ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯ ಜತೆಗೆ ಪೂರಕ ಚಾರ್ಜ್ ಶೀಟ್ ಅನ್ನು ಕೂಡ ಎನ್‌ಐಎ ಇದೀಗ ದಾಖಲಿಸಿದೆ.
ಜನವರಿ 20ಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಅದಕ್ಕೆ ಪೂರಕವಾಗಿ ಪ್ರಮುಖ ಆರೋಪಿಗಳಾದ ತುಫೈಲ್ ಹಾಗೂ ಮಹಮ್ಮದ್ ಜಬ್ಬಿರ್ ವಿರುದ್ಧ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇದರಲ್ಲಿ ಕೊಡಗಿನ ತುಫೈಲ್ ವಿರುದ್ಧ ಹೆಚ್ಚಿನ ಆರೋಪ ಮಾಡಲಾಗಿದೆ.
ಮಾಸ್ಟರ್ ಟ್ರೈನರ್ ತುಫೈಲ್‌ನಿಂದ ಇತರ ದಾಳಿಕೋರರಿಗೆ ಆಯುಧ ಬಳಸುವ ತರಬೇತಿ ನೀಡುತ್ತಿದ್ದ. ನಿಷೇಧಿತ ಪಿಎಫ್ಐ ಸಂಘಟನೆಯ ಸರ್ವಿಸ್ ಟೀಂಗೆ ಫ್ರೀಡಂ ಹಾಲ್‌ನಲ್ಲಿ ತರಬೇತಿ ಕೊಡಿಸಲಾಗಿತ್ತು. ಕೊಡಗು, ಮೈಸೂರು, ತಮಿಳುನಾಡಿನಲ್ಲಿ ಈತನ ದಾಳಿ ಸಂಚುಗಳು ನಡೆದಿದ್ದವು. ನೆಟ್ಟಾರು ಹತ್ಯೆಗೆ ಸಂಚು ರೂಪಿಸಲು ನಡೆಸಿದ ಗೌಪ್ಯ ಸಭೆಯಲ್ಲಿ ಪಿಎಫ್ಐ ಪುತ್ತೂರು ಘಟಕದ ಅಧ್ಯಕ್ಷ ಜಬ್ಬಿರ್ ಕೂಡ ಭಾಗಿಯಾಗಿದ್ದ ಎಂದು ವರದಿ ನೀಡಲಾಗಿದೆ.
ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಸುಮಾರು 1500 ಪುಟಗಳ ಚಾರ್ಜ್‌ಶೀಟ್ ಈ ಹಿಂದೆ ಎನ್‌ಐಎ ಸಲ್ಲಿಸಿತ್ತು. ‘ಸಮಾಜದಲ್ಲಿ-ಜನರಲ್ಲಿ ಭಯ ಹುಟ್ಟಿಸುವ ಸಲುವಾಗಿ ಪ್ರವೀಣ್ ನೆಟ್ಟಾರು ಅವರನ್ನು ಪಿಎಫ್ಐ ಹತ್ಯೆ ಮಾಡಿದೆ. ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿ ಸೃಷ್ಟಿಸುವುದು ಆ ಸಂಘಟನೆ ಮುಖಂಡರ ಪ್ರಮುಖ ಉದ್ದೇಶ. 2047ರ ಹೊತ್ತಿಗೆ ಇಸ್ಲಾಮಿಕ್ ಆಳ್ವಿಕೆ ಸ್ಥಾಪಿಸುವ ನಿಟ್ಟಿನಲ್ಲಿ ಪಿಎಫ್ಐ ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದರು. ವಿವಿಧ ಹಿಂದು ಮುಖಂಡರ ಹತ್ಯೆಗಳನ್ನು ನಡೆಸಲು ಸೇವಾ ತಂಡಗಳು, ಕಿಲ್ಲರ್ ಸ್ಕ್ವಾಡ್ಗಳು ಎಂಬ ರಹಸ್ಯ ತಂಡಗಳನ್ನು ಪಿಎಫ್ಐ ರಚನೆ ಮಾಡಿಕೊಂಡಿತ್ತು. ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಿ, ಆತನನ್ನು ಕೊಲ್ಲಲು ಯೋಜನೆ ರೂಪಿಸುತ್ತಿದ್ದರು. ಅದಕ್ಕಾಗಿ ಸದಸ್ಯರಿಗೆ ತರಬೇತಿ ನೀಡುತ್ತಿದ್ದರು. ಬಳಿಕ ಆಯಾ ಜಿಲ್ಲಾ ಮುಖ್ಯಸ್ಥನಿಗೆ ಸೂಚನೆ ನೀಡುತ್ತಿದ್ದರು. ಹೀಗೆ ಟಾರ್ಗೆಟ್ ಆದ ವ್ಯಕ್ತಿಗಳಲ್ಲಿ ಪ್ರವೀಣ್ ನೆಟ್ಟಾರು ಕೂಡ ಒಬ್ಬನಾಗಿದ್ದ’ ಎಂಬ ಅಂಶಗಳನ್ನು ಎನ್‌ಐಎ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಮಹಮ್ಮದ್ ಶಿಯಾಬ್, ಅಬ್ದುಲ್ ಬಶೀರ, ರಿಯಾಝ್, ಮುಸ್ತಫಾ ಪೈಚಾರ್, ಮಸೂದ್ ಕೆ ಎ, ಕೊಡಾಜೆ ಮೊಹಮ್ಮದ್ ಶರೀಫ್, ಅಬೂಬಕ್ಕರ್ ಸಿದ್ದಿಕ್, ನೌಫಲ್ ಎಂ., ಇಸ್ಮಾಯಿಲ್ ಶಾಫಿ.ಕೆ., ಕೆ ಮಹಮ್ಮದ್ ಇಕ್ಬಾಲ್, ಶಹೀದ್ ಎಂ., ಮಹಮ್ಮದ್ ಶಫೀಕ್ ಜಿ., ಉಮ್ಮರ್ ಫಾರೂಕ್ ಎಂ.ಆರ್., ಅಬ್ದುಲ್ ಕಬೀರ್ ಸಿ.ಎ., ಮುಹಮ್ಮದ್ ಇಬ್ರಾಹಿಂ ಶಾ., ಸೈನುಲ್ ಅಬಿದ್ ವೈ., ಶೇಖ್ ಸದ್ದಾಂ ಹುಸೇನ್., ಜಾಕಿಯಾರ್ ಎ., ಎನ್.ಅಬ್ದುಲ್ ಹಾರಿಸ್., ತುಫೈಲ್ ಎಂ. ಎಚ್. ಎಂಬುವರ ಹೆಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: Dakshina Kannada News: ಪ್ರವೀಣ್ ನೆಟ್ಟಾರು ಮನೆಗೆ ಜೆ.ಪಿ.ನಡ್ಡಾ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ