Site icon Vistara News

Sumalatha Ambareesh PC: ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ನನ್ನ ಬೆಂಬಲ: ಅಧಿಕೃತವಾಗಿ ಘೋಷಣೆ ಮಾಡಿದ ಸುಮಲತಾ ಅಂಬರೀಶ್‌

sumalatha-ambareesh-pc-regarding-joining

#image_title

ಮಂಡ್ಯ: ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಜಯಗಳಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಬಿಜೆಪಿ ಸೇರ್ಪಡೆಯಾಗುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಮಂಡ್ಯದಲ್ಲಿ ಮಹತ್ವದ ಸುದ್ದಿಗೋಷ್ಠಿಯಲ್ಲಿ ಸುಮಲತಾ ಮಾತನಾಡಿದರು. ಸುದ್ದಿಗೋಷ್ಠಿಗೂ ಮುನ್ನ ಮನೆಯಿಂದ ಹೊರಟ ಸಂಸದೆ ಸುಮಲತಾ, ಕಾಳಿಕಾಂಬ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಇಂದು ದೇಶವನ್ನು ಸುಸ್ಥಿರವಾಗಿ ಮುನ್ನಡೆಸಿಕೊಂಡು ಹೋಗುವ ನಾಯಕತ್ವ ನರೇಂದ್ರ ಮೋದಿಯವರದ್ದು. ನಾನು ಈ ನಿರ್ಧಾರವನ್ನು ನಾಲ್ಕು ವರ್ಷದ ಮೊದಲೇ ತೆಗೆದುಕೊಳ್ಳಬಹುದಿತ್ತು. ನಾನು ಪಕ್ಷೇತರರನಾಗಿ ಸ್ಪರ್ಧಿಸಿದ್ದೆ, ಅವರಿಗೆ ಆಶ್ವಾಸನೆ ನೀಡಿದ್ದೆ. ಇದು ಕೇವಲ ಸುಮಲತಾ ಅಂಬರೀಶ್‌ ಭವಿಷ್ಯದ ಪ್ರಶ್ನೆ ಅಲ್ಲ. ಇದು ಮಂಡ್ಯ ಜಿಲ್ಲೆಯ ಅಭಿವೃದ್ಧಿ ವಿಚಾರ. ಹಾಗಾಗಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ.

ನನ್ನ ಜತೆಗೆ ಬಂದರೆ ಏನಾಗಬಹುದು ಎಂದು ಕೆಲವರಿಗೆ ಯೋಚನೆ ಆಗಿರಬಹುದು. ಯಾರನ್ನೂ ಧ್ವೇಷ ಮಾಡುವ ಕುಟುಂಬ ಅಂಬರೀಶ್‌ ಅವರದ್ದಲ್ಲ. ನನ್ನ ಮುಂದಿನ ಸವಾಲುಗಳನ್ನು ಎದುರಿಸಲು ನನಗೊಂದು ಶಕ್ತಿಯ ಅವಶ್ಯಕತೆ ಇದೆ. ಬದಲಾವಣೆ ತರಲು ಇನ್ನಷ್ಟು ಶಕ್ತಿ ಅಗತ್ಯ ಇದೆ. ಇಂದಿನ ದಿನದಿಂದ ಸಂಪೂರ್ಣ ಬೆಂಬಲವನ್ನು ನರೇಂದ್ರ ಮೋದಿಯವರ ಸರ್ಕಾರ ಹಾಗೂ ಬಿಜೆಪಿಗೆ ಘೋಷಣೆ ಮಾಡುತ್ತಿದ್ದೇನೆ. ಮಂಡ್ಯ ರಾಜಕಾರಣವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಬೇಕಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಸುದೀರ್ಘ ಪೀಠಿಕೆ ಹಾಕಿದ ಸುಮಲತಾ, ಈ ಮಾರ್ಚ್ ಗೆ ನಾನು ರಾಜಕೀಯ ಪ್ರವೇಶ ಮಾಡಿ ಸುಮಾರು 4 ವರ್ಷ ಆಯ್ತು. ಆಗ ನನಗೆ ರಾಜಕೀಯ ಅನಿವಾರ್ಯ ಅಲ್ಲ ಆಕಸ್ಮಿಕವಾಗಿತ್ತು. ರಾಜಕೀಯಕ್ಕೆ ನನ್ನ ಪ್ರವೇಶ ಸ್ವಾರ್ಥಕ್ಕಾಗಿ ಆಗಿರಲಿಲ್ಲ. ಅಂಬರೀಶ್ ಅವರ ನಂತ್ರ ಅವರ ಅಭಿಮಾನಿಗಳ ಒತ್ತಾಯದಿಂದ ರಾಜಕೀಯಕ್ಕೆ ಬರಬೇಕಾಯ್ತು. ಸ್ವಾರ್ಥಕ್ಕಾಗಿ ನಾನು ರಾಜಕೀಯಕ್ಕೆ ಬಂದಿದ್ರೆ ಯಾವ ಹೆಜ್ಜೆ ಬೇಕಿತ್ತು. ಬೆಂಗಳೂರಲ್ಲಿ ಚುನಾವಣೆಗೆ ನಿಲ್ಲಲು ನನಗೆ ಓಪನ್ ಆಫರ್ ಬಂತು. ಸ್ವತಂತ್ರ ಅಭ್ಯರ್ಥಿಯಾಗಿ ಒಬ್ಬ ಸಿಎಂ ಮಗನ ವಿರುದ್ದ ಚುನಾವಣೆಗೆ ನಿಲ್ಲಲು ಅಷ್ಟು ಸುಲಭವಾಗಿರಲಿಲ್ಲ.

ಅಂಬರೀಶ್ ಅವರನ್ನ ಬದುಕಿದ್ದಾಗ ನೀವು ಸಾಕಿ ಬೆಳೆಸಿದ್ದೀರಿ. ಅಂತಿಮ‌ ಕ್ಷಣದಲ್ಲಿ ಅವರನ್ನ ಮಹಾರಾಜನ ಹಾಗೆ ಕಳುಹಿಸಿಕೊಟ್ಟಿರಿ. ಇದಕ್ಕೆಲ್ಲಾ ನಾನು ಬೆಲೆ ಕೊಡೊ ಉದ್ದೇಶದಿಂದ ನಾನು ಚುನಾವಣೆಗೆ ಬಂದಿದ್ದು. ಕಾರ್ಯಕರ್ತರ ಶ್ರಮ ಮುಖಂಡರ ಶ್ರಮದಿಂದಾಗಿ ನನಗೆ ಗೆಲುವು ಬಂತು. ಆದ್ರೆ ನಾನು ಅಂಬರೀಶ್ ಅವರ ಅಭಿಮಾನಿಗಳಿಗಾಗಿ ನಾನು ಆ ಸಾಹಸ ಮಾಡಬೇಕಿತ್ತು.

ಆಗ ನಾನು ಚುನಾವಣೆನೆ ಬೇಡ ಅಂದಿದ್ರೆ ನನಗೆ ಏನೂ ತೊಂದ್ರೆ ಇರಲಿಲ್ಲ. ಬೇರೆ ಬೇರೆ ಹುಡುಕಿಕೊಂಡು ಹೋಗೊ ಅಗತ್ಯ ಅವಶ್ಯಕತೆ ಇರಲಿಲ್ಲ. ಇಲ್ಲಿ ಯಾವುದು ಅನಿವಾರ್ಯವಲ್ಲ. ಅಂತ್ಯವೂ ಅಲ್ಲ. ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ನೀಡೊ ಮೊದಲು ನಾನು ಈ‌ನಾಲ್ಕು ವರ್ಷದಲ್ಲಿ ಅನುಭವಿಸಿದ್ದನ್ನ ನಾನು ನಿಮ್ಮ‌ಮುಂದೆ ಇಡ್ತಿನಿ. ಚುನಾವಣೆ ಟೈಂ ನಲ್ಲಿ ನನ್ನ ಹೇಗೆ ನಡೆಸಿಕೊಳ್ಳಲಾಯ್ತು ಎಂಬುದರ ಬಗೆಗೆ ಎಲ್ಲರಿಗೂ ಗೊತ್ತು. ಆದ್ರೆ ಚುನಾವಣೆಯಲ್ಲಿ ಗೆಲುವು ಪಡೆದ ನಂತರವೂ ಪ್ರತೀ ದಿನ ನನ್ನ ಎಲ್ಲಾ ವಿಷಯಗಳಿಗೂ ಟಾರ್ಗೆಟ್ ಮಾಡಿಕೊಂಡು ಬಂದರು.

ಇದನ್ನೂ ಓದಿ: Sumalatha Ambareesh : ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಫಿಕ್ಸ್‌; ಮಧ್ಯಾಹ್ನ ಅಧಿಕೃತ ಘೋಷಣೆ

ಚುನಾವಣೆಯಲ್ಲಿ ನನ್ನ‌ ಗೆಲುವಿಗೆ ಬಿಜೆಪಿ ಸೇರಿದಂತೆ ಎಲ್ಲರೂ ಶ್ರಮವಹಿಸಿದರು. ಸಂಸದರಾಗಿ ಆಯ್ಕೆಯಾದ ನಂತ್ರ ಯಾವ ರೀತಿ ನನ್ನ ನಡೆಸಿಕೊಂಡರು. ಕೋವಿಡ್ ಬಂದ ನಂತ್ರ ಎರಡು ವರ್ಷ ನನ್ನ ಸಂಸತ್ ಸದಸ್ಯರ ಹಣ ಬಂದಿರಲಿಲ್ಲ. ಹಾಗಿದ್ದರೂ ಸ್ವಂತ ಖರ್ಚಿನಿಂದ ನನ್ನ ಆಪೀಸ್ ನಡೆಸ್ತಿದ್ದಿನಿ. ನಾನು ಒಂದು ಹೆಣ್ಣು ಎಂಬುದನ್ನ ಕಾಣದೆ ಏಕವಚನ ಪದಪ್ರಯೋಗ ಮಾಡಿದ್ರು. ಶ್ರೀರಂಗಪಟ್ಟಣ ಶಾಸಕ. ಮೇಲುಕೋಟೆ ಶಾಸಕರು ನನ್ನ‌ಮೇಲೆ ಏಕವಚನ ಪದ ಪ್ರಯೋಗ ಮಾಡಿದ್ರು. ನನ್ನ ಬಗೆಗೆ ಯಾರ್ ಮಾತಾಡ್ತಾರೆ? ನಾನು ಮಾಡಿರೊ ಕೆಲಸವನ್ನ ಪ್ರತೀನಿತ್ಯ ಮೈಕ್ ನಲ್ಲಿ ಸಾರಿಕೊಂಡು ಪ್ರಚಾರ ಮಾಡಲಾಗುತ್ತಾ? ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರ ಮಾಡಿಕೊಂಡು ಇದ್ದಿದ್ದರೆ ನನ್ನನ್ನೂ, ಅವರಂತೆಯೇ ಎಂದುಕೊಂಡು ಸುಮ್ಮನಿರುತ್ತಿದ್ದರು. ಆದರೆ ಅದರ ವಿರುದ್ಧ ಮಾತನಾಡಿದ್ದಕ್ಕೆ ಹೀಗೆ ಮಾಡುತ್ತಿದ್ದಾರೆ. ಭ್ರಕೋಟೆ ಎಂದುಕೊಂಡು ಓಡಾಡುತ್ತಿರುವವರು ಈ ಭದ್ರಕೋಟೆಗೆ ಏನು ಮಾಡಿದ್ದೀರಿ? ಎಂದು ಕೇಳುವ ಸಮಯ ಬಂದಿದೆ ಎಂದು ಜೆಡಿಎಸ್‌ ಕುರಿತು ಮಾತನಾಡಿದರು.

ಕೆಆರ್‌ಎಸ್‌ ಡ್ಯಾಂನಿಂದಾಗಿ ಮಂಡ್ಯ ಎನ್ನುವುದು ಒಂದು ಜಿಲ್ಲೆಯಾಗಿದೆ. ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕೆಲಸ ಅಲ್ಲವೇ? ಜವಾಬ್ದಾರಿಯುತ ನಾಯಕರ ಮಾತಲ್ಲಿ ಅಂತಹ ಮಾತುಗಳು ಬರಬಹುದ? ಚುನಾವಣೆ ಸಮಯದಲ್ಲಿ ಮಾತನಾಡಿದರೆ ಒಕೆ, ಆನಂತರವೂ ಇದನ್ನು ಮುಂದುವರಿಸಿದರೆ ಹೇಗೆ? ಜನರು ಏನು ಮಾಡಬೇಕು?

Exit mobile version