ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡುವುದು ಖಚಿತವಾಗಿದೆ. ಈ ಬಗ್ಗೆ ಅವರ ಸಮ್ಮುಖದಲ್ಲೇ ನಡೆದ ಬೆಂಬಲಿಗರ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಯಾವ ಪಕ್ಷ ಸೇರಬೇಕು? ಬಿಜೆಪಿಯೋ ಕಾಂಗ್ರೆಸ್ಸೋ ಎನ್ನುವುದನ್ನು ಸುಮಲತಾ ನಿರ್ಧಾರಕ್ಕೆ ಬಿಡಲಾಗಿದೆ.
ಸುಮಲತಾ ಅವರು ರಾಜ್ಯ ರಾಜಕಾರಣಕ್ಕೆ ಬರಬೇಕು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಬೇಡಿಕೆ ಹಲವು ಸಮಯದಿಂದ ಇತ್ತು. ಆದರೆ, ಸುಮಲತಾ ಮಾತ್ರ ಲೆಕ್ಕಾಚಾರದ ನಡೆ ಇಟ್ಟುಕೊಂಡು ಕಾಯವ ತಂತ್ರ ಹೂಡಿದ್ದರು. ಬೆಂಬಲಿಗರು ಹೇಳುತ್ತಿರುವುದನ್ನು ಪರಿಗಣಿಸುತ್ತೇನೆ, ಅವರ ಜತೆ ಚರ್ಚೆ ನಡೆಸಿ ತೀರ್ಮಾನ ಎಂಬೆಲ್ಲಾ ಹೇಳಿಕೆಗಳ ಮೂಲಕ ರಾಜ್ಯ ರಾಜಕೀಯ ಪ್ರವೇಶದ ಮುನ್ಸೂಚನೆ ನೀಡಿದ್ದಾರೆ.
ಇದೀಗ ಬೆಂಬಲಿಗರ ಸಭೆಯಲ್ಲಿ ಅವರು ರಾಜ್ಯ ರಾಜಕಾರಣಕ್ಕೆ ಬರಲೇಬೇಕು ಎಂಬ ನಿರ್ಣಯ ಮಾಡಲಾಗಿದೆ. ಸಭೆಯಲ್ಲಿ ಮೂರು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯ ರಾಜಕೀಯಕ್ಕೆ ಬರಬೇಕು ಎನ್ನುವುದು ಮೊದಲನೆಯದು. ಯಾವ ಪಕ್ಷ ಸೇರಬೇಕು ಎನ್ನುವ ತೀರ್ಮಾನ ಅವರದೇ ಎನ್ನುವುದು ಎರಡನೇ ನಿರ್ಣಯ. ಮೂರನೇಯದಾಗಿ ಸುಮಲತಾ ಅಂಬರೀಶ್ ಕುರಿತು ಏಕವಚನದಲ್ಲಿ ಮಾತನಾಡಿರೊ ಶಾಸಕ ಸಿ ಎಸ್ ಪುಟ್ಟರಾಜು ಅವರ ನಡೆ ಖಂಡಿಸುವುದು. ಪುಟ್ಟರಾಜು ಕ್ಷಮೆ ಕೇಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಲಾಗಿದೆ.
ಬಿಜೆಪಿ ಸೇರ್ಪಡೆಗೆ ಬೆಂಬಲಿಗರ ಇಂಗಿತ
ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಬಹುತೇಕರು ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಂಬರೀಶ್ ಅವರನ್ನ ಸರಿಯಾಗಿ ನಡೆಸಿಕೊಂಡಿಲ್ಲ. ಅವರನ್ನ ಸಚಿವ ಸ್ಥಾನದಿಂದ ಕೆಳಗೆ ಇಳಿಸಿ ಅಪಮಾನ ಮಾಡಲಾಗಿದೆ. ಅಂಬರೀಶ್ ಹತ್ತು ವರ್ಷ ಮೊದಲೇ ಸಾಯಲು ಕಾಂಗ್ರೆಸ್ ಕಾರಣ ಎಂಬುದು ಕಾಂಗ್ರೆಸ್ ಸೇರ್ಪಡೆ ಬೇಡ ಎನ್ನುವುದಕ್ಕೆ ಬೆಂಬಲಿಗರು ನೀಡಿದ ಕಾರಣ.
ಅದೇ ಹೊತ್ತಿಗೆ ಪ್ರಧಾನಿ ಮೋದಿ ಮೈಸೂರಿಗೆ ಭೇಟಿ ನೀಡಿ ಸುಮಲತಾ ಹೆಸರು ಪ್ರಸ್ತಾಪಿಸಿದ್ದು, ಅಲ್ಲದೆ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚು ಅವಕಾಶ ಇರೋದ್ರಿಂದ ಬಿಜೆಪಿ ಸೇರುವುದೇ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮಂತ್ರಿಯಾಗಲು ಅವಕಾಶ ಇರೋದು ಬಿಜೆಪಿಯಲ್ಲಿ ಮಾತ್ರ. ಹೀಗಾಗಿ ಅವರು ಬಿಜೆಪಿಯನ್ನೇ ಸೇರಲಿ ಎನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು.
ಸುಮಲತಾ ಅವರ ಹಲವು ಬೆಂಬಲಿಗರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಸುಮಲತಾ ಕೂಡಾ ಅದೇ ಅಭಿಪ್ರಾಯ ಹೊಂದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಇದನ್ನೂ ಓದಿ | Sumalatha Ambarish | ಸುಮಲತಾ ಅಂಬರೀಶ್ ರಾಜ್ಯ ರಾಜಕಾರಣ ಪ್ರವೇಶ ಬಹುತೇಕ ಫಿಕ್ಸ್?