ಬೆಂಗಳೂರು: ಕನ್ನಡ ರಾಜ್ಯೋತ್ಸವ ನಿಮಿತ್ತ ನಡೆಯುವ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮಕ್ಕೆ ಅದ್ಭುತ ಪ್ರತಿಕ್ರಿಯೆ ಲಭಿಸಿದೆ. ನಾಳೆ ವೇಳೆಗೆ ಇನ್ನಷ್ಟು ಜನರು ನೋಂದಣಿ ಮಾಡುವ ನಿರೀಕ್ಷೆ ಇದ್ದು, 1.25 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, 10 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾವಿರಾರು ಸಂಘ ಸಂಸ್ಥೆಗಳು ಹೆಸರು ನೋಂದಾಯಿಸಿವೆ. 45 ದೇಶಗಳಲ್ಲಿ, 26 ರಾಜ್ಯಗಳಿಂದ ಜನರು ನೋಂದಣಿ ಮಾಡಿದ್ದಾರೆ. ಇದು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿ ಹೊರಹೊಮ್ಮಿದೆ.
ನೆಲ- ಜಲ- ಆಕಾಶದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿಧಾನಸೌಧದ ಮೆಟ್ಟಿಲು, ಮೈಸೂರು ಅರಮನೆ, ಪೌರಕಾರ್ಮಿಕರ ನಡುವೆ, ಜೋಗ್ ಜಲಪಾತ, ಚಿತ್ರದುರ್ಗದ ಕೋಟೆ, ರಾಯಚೂರಿನ ಥರ್ಮಲ್ ಪ್ಲಾಂಟ್- ಹೀಗೆ ಎಲ್ಲ ಕಡೆ ಗಾಯನ ನಡೆಯಲಿದೆ ಎಂದು ತಿಳಿಸಿದರು. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ 50 ಸಾವಿರ ಜನರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಪಾಲ್ಗೊಳ್ಳಲಿದ್ದಾರೆ ಎಂದು ವಿವರ ನೀಡಿದರು.
ಪ್ರಮುಖ ಕಾರ್ಯಕ್ರಮಗಳು: ವಿಧಾನಸೌಧದ ಮೆಟ್ಟಿಲುಗಳ ಮೇಲೆ, ಕಂಠೀರವ ಕ್ರೀಡಾಂಗಣ, ಮೆಟ್ರೊ ರೈಲು ನಿಲ್ದಾಣ, ವಿಮಾನ ನಿಲ್ದಾಣ, ಹೈಕೋರ್ಟ್, ಹಲಸೂರು ಕೆರೆ, ಮಹದೇವಪುರ ಐಟಿ ಪಾರ್ಕ್, ಮುಂತಾದೆಡೆ.
ಬನ್ನೇರುಘಟ್ಟದಲ್ಲಿ 2000 ಜನರ ಗಾಯನ
ಕೋಟಿ ಕಂಠ ಗಾಯನದ ಅಂಗವಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಬೆಳಗ್ಗೆ 11ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ 2000ಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ | ಕೋಟಿ ಮೀರಿತು ನೋಂದಣಿ: ಕೋಟಿ ಕಂಠ ಗಾಯನಕ್ಕೆ ಅಭೂತಪೂರ್ವ ಸ್ಪಂದನೆ