ನವ ದೆಹಲಿ: ರಾಜ್ಯ ಸರ್ಕಾರವು ಮುಂದಿನ ವಾರದೊಳಗೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸಬೇಕೆಂದು (BBMP Election) ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಗುರುವಾರ ಬಿಬಿಎಂಪಿ ಚುನಾವಣೆ ಸಂಬಂಧ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಈ ಹಿಂದೆ 8 ವಾರಗಳಲ್ಲಿ ಚುನಾವಣೆ ನಡೆಸಲು ಸೂಚನೆ ನೀಡಲಾಗಿತ್ತು. ಆದರೆ ಅದು ಯಾಕೆ ಸಾಧ್ಯವಾಗಲಿಲ್ಲವೆಂದು ನ್ಯಾ.ಎ.ಎಂ.ಖಾನಿಲ್ಕರ್ ನೇತೃತ್ವದ ಪೀಠ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿರುವ ವಕೀಲರು, ಮೀಸಲಾತಿಗಾಗಿ ರಚಿಸಲಾಗಿದ್ದ ಭಕ್ತವತ್ಸಲ ಸಮಿತಿಯು ತಡವಾಗಿ ವರದಿ ನೀಡಿದೆ. ಈ ಕಾರಣಕ್ಕಾಗಿ ಮೀಸಲಾತಿ ಪ್ರಕಟಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಇದನ್ನು ಆಲಿಸಿದ ನ್ಯಾಯಪೀಠವು, ವಾರದೊಳಗೆ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ಸರ್ಕಾರ ಮೀಸಲಾತಿ ಪ್ರಕಟಿಸಿದ ಕೂಡಲೇ ಚುನಾವಣಾ ಆಯೋಗವು ಎಲ್ಲ ಪ್ರಕ್ರಿಯೆಗಳನ್ನು ಆರಂಭಿಸಬೇಕೆಂದು ಸೂಚನೆ ನೀಡಿದೆ. ಇದರ ವಿಚಾರಣೆಯನ್ನು ಸುಪ್ರೀಂ ಆಗಸ್ಟ್ ೨೬ಕ್ಕೆ ಮುಂದೂಡಿದೆ.
ಸಕಾಲದಲ್ಲಿ ಚುನಾವಣೆ
ಬಿಬಿಎಂಪಿ ಚುನಾವಣೆ ಸಕಾಲದಲ್ಲಿ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮನವಿ ಮಾಡಿದ್ದಾರೆ. ಬಿಬಿಎಂಪಿ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಇನ್ನು ಒಂದು ವಾರದ ಒಳಗೆ ವಾರ್ಡ್ ಮೀಸಲಾತಿ ಘೋಷಣೆ ಮಾಡಬೇಕು ಎಂದು ಆದೇಶ ನೀಡಿರುವುದನ್ನು ಸ್ವಾಗತಿಸಿದ್ದಾರೆ. ಸರ್ಕಾರ ಕೂಡಲೇ ವಾರ್ಡ್ ಮೀಸಲಾತಿ ಮಾಡಿ , ಚುನಾವಣೆ ಆಯೋಗವು ಸುಗಮವಾಗಿ ಬಿಬಿಎಂಪಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಅಬ್ದುಲ್ ವಾಜಿದ್ ಮನವಿ ಮಾಡಿದರು.
ಇದನ್ನೂ ಓದಿ | BBMP | ಗಾಂಧಿ ಬಜಾರ್‌ನಲ್ಲಿ ಗರ್ಜಿಸಿದ ಜೆಸಿಬಿ: 30 ಕೋಟಿ ರೂ. ಮೌಲ್ಯದ ಬಿಬಿಎಂಪಿ ಆಸ್ತಿ ವಶ