ಹಾಸನ: ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧನವಾಗಿ ವಿಚಾರಣೆ ನಡೆಯುತ್ತಿರುವ ನಡುವೆಯೇ ಎಚ್.ಡಿ.ರೇವಣ್ಣ ಕುಟುಂಬದ ಮತ್ತೊಬ್ಬರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪ್ರಜ್ವಲ್ ಸಹೋದರ ಸೂರಜ್ ರೇವಣ್ಣ (Suraj Revanna Case) ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ (unnatural sexual abuse) ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಡಿಜಿಪಿ, ಎಸ್‌ಪಿ, ಸಿಎಂ ಹಾಗೂ ಗೃಹ ಸಚಿವರಿಗೆ ದೂರು ಸಲ್ಲಿಕೆಯಾಗಿದೆ. ಮತ್ತೊಂದೆಡೆ ದೂರು ಸಲ್ಲಿಸಿದ ವ್ಯಕ್ತಿಯ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ.
ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮ ಆರೋಪ ಮಾಡಿ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತ ದೂರು ನೀಡಿದ್ದರು. ಆದರೆ, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೂರಜ್ ರೇವಣ್ಣ ವಿರುದ್ಧ ದೂರುದಾರ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದ. ಐದು ಕೋಟಿ ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸುಳ್ಳು ದೂರು ನೀಡಿ ಬೆದರಿಕೆ ಹಾಕಿರುವ ಬಗ್ಗೆ ಉಲ್ಲೇಖಿಸಿ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ದೂರು ಸಲ್ಲಿಕೆ ಮಾಡಿದ್ದರಿಂದ ಐಪಿಸಿ ಸೆಕ್ಸೆನ್ 384, 506 ರ ಅಡಿಯಲ್ಲಿ 168/2024 ರಡಿ ಕೇಸ್ ದಾಖಲಾಗಿದೆ.
ನಿಮ್ಮ ಬಾಸ್ ಬಳಿ ಕೆಲಸ ಕೊಡಿಸು ಎಂದು ಅರಕಲಗೂಡು ಮೂಲದ ಯುವಕ ಕೇಳಿಕೊಂಡಿದ್ದ. ನೀನೇ ಹೋಗಿ ಬಾಸ್ ಭೇಟಿ ಮಾಡು ಎಂದು ಫೊನ್ ನಂಬರ್ ಕೊಟ್ಟಿದ್ದೆ. ಜೂನ್ 16 ರಂದು ಗನ್ನಿಕಡದ ತೋಟದ ಮನೆಗೆ ಕೆಲಸ ಕೇಳಲು ಸಂತ್ರಸ್ತ ಹೋಗಿದ್ದ. ಕೆಲಸ ಕೇಳಿ ವಾಪಸ್ ಬಂದ ಬಳಿಕ ಬ್ಲ್ಯಾಕ್ ಮೇಲ್ ಮಾಡಿರೊದಾಗಿ ಆರೋಪಿಸಲಾಗಿದೆ. ನೀನು ಕೆಲಸ ಕೊಡಿಸಲ್ಲ, ನಿಮ್ಮ ಬಾಸೂ ಕೆಲಸ ಕೊಡಿಸ್ತಿಲ್ಲ. ನನಗೆ ತುಂಬಾ ಕಷ್ಟ ಇದೆ, ನನಗೆ ಹಣ ಬೇಕು. ನೀನು, ನಿಮ್ಮ ಬಾಸ್‌ನಿಂದ ಐದು ಕೋಟಿ ಹಣ ಕೊಡಿಸದಿದ್ದರೆ, ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಸಂತ್ರಸ್ತ ಬೆದರಿಕೆ ಹಾಕಿದ್ದಾನೆ ಎಂದು ದೂರುದಾರ ಶಿವಕುಮಾರ್ ಹೇಳಿದ್ದಾರೆ.
ಈ ವಿಚಾರವನ್ನು ನಾನು ನಮ್ಮ ಬಾಸ್‌ಗೆ ತಿಳಿಸಿದೆ. ಆತ ಕೆಲಸ ಕೇಳಿಕೊಂಡು ಮನೆಗೆ ಬಂದಾಗ ಭದ್ರತೆಗಾಗಿ ಇದ್ದ ಪೊಲೀಸ್ ಸೇರಿ ಹಲವಾರು ಜನರು ಇದ್ದರು. ನಾನೇನು ತಪ್ಪು ಮಾಡಿಲ್ಲ, ಯಾಕೆ ಹಣ ಕೊಡಬೇಕು ಎಂದು ಬಾಸ್ ಹೇಳಿದರು. ನಂತರ ಜೂನ್ 18 ರಂದು ಹಾಸನದ ಜಿಲ್ಲಾಸ್ಪತ್ರೆಗೆ ಬಂದು ಆಸ್ಪತ್ರೆ ಚೀಟಿಗೆ ಎಂಎಲ್‌ಸಿ ಸೀಲ್ ಹಾಕಿಸಿ ಫೋಟೊ ಹಾಕಿ ಬೆದರಿಕೆ ಹಾಕಿದ್ದಾನೆ. ಮೆಡಿಕೊ ಲೀಗಲ್ ಕೇಸ್ ಸೀಲ್ ಇರುವ ಆಸ್ಪತ್ರೆ ಚೀಟಿ ತೋರಿಸಿ ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾನೆ.
ಐದು ಕೋಟಿ ಬಳಿಕ ಮೂರು ಕೋಟಿ ಅಥವಾ ಕಡೆಗೆ ಎರಡೂವರೆ ಕೋಟಿಯಾದ್ರು ಹಣ ಕೊಡಿಸು ಎಂದು ಡಿಮ್ಯಾಂಡ್ ಮಾಡಿದ್ದಾನೆ. ಹಣ ಕೊಡಿಸದಿದ್ದರೆ ದೊಡ್ಡ ಕುಟುಂಬವಾದ ಅವರ ಮರ್ಯಾದೆ ಕಳೆಯುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದ ಬಗ್ಗೆ ದೂರು ಸಲ್ಲಿಸಲಾಗಿದೆ ಎಂದು ಸೂರಜ್ ಆಪ್ತ ಹೇಳಿದ್ದಾರೆ.
ಏನಿದು ಪ್ರಕರಣ?
ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದು, ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಸೂರಜ್ ರೇವಣ್ಣ ವಿರುದ್ಧ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತರೊಬ್ಬರು ಆರೋಪ ಮಾಡಿದ್ದರು. ಈ ಬಗ್ಗೆ ಡಿಜಿಪಿ, ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.
ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾದ ಜೆಡಿಎಸ್ ಕಾರ್ಯಕರ್ತ, ಜೂನ್ 16ರಂದು ಸೂರಜ್ ತನಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, ಗನ್ನಿಕಡ ತೋಟದ ಮನೆಗೆ ಆಹ್ವಾನಿಸಿದ್ದರು. ಉದ್ಯೋಗ ನೀಡುವ ಭರವಸೆ ನೀಡಿ ತನ್ನನ್ನು ಕರೆಸಿಕೊಂಡು, ಸಲಿಂಗಕಾಮಕ್ಕೆ ಒತ್ತಾಯಿಸಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದರಿಂದ ನನ್ನ ದೇಹದ ಮೇಲೆ ಗಾಯಗಳಾಗಿದ್ದು, ಈ ಬಗ್ಗೆ ಎಲ್ಲಾದರೂ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ | Prajwal Revanna Case: ರೇವಣ್ಣ ಜಾಮೀನು ರದ್ದು ಕೋರಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ
ದೌರ್ಜನ್ಯಕ್ಕೆ ಒಳಗಾದ ಯುವಕನ ದೇಹದ ಹಲವು ಭಾಗಗಳಲ್ಲಿ ಕಚ್ಚಿದ ಗುರುತುಗಳಿವೆ, ಮರ್ಮಾಂಗದ ಮೇಲೂ ಗಾಯವಾಗಿದೆ ಎಂದು ಆರೋಪಗಳು ಕೇಳಿಬಂದಿವೆ.