ಮಂಡ್ಯ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಅಸಾಧ್ಯವಾಗಿದೆ. ಉಚಿತವಾಗಿ ಬಜೆಟ್ ಸಿಕ್ಕರೆ ಯಾರು ಬೇಕಾದರೂ ಉಚಿತವಾಗಿ ನೀಡುತ್ತಾರೆ ಎಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ (Karnataka Election) ಬಗ್ಗೆ ಸಂಸದೆ ಸುಮಾಲತಾ ಅಂಬರೀಶ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯೇ ಮಂತ್ರ ಎಂದು ನಂಬಿ ಕೆಲಸ ಮಾಡುತ್ತಿರುವವರು ಪ್ರಧಾನಿ ನರೇಂದ್ರ ಮೋದಿ. ದಿನ ಪೂರ್ತಿ ಕೆಲಸ ಮಾಡುವಂತಹ ದೊಡ್ಡ ವ್ಯಕ್ತಿಯಾದ ಅವರಿಗೆ ಇಡೀ ವಿಶ್ವದಲ್ಲೇ ನಂಬರ್ ಒನ್ ರೇಟಿಂಗ್ ಸಿಕ್ಕಿದೆ. ಸರಿಯಾಗಿ ಕೆಲಸ ಮಾಡದೆ ಭ್ರಷ್ಟಾಚಾರ, ಉಚಿತ ಸೇವೆ ಕೊಟ್ಟು ಹಾಳು ಮಾಡಿರುವುದರಿಂದ ನಮ್ಮ ಅಕ್ಕಪಕ್ಕದ ದೇಶ ಪಾಕಿಸ್ತಾನ, ಶ್ರೀಲಂಕಾ ಸಂಕಷ್ಟಕ್ಕೆ ಸಿಲುಕಿವೆ ಎಂದು ಹೇಳಿದರು.
ಕಾಂಗ್ರೆಸ್‌ನವರು ಗೃಹಿಣಿಗೆ 2 ಸಾವಿರ ರೂಪಾಯಿ ಕೊಡುತ್ತೇವೆ ಎನ್ನುತ್ತಾರೆ. ನಿರುದ್ಯೋಗಿ ಯುವಕರಿಗೆ 3 ಸಾವಿರ ರೂ., 200 ಯುನಿಟ್ ವಿದ್ಯುತ್ ಉಚಿತ, ಬಸ್ ಸೇವೆ ಉಚಿತ ಎನ್ನುತ್ತಾರೆ. ಇದಕ್ಕೆ ಎಲ್ಲಿಂದ ಹಣವನ್ನು ತರಲಾಗುತ್ತದೆ ಎಂಬುದಕ್ಕೆ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ಕೊಟ್ಟಿಲ್ಲ. ಇದು ಸುಳ್ಳು ಭರವಸೆ ಆಗುತ್ತದೆ. ವರ್ಷಕ್ಕೆ ಎಷ್ಟು ಸಾವಿರ ಕೋಟಿ ರೂಪಾಯಿಯನ್ನು ನೀವು ಕೊಡುತ್ತೀರಾ ಎಂಬುದಾಗಿ ಮಾತು ಕೊಡುತ್ತೀರಾ? ನಮ್ಮ ರಾಜ್ಯದ ಆರ್ಥಿಕ ವ್ಯವಸ್ಥೆ ಶ್ರೀಲಂಕಾ, ಪಾಕಿಸ್ತಾನದ ರೀತಿಯಲ್ಲಿ ಸಾಲಗಾರರಂತೆ ಆಗುತ್ತದೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Karnataka Election 2023: ಬಹಿರಂಗ ಪ್ರಚಾರ ಅಂತ್ಯ; ಕಣ ರಂಗೇರಿಸಿದ ಅತಿರಥ, ಮಹಾರಥರ ಕ್ಯಾಂಪೇನ್!
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಇಂಪ್ಲಿಮೆಂಟ್ ಮಾಡುವುದು ಅಸಾಧ್ಯ. ಯಾವ ಸರ್ಕಾರಕ್ಕೂ ಆ ರೀತಿಯ ಉಚಿತವಾಗಿ ಬಜೆಟ್ ಸಿಗಲ್ಲ. ಉಚಿತವಾಗಿ ಬಜೆಟ್ ಸಿಗುವುದಾದಾರೆ ಎಲ್ಲರೂ ಫ್ರೀಯಾಗಿ ಕೊಡಬಹುದಲ್ಲವೇ? ಸುಳ್ಳು ಹೇಳಿ ಜನರನ್ನು ನಂಬಿಸಬೇಡಿ. ಸುಳ್ಳು ಆಶ್ವಾಸನೆ ಕೊಟ್ಟು ಜಾರಿ ಮಾಡದಿದ್ದರೆ ಹೇಗೆ? ಸಾವಿರಾರು ಜನರು ಕೆಲಸ ಮಾಡುವವರು ಇದ್ದಾರೆ. ನೀವು ಫ್ರೀ ಅಂದ್ರೆ ಅವರಿಗೆ ಸಂಬಳ ಯಾರು ಕೊಡುತ್ತಾರೆ? ಸಂಸ್ಥೆಗಳು ಮುಚ್ಚಿ ಹೋಗುತ್ತವೆ, ಹಿಂದೆ ಎಷ್ಟೋ ಸಂಸ್ಥೆಗಳು ಮುಚ್ಚಿವೆ. ಜನರು ಪ್ರಬುದ್ಧರಿದ್ದಾರೆ, ತಿಳಿವಳಿಕೆಯಿಂದ ಈ ಭಾರಿ ನಿರ್ಧಾರ ಮಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.