ಮೈಸೂರು: ನಗರದ ಟೆರೇಷಿಯನ್ ಕಾಲೇಜಿನ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಗಿರಿಜಾ ಲಕ್ಷ್ಮಿ(19) ಮೃತ ವಿದ್ಯಾರ್ಥಿನಿ.
ನಗರದ ಪೊಲೀಸ್ ವಿಶೇಷ ವಿಭಾಗದ ಸಹಾಯಕ ಸಬ್ ಇನ್ಸ್ಪೆಕ್ಟರ್ ಗೋಪಿನಾಥ್ ಅವರ ಪುತ್ರಿಯಾದ ಈಕೆ, ನಗರದ ಟೆರೇಷಿಯನ್ ಕಾಲೇಜಿನಲ್ಲಿ ಪ್ರಥಮ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು. ಜಲಪುರಿ ಪೊಲೀಸ್ ವಸತಿಗೃಹದ ಸಿ.ಬ್ಲಾಕ್ ನಲ್ಲಿ ಗೋಪಿನಾಥ್ ನೆಲೆಸಿದ್ದು, ಭಾನುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೆಲಸದ ನಿಮಿತ್ತ ಹೊರಹೋಗಿದ್ದ ಮನೆಯವರು ಸಂಜೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರ ವೇಳೆಗೆ ಯುವತಿ ಕೊನೆಯುಸಿರೆಳೆದಿದ್ದಳು.
ಗಿರಿಜಾ ಲಕ್ಷ್ಮಿಯ ಮೃತದೇಹ ಕೆ.ಆರ್.ಆಸ್ಪತ್ರೆಯಲ್ಲಿ ಇದ್ದು, ಸೋಮವಾರ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಈ ಸಂಬಂಧ ನಜರ್ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐದು ದಿನಗಳ ಹಿಂದಷ್ಟೇ ಗೋಪಿನಾಥ್ ಅವರ ಅಣ್ಣ ವಿಧಿವಶರಾಗಿದ್ದರು. ಇದೀಗ ಈ ದುರಂತ ನಡೆದಿದೆ.
ಇದನ್ನೂ ಓದಿ | Honeytrap Case | ಬೆತ್ತಲೆ ಫೋಟೊ, ವಿಡಿಯೊ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದವಳು ಅರೆಸ್ಟ್