಡಲಿ. ಲಂಚ ತೆಗೆದುಕೊಂಡಿದ್ದಿಯಾ ಎಂದು ಜನರ ಎದುರಿಗೆ ಶಾಸಕರು ನನಗೆ ಅಪಮಾನ ಮಾಡಿದ್ದಾರೆ. ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಮಹಿಳೆ ಆರೋಪಿಸಿದ್ದಾರೆ. ಡೆತ್‌ನೋಟ್‌ನಲ್ಲಿ ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿರುವ ರವಿ ಬೆಂತೂರ ಎಂಬುವವರ ಮೇಲೂ ಆರೋಪ ಮಾಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಶಕುಂತಲಾ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | ರೈತರ ಕೆಲಸಕ್ಕೆ ಆದ್ಯತೆ ಕೊಡಿ; ದಿಶಾ ಸಭೆಯಲ್ಲಿ ನಾಲ್ವರು ತಹಸೀಲ್ದಾರ್‌ಗೆ ಸಂಸದ ಡಿ.ಕೆ.ಸುರೇಶ್ ತರಾಟೆ