Site icon Vistara News

Suicide Case | ಪ್ರೀತಿಸಿ ಮನೆ ಬಿಟ್ಟು ಹೋದಳು; ಮಾರ್ಯಾದೆಗೆ ಅಂಜಿದ ಅಪ್ಪ ಆತ್ಮಹತ್ಯೆ

ಮಂಡ್ಯ: ಮಗಳ ಪ್ರೀತಿಯೇ ತಂದೆ ಪ್ರಾಣಕ್ಕೆ ಉರುಳಾದ ಘಟನೆ ಕೆ.ಆರ್.ಪೇಟೆಯ ಬಿ.ಬಾಚಹಳ್ಳಿ ಗ್ರಾಮದಲ್ಲಿ ನಡೆದಿದೆ. ಐದು ದಿನಗಳ ಹಿಂದೆ ಮಗಳು ನಾಪತ್ತೆಯಾಗಿದ್ದಳು. ಅಯ್ಯೋ ನನ್ನ ಮಗಳು ಕಾಣಿಸುತ್ತಿಲ್ಲ ಎಂದು ಪರಿತಪಿಸಿದ್ದ ಅಪ್ಪ ಅವಳನ್ನು ಹುಡುಕದ ಜಾಗವಿಲ್ಲ. ವಿಚಾರಿಸದ ಸಂಬಂಧಿಕರಿಲ್ಲ. ಕೊನೆಗೆ ಆಕೆ ಪ್ರಿಯಕರನ ಜತೆ ಮದುವೆ ಆಗಿದ್ದಾಳೆಂಬ ವಿಷಯ ಕೇಳಿ ಆಘಾತಗೊಂಡಿದ್ದು, ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಿ.ಬಾಚನಹಳ್ಳಿ ಗ್ರಾಮದ ನಿವಾಸಿ ರವಿ (47) ನೇಣು ಬಿಗಿದು ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾರೆ. 5 ದಿನಗಳ ಹಿಂದೆ ಕೀರ್ತನಾ ಎಂಬಾಕೆ ನಾಪತ್ತೆಯಾಗಿದ್ದಳು. ಈ ಸಂಬಂಧ ರವಿ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ತಾವು ಕೂಡಾ ಹುಡುಕಾಟ ನಡೆಸಿದ್ದಾರೆ. ಆದರೆ, ಮಗಳ ಸುಳಿವು ಮಾತ್ರ ಸಿಕ್ಕಿರಲಿಲ್ಲ.

ಈ ಮಧ್ಯೆ ಬುಧವಾರ ಮಗಳು ಕಾಣೆಯಾಗಿಲ್ಲ, ಬದಲಿಗೆ ಮನೆ ಬಿಟ್ಟು ಹೋಗಿದ್ದು, ಆಕೆ ಪ್ರಿಯಕರ ಅಭಿ ಎಂಬ ಯುವಕನೊಂದಿಗೆ ಮದುವೆಯಾಗಿದ್ದಾಳೆ ಎಂಬ ವಿಷಯ ಗೊತ್ತಾಗಿದೆ. ಇದರಿಂದ ಆಘಾತಕ್ಕೊಳಗಾದ ರವಿ, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗ್ರಾಮಸ್ಥರ ಆಕ್ರೋಶ

ರವಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿದೆ. ಕೆ.ಆರ್.ಪೇಟೆ ಪೊಲೀಸ್ ಠಾಣೆ ಎದುರು ಮೃತದೇಹವನ್ನಿಟ್ಟು ಆಕ್ರೋಶ ಹೊರಹಾಕಿದ್ದಾರೆ. ಮನೆ ಬಿಟ್ಟು ಹೋದವರನ್ನು ಹಿಡಿದು ಸ್ಥಳಕ್ಕೆ ತರುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಬೆಂಗಳೂರು ಟ್ರಾಫಿಕ್​ನಲ್ಲಿ ಸಿಲುಕಿದ್ದಾಗ ಹುಟ್ಟಿದ ಪ್ರೀತಿ; ಈತನ ಲವ್​ಸ್ಟೋರಿಗೆ ಸಾಕ್ಷಿಯಾದ ಫ್ಲೈಓವರ್​​​ದು ಬದಲಾಗದ ಸ್ಥಿತಿ !

Exit mobile version