ಬೆಂಗಳೂರು: ಭ್ರಷ್ಟಾಚಾರದ ಕುರಿತು ಟೀಕೆ ಮಾಡುವಾಗ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಮಾತನ್ನು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಆಕ್ಷೇಪಿಸಿದ್ದಾರೆ.
ರಾಜ್ಯ ಸರ್ಕಾರದ ಮೂರನೇ ವರ್ಷದ ಪ್ರಯುಕ್ತ ದೊಡ್ಡಬಳ್ಳಾಪುರದಲ್ಲಿ ಸೆಪ್ಟೆಂಬರ್ 10ರಂದು ಆಯೋಜನೆ ಮಾಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಗಂಗೋತ್ರಿ ಎಂದಿದ್ದರು. ಆನಂತರವೂ ಅನೇಕ ಸಂದರ್ಭಗಳಲ್ಲಿ ಕಟೀಲ್ ಅವರು ಇದೇ ಮಾತನ್ನು ಉಲ್ಲೇಖಿಸಿದ್ದರು.
ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಪರಿವರ್ತನೆಯ ಯುಗ ಆರಂಭವಾಗಿದೆ. ವಿದ್ಯಾನಿಧಿಯನ್ನು ಬೊಮ್ಮಾಯಿಯವರ ಆರಂಭಿಸಿದ್ದಾರೆ. ಕಿಸಾನ್ ಸಮ್ಮಾನ್‍ಗೆ ಹೆಚ್ಚುವರಿ ಮೊತ್ತ ಸೇರಿಸಿ ಕೊಡಲಾಗುತ್ತಿದೆ ಎಂದರಲ್ಲದೆ, ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಎಂದು ಟೀಕಿಸಿದ್ದರು.
ಈ ಕುರಿತು ಎಸ್. ಸುರೇಶ್ ಕುಮಾರ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಭ್ರಷ್ಟಾಚಾರವನ್ನು ಖಂಡಿಸುವಾಗ “ಭ್ರಷ್ಟಾಚಾರದ ಗಂಗೋತ್ರಿ” ಎಂದು ಹೇಳಿ “ಪವಿತ್ರ ಗಂಗೋತ್ರಿ” ಯನ್ನೇ ಭ್ರಷ್ಟ ಮಾಡುವುದು ಸರಿಯಲ್ಲ” ಎಂದಿದ್ದಾರೆ. ಆದರೆ ಎಲ್ಲಿಯೂ ರಾಜ್ಯ ಬಿಜೆಪಿ ಅಧ್ಯಕ್ಷರ ಹೆಸರನ್ನು ಸುರೇಶ್ ಕುಮಾರ್ ಉಲ್ಲೇಖ ಮಾಡಿಲ್ಲ.
ಇದನ್ನೂ ಓದಿ | BJP ಜನಸ್ಪಂದನ| ಯಡಿಯೂರಪ್ಪ ಕೃಷ್ಣ, ಬೊಮ್ಮಾಯಿ ಅರ್ಜುನ: ದಿಗ್ವಿಜಯ ಯಾತ್ರೆ ಹೊರಟಿದೆ, ಸಾಧ್ಯವಿದ್ದರೆ ತಡೆಯಿರಿ: ನಳಿನ್