Site icon Vistara News

Suicide Case | ಶಾಸಕ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು, ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Suicide Case

ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ನೆಟ್ಟಿಗೆರೆ ಗ್ರಾಮದ ಬಳಿ ತಲೆಗೆ‌ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದು, ಡೆತ್‌ ನೋಟ್‌ನಲ್ಲಿ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಸೇರಿ 6 ಮಂದಿ ಹೆಸರು ಉಲ್ಲೇಖಿಸಲಾಗಿದೆ.

ಬೆಂಗಳೂರಿನ ಎಚ್ಎಸ್‌ಆರ್ ಲೇಔಟ್ ನಿವಾಸಿ ಪ್ರದೀಪ್ (47) ಆತ್ಮಹತ್ಯೆ ಮಾಡಿಕೊಂಡವರು. ಅವರು ನೆಟ್ಟಿಗೆರೆ ಗ್ರಾಮದ ಬಳಿ ಕಾರಿನಲ್ಲಿ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಕಾರಿನಲ್ಲಿ ಡೆತ್ ನೋಟ್ ಸಿಕ್ಕಿದ್ದು, ಪ್ರಭಾವಿ ರಾಜಕಾರಣಿ, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ‌ಹೆಸರು‌ ಸೇರಿ ಆರು ಜನರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

4 ರಿಂದ 5 ಜನರ ಜತೆಗೂಡಿ ಕ್ಲಬ್ ಆರಂಭಿಸಲು ಪ್ರದೀಪ್ ಮಾತುಕತೆ ನಡೆಸಿ, ಸಾಕಷ್ಟು ಹಣ ನೀಡಿದ್ದ ಎನ್ನಲಾಗಿದೆ. ಆದರೆ ಪಾಲುದಾರರು ಕ್ಲಬ್ ಆರಂಭಿಸಲು ಹಿಂದೇಟು ಹಾಕಿದ್ದು, ನಂತರ ಹಣವನ್ನೂ ನೀಡದೆ ಸತಾಯಿಸಿದ್ದಾರೆ. ಇದರಿಂದ ಪಾರ್ಟ್‌ನರ್ಸ್ ಹಾಗೂ ಪ್ರದೀಪ್ ನಡುವೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಲು ಶಾಸಕ ಅರವಿಂದ ಲಿಂಬಾವಳಿ ಮುಂದಾಗಿದ್ದರು ಎನ್ನಲಾಗಿದೆ.

ರಾಜಕಾರಣಿ ಮಾತಿಗೆ ಒಪ್ಪಿಕೊಂಡಿದ್ದ ಪಾಲುದಾರರು ಹಣ ಮಾತ್ರ ನೀಡಿರಲಿಲ್ಲ. ಹೀಗಾಗಿ ಪ್ರದೀಪ್ ಸಾಕಷ್ಟು ನೊಂದಿದ್ದರು ಎಂದು ಹೇಳಲಾಗುತ್ತಿದೆ. ಆದ್ದರಿಂದ ಶನಿವಾರ ರಾತ್ರಿ ರಾಮನಗರಕ್ಕೆ ತೆರಳಿದ್ದ ಪ್ರದೀಪ್ ಭಾನುವಾರ ಕಾರಿನಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜಿ ವೇಳೆ ಕೆಲವು ತಿಂಗಳು ಕಾಲವಕಾಶ ಪಡೆದು 10 ಲಕ್ಷ ರೂ.ಗಳನ್ನು ಪ್ರತಿ ತಿಂಗಳು ನೀಡಲು ಪಾಲುದಾರರಿಗೆ ಶಾಸಕ ಸೂಚಿಸಿದ್ದರು. ಆದರೆ ಕೇವಲ ಒಂದು ತಿಂಗಳು ಹಣ ಪಾವತಿಸಿ ನಂತರ ಅವರು ಮೋಸ ಮಾಡಿದ್ದರು. ಈ ಮೋಸಕ್ಕೆ ಅರವಿಂದ ನಿಂಬಾವಳಿ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ, ಅವರ ಹೆಸರನ್ನು ಡೆತ್ ನೋಟ್‌ನಲ್ಲಿ ಬರೆದು ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | Road Accident | ಬಸ್‌- ಕಾರು ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದವರಿಗೆ ಗಂಭೀರ ಗಾಯ

Exit mobile version