Site icon Vistara News

Sumalatha Ambarish : ಮಂಡ್ಯದ ಟಿಕೆಟೇ ಬೇಕು ಎಂದ ಸುಮಲತಾ; ಸಿಗದಿದ್ರೆ ಕಾಂಗ್ರೆಸ್‌ ಸೇರ್ತಾರಾ?

Sumalatha Amabarish

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯಾಗಿರುವ (BJP-JDS Alliance) ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ (Mandya Parliamentary Seat) ಯಾರಿಗೆ ಸಿಗಲಿದೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಜೆಡಿಎಸ್‌ ಕೇಳಿರುವ ಮೂರು ಕ್ಷೇತ್ರಗಳಲ್ಲಿ ಹಾಸನ ಮತ್ತು ಮಂಡ್ಯ ಪ್ರಮುಖವಾಗಿವೆ. ಹಾಗಿದ್ದರೆ ಈಗ ಮಂಡ್ಯ ಸಂಸದರಾಗಿರುವ ಬಿಜೆಪಿ ಬೆಂಬಲಿತ ಚಿತ್ರ ನಟಿ ಸುಮಲತಾ ಅಂಬರೀಷ್‌ (Sumalatha Ambarish) ಅವರು ಏನು ಮಾಡುತ್ತಾರೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಈ ಪ್ರಶ್ನೆಗೆ ಸ್ವತಃ ಸುಮಲತಾ ಅವರೇ ಉತ್ತರಿಸಿದ್ದು ತಾನು ಮಂಡ್ಯದಿಂದಲೇ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ.

ಮಂಡ್ಯದ ಹಾಲಿ ಸಂಸದೆಯಾಗಿರುವ ತಮಗೇ ಬಿಜೆಪಿ ಟಿಕೆಟ್‌ ನೀಡಬೇಕು, ಜೆಡಿಎಸ್‌ ಜತೆಗಿನ ಮೈತ್ರಿ ಜತೆಗಿನ ಮೈತ್ರಿಯ ಹೊರತಾಗಿಯೂ ಬಿಜೆಪಿ ಈ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳುವ ಭರವಸೆ ಇದೆ ಎಂದು ಅವರು ಬೆಂಗಳೂರಿನಲ್ಲಿ ಆಪ್ತರ ಜತೆ ಮಾತುಕತೆ ನಡೆಸಿದ ನಂತರ ಪ್ರಕಟಿಸಿದರು. ಜೆಡಿಎಸ್‌ ಈ ಕ್ಷೇತ್ರಕ್ಕಾಗಿ ಪ್ರಬಲ ಬೇಡಿಕೆಯನ್ನು ಮಂಡಿಸಿದೆ. ಜೆಡಿಎಸ್‌ ನಾಯಕ ಎಚ್.‌ಡಿ. ಕುಮಾರಸ್ವಾಮಿ ಅವರು ತಾನು ಈ ವಿಚಾರದಲ್ಲಿ ಸಂಸದೆ ಸುಮಲತಾ ಅವರ ಜತೆ ಮಾತನಾಡುವುದಾಗಿಯೂ ಹೇಳಿದ್ದಾರೆ. ಹಾಗಿದ್ದರೆ ಸುಮಲತಾ ಬೇಡಿಕೆಯಂತೆ ಅವರು ಮಂಡ್ಯವನ್ನು ಬಿಜೆಪಿಗೆ ಬಿಟ್ಟುಕೊಡುತ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದರ ಜತೆಗೆ ಹುಟ್ಟಿಕೊಂಡಿರುವ ಇನ್ನೊಂದು ಪ್ರಶ್ನೆ ಎಂದರೆ ಒಂದು ವೇಳೆ ಮಂಡ್ಯದ ಟಿಕೆಟ್‌ ಸಿಗದಿದ್ದರೆ ಸುಮಲತಾ ಅವರು ಕಾಂಗ್ರೆಸ್‌ ಸೇರುತ್ತಾರಾ?

ಹಾಗಿದ್ದರೆ ಸುಮಲತಾ ಅವರು ಹೇಳಿದ್ದೇನು?

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಸುಮಲತಾ ಅವರು, ಎರಡು ದಿನಗಳ ಹಿಂದೆ ಬಿಜೆಪಿಯ ಹೊಸ ಪದಾಧಿಕಾರಿಗಳು ಭೇಟಿ ಆಗಿದ್ದರು. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಯಾವ ರೀತಿ ಸಂಘಟನೆ ಇರಬೇಕು ಎನ್ನುವ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಿದರು.

ʻʻನಾನು ಈಗ ಮಂಡ್ಯದ ಸಿಟ್ಟಿಂಗ್ ಎಂಪಿ, ಹಾಲಿ ಸಂಸದೆ. ಜೆಡಿಎಸ್‌ ಜತೆಗೆ ಮೈತ್ರಿ ಆಗಿದ್ದರೂ ಬಿಜೆಪಿಗೇ ಇಲ್ಲಿ ಟಿಕೆಟ್‌ ನೀಡಬೇಕು. ನಮ್ಮ ಜಿಲ್ಲೆಯ ನಾಯಕರು ಸಹ ಅದನ್ನೇ ನಿರೀಕ್ಷೆ ಮಾಡುತ್ತಾರೆ. ಇಲ್ಲಿ ಬಿಜೆಪಿಯ ವೋಟ್‌ ಶೇರ್‌ ಮೊದಲಿಗಿಂತ ಹೆಚ್ಚಾಗಿದೆ. ಹಾಗಾಗಿ ಮಂಡ್ಯ ಟಿಕೆಟನ್ನು ಬಿಜೆಪಿಯೇ ಉಳಿಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ʻʻಮಂಡ್ಯ ಕ್ಷೇತ್ರದ ಟಿಕೆಟ್‌ ಜೆಡಿಎಸ್‌ಗೆ ಎಂದು ಅಧಿಕೃತವಾಗಿ ಹೈಕಮಾಂಡ್‌ನಿಂದ ಫೈನಲ್‌ ಆಗಿಲ್ಲ. ನನ್ನ ಆಸಕ್ತಿ ಏನಿದ್ದರೂ ನನ್ನ ಜಿಲ್ಲೆ, ನನ್ನ ಕ್ಷೇತ್ರ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಕೇಂದ್ರದ ಯೋಜನೆ ಅನುಷ್ಠಾನ ಮಾಡುವುದು, ದಿಶಾ ಯೋಜನೆ ಬಗ್ಗೆ ಎಲ್ಲವನ್ನೂ ನೀವು ಗಮನಿಸಬಹುದು. ನನ್ನ ಬಗ್ಗೆ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲ. ನಾನು ಸಂಸತ್‌ ಅಧಿವೇಸನದಲ್ಲಿ ಮಾತನಾಡಿರುವ ವಿಷಯ ಎಲ್ಲವನ್ನೂ ಗಮನಿಸಿ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆʼʼ ಎಂದು ಸುಮಲತಾ ಹೇಳಿದರು.

ʻʻಮಂಡ್ಯ ಟಿಕೆಟ್ ಬಿಜೆಪಿಯೇ ಉಳಿಸಿಕೊಳ್ಳುತ್ತದೆ ಎನ್ನುವ ವಿಶ್ವಾಸ ಇದೆ. ಕುಮಾರಸ್ವಾಮಿ ಅವರು ನನ್ನ ಬಗ್ಗೆ ಸಾಫ್ಟ್ ಕಾರ್ನರ್ ಇರುವ ವಿಚಾರ ನಾನು ಸ್ವಾಗತ ಮಾಡುತ್ತೇನೆʼʼ ಎಂದು ಸುಮಲತಾ ಹೇಳಿದರು.

ʻʻಪಕ್ಷೇತರರಾಗಿ ನಿಂತು ಗೆದ್ದು ಬಂದವಳು ನಾನು. ಅಂಬರೀಶ್ ಅವರು ಹೋಗುವಾಗ ನನಗೆ ಒಂದು ಜವಾಬ್ದಾರಿ ಕೊಟ್ಟು ಹೋಗಿದ್ದಾರೆ. ಅವರ ಪರಂಪರೆಯನ್ನು ನಾನು ಮುಂದುವರಿಸಿಕೊಂಡು ಹೋಗಬೇಕು ಅನ್ನೋದು ನನ್ನ ಆಶಯ. ಮಂಡ್ಯ ಟಿಕೆಟ್ ನನಗೇ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ಆಂತರಿಕವಾಗಿ ನನಗೆ ಇರುವ ನೆಟ್ವರ್ಕ್ ಪ್ರಕಾರ ಈವರೆಗೂ ಸೀಟ್ ಹಂಚಿಕೆ ಮಾತುಕತೆ ಆಗಿಲ್ಲʼʼ ಎಂದು ಸುಮಲತಾ ಅಂಬರೀಶ್‌ ಹೇಳಿದರು.

ʻʻಮಂಡ್ಯ ಜನತೆ ನನ್ನ ಜೊತೆಯೇ ಇದ್ದಾರೆ ಅನ್ನೋ ನಂಬಿಕೆ ನನಗಿದೆ. ಒಂದಷ್ಟು ಕಾಂಗ್ರೆಸ್ ನಾಯಕರು ಟಿಕೆಟ್ ಕೊಡುವ ಬಗ್ಗೆ ಮಾತನಾಡಿದ್ದಾರೆ. ಅದರ ಬಗ್ಗೆ ಹೆಚ್ಚಾಗಿ ಮಾತನಾಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಮಂಡ್ಯ ಟಿಕೆಟ್ ತಪ್ಪಿದರೆ ಆಗ ನಾನೇ ನಿಮ್ಮ ಬಳಿ ಮಾತನಾಡುತ್ತೇನೆʼʼ ಎಂದು ಸುಮಲತಾ ಹೇಳಿದರು.

ಇದನ್ನೂ ಓದಿ: BJP Karnataka: ಮಂಡ್ಯ ಟಿಕೆಟ್ ಬಗ್ಗೆ ಶೀಘ್ರ ತೀರ್ಮಾನ; ಸುಮಲತಾ ಜತೆ ಮಾತನಾಡುವೆನೆಂದ ವಿಜಯೇಂದ್ರ

ಸುಮಲತಾ ಮಂಡ್ಯದಿಂದಲೇ ಸ್ಪರ್ಧೆ ಎಂದ ಮಾಜಿ ಸಚಿವ ನಾರಾಯಣ ಗೌಡ

ಈ ನಡುವೆ ಬೆಂಗಳೂರಿನಲ್ಲಿ ಸುಮಲತಾ ಅವರನ್ನು ಭೇಟಿಯಾದ ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ ಅವರು, ನಾನು ಸುಮಲತಾ ಅವರ ಜತೆ ಮಾತನಾಡಿದ್ದೇನೆ. ಮಂಡ್ಯದಿಂದಲೇ ಸ್ಪರ್ಧೆ ಮಾಡುವುದಾಗಿ ಮೇಡಂ ಹೇಳಿದ್ದಾರೆ. ಬೇರೆ ಕಡೆ ಹೋಗಲ್ಲ ಎಂದು ಹೇಳಿದ್ದು ಖುಷಿಯಾಗಿದೆ ಎಂದು ಹೇಳಿದರು.

ʻಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಜೆಡಿಎಸ್ ಗೂ ಮನವಿ ಮಾಡುತ್ತೇವೆ. ಯಾಕೆಂದರೆ ದೇವೇಗೌಡರು, ಕುಮಾರಸ್ವಾಮಿ ಮಂಡ್ಯದಲ್ಲಿ ಹುಟ್ಟಿ ಬೆಳೆದವರಲ್ಲ. ರಾಮನಗರ ಅವರ ಲಕ್ಕಿ ಪ್ಲೇಸ್. ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧೆ ಮಾಡಲಿ. ಮಂಡ್ಯ ಜಿಲ್ಲೆಯಿಂದ ಸುಮಲತ ಮುಂದುವರಿದ್ರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆʼʼ ಎಂದು ಹೇಳಿದರು.

ʻʻಮಂಡ್ಯ ಟಿಕೆಟ್ ವಿಚಾರವಾಗಿ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇವೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬೆಳೆಸಬೇಕು ಎಂದು ಕೇಳಿಕೊಳ್ಳುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಸುಮಲತಾ ಅವರು ಕೂಡ ಮಂಡ್ಯದಿಂದ ಸ್ಪರ್ಧೆಗೆ ಪ್ರಿಪೇರ್ ಆಗಿದ್ದಾರೆ. ಸಿಟಿಂಗ್ ಎಂಪಿಗೆ ಏಕೆ ಟಿಕೆಟ್ ಕೊಡಲ್ಲ?ʼʼ ಎಂದು ಸುಮಲತಾ ಅಂಬರೀಷ್‌ ಅವರ ಜತೆಗೆ ಮಾತುಕತೆಯ ಬಳಿಕ ಕೆ.ಸಿ ನಾರಾಯಣ ಗೌಡ ಹೇಳಿದರು.

ಕಾಂಗ್ರೆಸ್‌ನಲ್ಲಿ ಸುಮಲತಾ ಸೇರ್ಪಡೆ ಬಗ್ಗೆ ಚರ್ಚೆ ಆಗಿಲ್ಲ ಎಂದ ಚಲುವರಾಯ ಸ್ವಾಮಿ

ಈ ನಡುವೆ, ಸುಮಲತಾ ಅಂಬರೀಷ್‌ ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪಕ್ಷದಲ್ಲಿ ಚರ್ಚೆಯೇ ಆಗಿಲ್ಲ ಎಂದು ಸಚಿವ ಚಲುವರಾಯ ಸ್ವಾಮಿ ಹೇಳಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಚಲುವರಾಯ ಸ್ವಾಮಿ ಸ್ಪರ್ಧೆ ಮಾಡುವ ಸುದ್ದಿಯೂ ಹರಡುತ್ತಿರುವುದರಿಂದ ಅವರ ಹೇಳಿಕೆ ಮಹತ್ವ ಪಡೆದಿದೆ.

ನನಗೂ ಸುಮಲತಾ ಅವರಿಗೂ ಕೆಲವೊಂದು ವಿಚಾರದಲ್ಲಿ ಭಿನ್ನಾಭಿಪ್ರಾಯ ಇದೆ. ಹಾಗಾಗಿ ನಾನು ಅದರ ಬಗ್ಗೆ ಹೆಚ್ಚು ಯೋಚನೆ ಮಾಡಿಲ್ಲ. ಸುಮಲತಾ ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ವಿರೋಧ ಇದೆ ಎಂದೆಲ್ಲ ಹೇಳುತ್ತಾರೆ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಅವರಿಬ್ಬರ ಚರ್ಚೆ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು ಚೆಲುವರಾಯ ಸ್ವಾಮಿ.

ʻʻಗೆದ್ದ ಬಳಿಕ ಸುಮಲತಾ ಅವರು ನನ್ನ ಬಳಿ ರಾಜಕಾರಣದ ಚರ್ಚೆ ಮಾಡಿಲ್ಲ. ಆಗಾಗ ಸಿಕ್ಕ ವೇಳೆ ವಿಶ್ವಾಸದಲ್ಲಿ ಮಾತನಾಡಿದ್ದೇವೆ ಅಷ್ಟೇ. ಕೆಲವು ಕಡೆ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ಸಚಿವರಿಗೆ ಹೇಳಿರುವುದು ಸತ್ಯ. ಆದರೆ ನಮ್ಮ ಜಿಲ್ಲೆ ವಿಚಾರದಲ್ಲಿ ಈ ಬಗ್ಗೆ ಚರ್ಚೆ ಆಗಿಲ್ಲʼʼ ಎಂದು ಚಲುವರಾಯ ಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಎಚ್‌.ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಮಾಡಲಿ. ಪ್ರತಿಸ್ಪರ್ಧಿಗಳನ್ನು ಅವರು ಬೇಡ ಇವರು ಬೇಡ ಎಂದು ಹೇಳುವುದಿಲ್ಲ. ಸ್ಥಳೀಯವಾದ ಇಲ್ಲವಾದಾಗ ಅವರೋ ಇನ್ನೊಬ್ಬರೋ ನಿಂತು ಕೊಳ್ತಾರೆ. ನಮಗೆ ಸ್ಥಳೀಯವಾಗೆ ಅಭ್ಯರ್ಥಿ ಇದಾರೆ. ಪ್ರಬಲ, ದುರ್ಬಲ ಅಭ್ಯರ್ಥಿ ಅಂತ ಇಲ್ಲ. ಜನರ ತೀರ್ಮಾನವೇ ಅಂತಿಮ ಎಂದು ಅವರು ಹೇಳಿದರು.

Exit mobile version