ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿಯ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ, ಅವರ ವಿರುದ್ಧದ ಲೋಕಾಯುಕ್ತ ತನಿಖೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬಿಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಡಿಎ ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಿ ನವೆಂಬರ್ ೨ರೊಳಗೆ ವರದಿ ನೀಡುವಂತೆ ಜನಪ್ರತಿನಿಧಿ ನ್ಯಾಯಾಲಯವು ಲೋಕಾಯುಕ್ತಕ್ಕೆ ಆದೇಶ ನೀಡಿತ್ತು. ಇದರಂತೆ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿತ್ತು. ಇದರ ವಿರುದ್ಧ ಬಿಎಸ್‌ವೈ ಮತ್ತು ಇತರರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಗುರುವಾರ ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠ ಈ ಬಗ್ಗೆ ವಿಚಾರಣೆ ನಡೆಸಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಲೋಕಾಯುಕ್ತ ತನಿಖೆಗೆ ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆ ಕೇವಲ ಯಡಿಯೂರಪ್ಪ ಅವರ ವಿರುದ್ದದ ತನಿಖೆಗೆ ಮಾತ್ರ ಅನ್ವಯವಾಗುತ್ತದೆ. ಉಳಿದವರ ವಿಚಾರಣೆ ಮುಂದುವರಿಯಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ನಡುವೆ, ಕೆಲವೊಂದು ಹೆಚ್ಚುವರಿ ಮಾಹಿತಿಗಳ ಅಗತ್ಯವಿದೆ ಎಂದಿರುವ ಕೋರ್ಟ್ ದೂರುದಾರ ಟಿ.ಕೆ. ಅಬ್ರಹಾಂಗೆ ನೋಟಿಸ್ ನೀಡಿದ್ದು, ನಾಲ್ಕು ವಾರಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ.
ಹೈಕೋರ್ಟ್ ಆದೇಶದಂತೆ ಕ್ರಮ
ಬಿಎಸ್‌ವೈ ಮತ್ತು ಕುಟುಂಬ ಹಾಗೂ ಇತರರ ಮೇಲಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಲು ರಾಜ್ಯ ಹೈಕೋರ್ಟ್ ಸೆ.೭ರಂದು ಹಸಿರುನಿಶಾನೆ ತೋರಿತ್ತು. ಈ ಸೂಚನೆಯಂತೆ ಜನಪ್ರತಿನಿಧಿ ನ್ಯಾಯಾಲಯವು ಇದೀಗ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಆದೇಶ ನೀಡಿತು.
ಏನಿದು ಪ್ರಕರಣ?
ಬಿಡಿಎ ಗುತ್ತಿಗೆ ಹಂಚಿಕೆ ವೇಳೆ ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪನಿಯಿಂದ ಕೋಟ್ಯಂತರ ರೂಪಾಯಿಗಳನ್ನು ನಗದು ಮತ್ತು ಶೆಲ್ ಕಂಪೆನಿಗಳ ಮೂಲಕ ಲಂಚ ಪಡೆದಿದ್ದಾರೆ. ಹೀಗಾಗಿ, ಅವರ ವಿರುದ್ಧ ವಿಶೇಷ ತನಿಖಾ ದಳದ ಮೂಲಕ ತನಿಖೆ ಮಾಡಿಸಬೇಕು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದರು. ಆದರೆ, ಈ ರೀತಿ ದೂರು ಸಲ್ಲಿಸಲು ರಾಜ್ಯಪಾಲರಿಂದ ಅಗತ್ಯ ಪೂರ್ವನುಮತಿ ಪಡೆದಿಲ್ಲ ಎಂದು ಯಡಿಯೂರಪ್ಪ ಮತ್ತು ಇತರರ ವಿರುದ್ದದ ಖಾಸಗಿ ದೂರನ್ನು ವಿಶೇಷ ನ್ಯಾಯಾಲಯ ವಜಾ ಮಾಡಿತ್ತು.
ಆಗ ಟಿ.ಜೆ. ಅಬ್ರಹಾಂ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಹೈಕೋರ್ಟ್ ಜನಪ್ರತಿನಿಧಿ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿತ್ತು. ಅಲ್ಲದೇ, ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಟಿ.ಜೆ. ಅಬ್ರಹಾಂ ಅವರ ಖಾಸಗಿ ದೂರನ್ನು ಮರುಪರಿಗಣಿಸಲು ಹೈಕೋರ್ಟ್ ಆದೇಶಿಸಿತ್ತು. ಅದರಂತೆ ಜನಪ್ರತಿನಿಧಿ ನ್ಯಾಯಾಲಯ ಕಾರ್ಯಾಚರಿಸಿ ಲೋಕಾಯುಕ್ತ ತನಿಖೆಗೆ ಆದೇಶ ನೀಡಿತ್ತು.
ಯಾರಿಗೆಲ್ಲ ಸಂಕಷ್ಟ?
ಬಿ.ಎಸ್. ಯಡಿಯೂರಪ್ಪ, ಪುತ್ರ ಬಿ.ವೈ ವಿಜಯೇಂದ್ರ, ಶಶಿಧರ ಮರಡಿ, ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಅಳಿಯ ಸಂಜಯ್ ಶ್ರೀ, ಚಂದ್ರಕಾಂತ್ ರಾಮಲಿಂಗಂ, ಅಂದಿನ ಬಿಡಿಎ ಅಧ್ಯಕ್ಷ ಹಾಗೂ ಹಾಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಐಎಎಸ್ ಅಧಿಕಾರಿ ಡಾ. ಜಿ ಸಿ ಪ್ರಕಾಶ್, ಕೆ ರವಿ, ಯಡಿಯೂರಪ್ಪ ಅವರ ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ ಅವರು ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದಾರೆ.
ಕಾನೂನು ಹೋರಾಟ: ಎಲ್ಲಿಂದ ಎಲ್ಲಿತನಕ?
ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್‌ಗಳಾದ 7, 8, 9, 10 ಮತ್ತು 13, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 383, 384, 415, 418, 420, 34 ಮತ್ತು 120ಬಿ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್ 3 ಮತ್ತು 4ರ ಅಡಿ ಅಪರಾಧಗಳನ್ನು ಉಲ್ಲೇಖಿಸಿ ಅರ್ಜಿದಾರರು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ 2020ರ ನವೆಂಬರ್ 11ರಂದು ದೂರು ಸಲ್ಲಿಸಿದ್ದರು. ಎಫ್‌ಐಆರ್ ದಾಖಲಿಸುವ ಬದಲಿಗೆ ನವೆಂಬರ್ 21ರಂದು ಎಸಿಬಿ ಅಧಿಕಾರಿಗಳು ದೂರಿನಲ್ಲಿನ ವಿಚಾರಗಳಿಗೆ ಸ್ಪಷ್ಟನೆ ಕೇಳಿ ದೂರುದಾರರಿಗೆ ನೋಟಿಸ್ ಜಾರಿ ಮಾಡಿದ್ದರು. ಈ ಮಧ್ಯೆ, ಯಡಿಯೂರಪ್ಪ ಮತ್ತು ಸೋಮಶೇಖರ್ ವಿರುದ್ಧದ ತನಿಖೆಗೆ ಅನುಮತಿ ಕೋರಿ ಅಬ್ರಹಾಂ ಅವರು ರಾಜ್ಯಪಾಲರು ಮತ್ತು ವಿಧಾನಸಭೆ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದರು. 2021ರ ಜೂನ್ 24ರಂದು ರಾಜ್ಯಪಾಲರು ಅನುಮತಿ ನಿರಾಕರಿಸಿದ್ದರು. ಇದನ್ನು ಆಧರಿಸಿ, 2021ರ ಜುಲೈ 8ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಖಾಸಗಿ ದೂರನ್ನು ವಜಾ ಮಾಡಿತ್ತು. ಹೀಗಾಗಿ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಪ್ರಕರಣ ದಾಖಲಿಸಲು ಅನುಮತಿ ನೀಡಿ ಆದೇಶಿಸಿತ್ತು.