Site icon Vistara News

Sumalatha Ambareesh: ಬಿಜೆಪಿ ಸೇರಲು ಸುಮಲತಾ ಮೂರು ಕಂಡೀಷನ್;‌ ಪಕ್ಷ ಸೇರ್ಪಡೆ ಬಹುತೇಕ ಪಕ್ಕಾ?

Sumalatha Ambarish says her views are not connected with BIP

ಬೆಂಗಳೂರು: ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಷ್‌ (Sumalatha Ambareesh) ಬಿಜೆಪಿ ಸೇರುವುದು ಬಹುತೇಕ ಪಕ್ಕಾ ಆಗಿದೆ ಎಂದೇ ಹೇಳಲಾಗುತ್ತಿದೆ. ಇದರ ಭಾಗವಾಗಿ ಪಕ್ಷದ ಹಿರಿಯ ನಾಯಕ, ಮಾಜಿ ಸಿಎಂ ಎಸ್.‌ಎಂ. ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆಯನ್ನೂ ನಡೆಸಿದ್ದಾರೆ. ಅಲ್ಲದೆ, ಮಧ್ಯಾಹ್ನ ತಮ್ಮ ಬೆಂಬಲಿಗರ ಸಭೆಯನ್ನೂ ಕರೆದಿದ್ದು, ಅಲ್ಲಿ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳಲಿದ್ದಾರೆ. ಈ ನಡುವೆ ಅವರು ಬಿಜೆಪಿಗೆ ಸೇರಲು ಮೂರು ಷರತ್ತುಗಳನ್ನು ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಂಡೀಷನ್‌ಗಳಿಗೆ ಬಿಜೆಪಿ ಹೈಕಮಾಂಡ್‌ ಒಪ್ಪಿದ್ದರಿಂದಲೇ ಮಾತುಕತೆ ಈಗ ಚುರುಕುಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಬಿಜೆಪಿ ಈ ನಿಟ್ಟಿನಲ್ಲಿ ಸಖತ್‌ ರಾಜಕೀಯ ವರ್ಕೌಟ್‌ ಮಾಡುತ್ತಾ ಬಂದಿದೆ. ಇದರ ಭಾಗವಾಗಿ ಹಳೇ ಮೈಸೂರು ಭಾಗದ ಮೇಲೆ ಬಹಳವೇ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಇಲ್ಲಿ ಪಡೆಯುವ ಕ್ಷೇತ್ರಗಳು ಬಹುಮತದೊಂದಿಗೆ ಗದ್ದುಗೆ ಹಿಡಿಯಲು ನಿರ್ಣಾಯಕ ಎಂಬ ತೀರ್ಮಾನಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಪಕ್ಷದಲ್ಲಿರುವ ಅಸಮಧಾನಿತ ಶಾಸಕರನ್ನು ಸಹ ಬಿಜೆಪಿ ರಾಜ್ಯ ನಾಯಕರು ಭೇಟಿ ಮಾಡಿದ್ದರು. ಕೊನೆಗೆ ಸಂಸದೆ ಸುಮಲತಾ ಅವರನ್ನು ಪಕ್ಷದತ್ತ ಸೆಳೆಯುವಲ್ಲಿ ಯಶ ಕಂಡಿದ್ದಾರೆಂದು ಹೇಳಲಾಗುತ್ತಿದೆ.

ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಸಮಲತಾ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಪಕ್ಷದ ಸೂಚನೆಗಳ ಸಹಿತ ಸುಮಲತಾ ಅವರ ಬೇಡಿಕೆಗಳನ್ನು ಹೈಕಮಾಂಡ್‌ ಹೇಳುವುದು, ಅಲ್ಲಿನ ಸಂದೇಶವನ್ನು ಇವರಿಗೆ ತಲುಪಿಸಿ ಒಪ್ಪಿಸುವ ಕೆಲಸವನ್ನು ಮಾಡಿದ್ದರು. ಈ ನಡುವೆ ಸುಮಲತಾ ಅವರು ಮೂರು ಷರತ್ತುಗಳನ್ನು ವಿಧಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Karnataka Election : ಕಾಂಗ್ರೆಸನ್ನು ಸಂಪರ್ಕಿಸಿಲ್ಲ, ಯಾವ ಕಾರಣಕ್ಕೂ ಜೆಡಿಎಸ್‌ ಬಿಡಲ್ಲ: ಹಾಸನದ ಎಚ್‌.ಪಿ ಸ್ವರೂಪ್‌ ಸ್ಪಷ್ಟೋಕ್ತಿ

ಏನಿದು ‌ಸುಮಲತಾ ಕಂಡೀಷನ್?

ತಾವು ಬಿಜೆಪಿ ಸೇರ್ಪಡೆಯಾಗಬೇಕಾದರೆ ತಮಗೆ ಒಂದಷ್ಟು ಷರತ್ತುಗಳಿವೆ. ಅವುಗಳನ್ನು ಪೂರೈಸುವುದಾದರೆ ಯಾವುದೇ ಅಡ್ಡಿ ಇಲ್ಲ ಎಂದು ಸುಮಲತಾ ಹೇಳಿದ್ದರು. ಅದರಂತೆ ಮದ್ದೂರು, ಮಂಡ್ಯ,, ಶ್ರೀರಂಗಪಟ್ಟಣದಲ್ಲಿ ತಾವು ಸೂಚಿಸಿದವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಬೇಕು ಎಂದು ಹೇಳಿದ್ದರು. ಇದಕ್ಕೆ ಬಿಜೆಪಿ ಕಡೆಯಿಂದಲೂ ಗ್ರೀನ್ ಸಿಗ್ನಲ್ ದೊರೆಯುತ್ತಿದ್ದಂತೆ ಈಗ ಸುಮಲತಾ ಸೇರ್ಪಡೆಗೆ ವೇದಿಕೆ ಸಿದ್ಧವಾಗುತ್ತಿದೆ.

ಮಾಜಿ ಸಿಎಂ ಕೃಷ್ಣ ಭೇಟಿ ಮಾಡಿದ ಸುಮಲತಾ

ಸಮಲತಾ ಬಿಜೆಪಿ ಸೇರ್ಪಡೆಗೆ ಬಹುತೇಕ ನಿರ್ಧಾರ ಮಾಡಿದ್ದಾರೆನ್ನಲಾಗಿದ್ದು, ಇದರ ಭಾಗವಾಗಿ ಶನಿವಾರ (ಮಾ. 4) ಬೆಳಗ್ಗೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಅವರನ್ನು ಅವರ ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.

ಮಧ್ಯಾಹ್ನ 3.30ಕ್ಕೆ ಬೆಂಬಲಿಗರ ಜತೆ ಸಭೆ

ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಾಕದೇ ಬೆಂಬಲ ಸೂಚಿಸಿತ್ತು. ಅಲ್ಲದೆ, ಗೆದ್ದು ಬಂದ ನಂತರವೂ ಸುಮಲತಾ ಅವರನ್ನು ಬಿಜೆಪಿ ಉತ್ತಮವಾಗಿ ನಡೆಸಿಕೊಂಡಿತ್ತು. ಈ ಮಧ್ಯೆ ಅವರು ಕಾಂಗ್ರೆಸ್‌ ಹಾಗೂ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಗಳು ಎದ್ದಿದ್ದವು. ಇದೇ ಕಾರಣಕ್ಕೆ ಸುಮಲತಾರಿಗೆ ಬಿಜೆಪಿ ಗಾಳ ಹಾಕಿತ್ತು. ಈಗ ಸಮಲತಾ ಬಿಜೆಪಿ ಸೇರ್ಪಡೆಗೆ ಮುಂಚೆ ತಮ್ಮ ಬೆಂಬಲಿಗರ ಸಭೆಯನ್ನು ಕರೆದಿದ್ದು, ಅಲ್ಲಿ ಎಲ್ಲರ ಅಭಿಪ್ರಾಯದ ಮೇರೆಗೆ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜಕೀಯ ಚರ್ಚೆ ನಡೆದಿಲ್ಲ- ಸುಮಲತಾ

ಎಸ್.ಎಂ. ಕೃಷ್ಣ ಅವರು ನಮ್ಮ ಜಿಲ್ಲೆಯ ಅಗ್ರನಾಯಕರು. ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ. ಅವರಿಗೆ ಅಭಿನಂದನೆ ಸಲ್ಲಿಸಿ ಆಶೀರ್ವಾದ ಪಡೆಯಲು ಬಂದಿದ್ದೆ. ಅವರಿಗೆ ಪ್ರಶಸ್ತಿ ಸಿಕ್ಕಾಗ ನಾನು ಬಜೆಟ್‌ ಅಧಿವೇಶನದಲ್ಲಿ ಇದ್ದೆ. ಹೀಗಾಗಿ ನನಗೆ ಸಮಯ ಸಿಕ್ಕಿರಲಿಲ್ಲ. ಈಗ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ಇದರ ಹೊರತಾಗಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸುಮಲತಾ ಅಂಬರೀಷ್‌ ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ: DCC Bank Recruitment 2023 : ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ 36 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ

ಇಂದು ಮಂಡ್ಯದಿಂದ ಹಲವರು ಬಂದಿದ್ದಾರೆ. ಎಲ್ಲರ ಜತೆ ಚರ್ಚೆ ಮಾಡುತ್ತೇನೆ. ನಾನು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಇನ್ನೂ ಹಲವರ ಜತೆ, ವರಿಷ್ಠರ ಜತೆ ಚರ್ಚೆ ಮಾಡಬೇಕು. ನನ್ನ ಲಾಭ, ನಷ್ಟ ನೋಡಿ ನಿರ್ಧಾರ ಮಾಡಲ್ಲ. ನನ್ನ ಜತೆಗಿರುವವರ ಬಗ್ಗೆಯೂ ನೋಡಿಕೊಂಡೇ ನಿರ್ಧಾರ ಮಾಡಬೇಕಿದೆ ಎಂದು ಸುಮಲತಾ ಹೇಳಿದ್ದಾರೆ.

Exit mobile version