Site icon Vistara News

Sumalatha Ambarish | ವರಿಷ್ಠರು ಮಾತಾಡಿದ್ದು ನಿಜ, ಬಿಜೆಪಿ ಸೇರ್ಪಡೆ ಬಗ್ಗೆ ನಿರ್ಧರಿಸಿಲ್ಲ ಎಂದ ಸುಮಲತಾ ಅಂಬರೀಶ್‌

sumalatha ambarish

ಮಂಡ್ಯ: ಭಾರತೀಯ ಜನತಾ ಪಕ್ಷ ಸೇರಬೇಕೆಂಬ ಬಗ್ಗೆ ಆ ಪಕ್ಷದಿಂದ ಬೇಡಿಕೆ ಇದೆ. ಆದರೆ, ನಾನು ಇನ್ನೂ ತೀರ್ಮಾನಿಸಿಲ್ಲ: ಹೀಗೆ ಹೇಳಿದ್ದಾರೆ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್‌ (Sumalatha Ambarish).

ಮಂಡ್ಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆ ಸಾಧ್ಯತೆ ಕುರಿತ ಪ್ರಶ್ನೆಗಳಿಗೆ ಉತ್ತರ ನೀಡಿದರು. ಬಿಜೆಪಿ ವರಿಷ್ಠರು ನನ್ನ ಜತೆಗೆ ಮಾತನಾಡಿರುವುದು ನಿಜ. ಆದರೆ, ನಾನು ಆ ಪಕ್ಷ ಸೇರೋ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದರು.

ʻʻನಾನು ಮಂಡ್ಯದಲ್ಲಿ ಸಂಚರಿಸುವಾಗ ಹೋದ ಕಡೆಗಳಲ್ಲೆಲ್ಲ ಜನರನ್ನು ಬಿಜೆಪಿ ಸೇರ್ಪಡೆ ಬಗ್ಗೆ ಜನರಲ್ಲಿ ವಿಚಾರಿಸುತ್ತಿದ್ದೇನೆ. ಅಥವಾ ಜನರೇ ನನ್ನಲ್ಲಿ ಈ ಬಗ್ಗೆ ಕೇಳ್ತಾರೆ. ಆ ಬಗೆಗೆ ಇನ್ನೂ ನಿರ್ಧರಿಸಿಲ್ಲ ಎಂದು ನಾನು ಹೇಳುತ್ತೇನೆ. ಸದ್ಯಕ್ಕೆ ಪಕ್ಷೇತರರಾಗಿಯೇ ಇರಿ. ಯಾವ ಪಕ್ಷವನ್ನೂ ಸೇರಬೇಡಿ ಎಂದು ಕೂಡಾ ಜನರು ಹೇಳುತ್ತಿದ್ದಾರೆʼʼ ಎಂದು ಸುಮಲತಾ ಅಂಬರೀಶ್‌ ಹೇಳಿದರು. ಹಾಗಂತ ನಾನು ಬಿಜೆಪಿ ಸೇರೋ ಬಗೆಗೆ ಅಧಿಕೃತವಾಗಿ ಯಾವುದೇ ರೀತಿಯ ಸರ್ವೆ ಮಾಡ್ತಿಲ್ಲ. ಮಾಮೂಲಾಗೆ ಜನರ ಜೊತೆಯಲ್ಲಿ ಮಾತಾಡ್ತಿದ್ದೀನಿ ಅಷ್ಟೆ ಎಂದರು.

ಸಿ.ಪಿ. ಯೋಗೇಶ್ವರ್‌ ಪ್ರಯತ್ನ
ʻʻಮಾಜಿ ಸಚಿವರಾಗಿರುವ ಸಿ.ಪಿ. ಯೋಗೇಶ್ವರ್ ಅವರಿಗೆ ನಾನು ಬಿಜೆಪಿ ಸೇರಬೇಕು ಎಂಬ ಭಾವನೆ ಇದೆ. ಆ ಪಕ್ಷದ ವರಿಷ್ಠರೂ ನನ್ನ ಜೊತೆ ಮಾತಾಡಿದ್ದಾರೆ. ಹಾಗಂತ ನಾನು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ನನ್ನ ಆಪ್ತರಾಗಿದ್ದ ಸಚ್ಚಿದಾನಂದ ಅವರು ಬಿಜೆಪಿ ಸೇರಿದ್ದಾರೆ. ಅವರಿಗೆ ಈಗಲೂ ನನ್ನ ಬೆಂಬಲ ಇದೆ. ಇದರಲ್ಲಿ ಯಾವುದೇ ಸೀಕ್ರೇಟ್ ಇಲ್ಲʼʼ ಎಂದು ಸ್ಪಷ್ಟಪಡಿಸಿದರು ಸುಮಲತಾ.

ಸಚ್ಚಿದಾನಂದ ಅವರಿಗೆ ನಾನು ಬೆಂಬಲ ಕೊಟ್ಟಿದ್ದೇನೆ ಎಂಭ ಕಾರಣಕ್ಕಾಗಿ ಅವರು ಫ್ಲೆಕ್ಸ್‌ನಲ್ಲಿ ನನ್ನ ಫೋಟೊ ಬಳಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು ಸುಮಲತಾ.

ಮೈಸೂರು-ಬೆಂಗಳೂರು ಹೆದ್ದಾರಿ ಕೆಲಸ ಬಾಕಿ
ʻʻಬೆಂಗಳೂರು ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಇನ್ನೂ ಕೆಲವು ಕೆಲಸ ಬಾಕಿ ಇರುವ ವಿಚಾರದಲ್ಲಿ ನಾನು ನಿನ್ನೆಯೂ‌ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಮಾತಾಡಿದ್ದೀನಿ. ಸಮಸ್ಯೆಗಳನ್ನು ಸರಿಪಡಿರುವ ಭರವಸೆಯನ್ನು ನೀಡಿದ್ದಾರೆʼʼ ಎಂದು ಸುಮಲತಾ ವಿವರಣೆ ನೀಡಿದರು.

ʻʻಹೆದ್ದಾರಿಯಲ್ಲಿ ಕೆಲವು ಕಡೆ ಎಂಟ್ರಿ ಮತ್ತು ಎಕ್ಸಿಟ್ ಬೇಕಿದೆ ಎಂಬ ಬಗ್ಗೆ ಸೂಕ್ತ ವಿವರಗಳೊಂದಿಗೆ ಬೇಡಿಕೆ ಮಂಡಿಸಿದ್ದೇವೆ. ನಿತಿನ್ ಗಡ್ಕರಿ ಅವರು ಮಾಡಿ ಕೊಡುವುದಾಗಿ ಹೇಳಿದ್ದಾರೆʼʼ ಎಂದರು.

ವಿಧಾನಸೌಧದಲ್ಲೂ ಭ್ರಷ್ಟಾಚಾರವೇ?
ವಿಧಾನಸೌಧದಲ್ಲಿ ಪಿಡಬ್ಲ್ಯುಡಿ ಇಲಾಖೆಯ ಎಂಜಿನಿಯರ್‌ ಒಬ್ಬರ ಕೈಯಲ್ಲಿ ಹತ್ತು ಲಕ್ಷ ರೂ. ಸಿಕ್ಕಿರುವುದರ ಬಗ್ಗೆ ಕೇಳಿದಾಗ, ʻʻನಾನು ಮೊದಲಿಂದಲೂ ಭ್ರಷ್ಟಾಚಾರದ ವಿರುದ್ಧ ನಿಲುವು ಹೊಂದಿದ್ದೇನೆ. ಇಷ್ಟೊಂದು ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ವಿಚಾರ ನೋವು ತರುತ್ತದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತನಿಖೆ ನಡೆಸುವ ಮೂಲಕ ಏನಾಗಿದೆ, ಇದನ್ನು ಯಾರು ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕುʼʼ ಎಂದು ಆಗ್ರಹಿಸಿದರು.

Exit mobile version