ಬೆಂಗಳೂರು: ತಿಲಕ್ ನಗರದಲ್ಲಿ ಸೆರೆಯಾಗಿರುವ ಶಂಕಿತ ಉಗ್ರ (Terror Accused) ಅಖ್ತರ್ ಹುಸೇನ್ ಅಲಿಯಾಸ್ ಅಬ್ದುಲ್ ಹುಸೇನ್ ಲಷ್ಕರ್ ಧರ್ಮಾಂಧತೆ ಬೆಳೆಸಿಕೊಂಡಿದ್ದ. ಹೀಗಾಗಿ ಧರ್ಮಯುದ್ಧ ಎಂಬಂತೆ ಭಾರತದಲ್ಲಿ ಕುಕೃತ್ಯಕ್ಕೆ ಸಂಚು ರೂಪಿಸಿದ್ದ. ಅಲ್ಲದೆ, ಕೆಲವೇ ದಿನಗಳಲ್ಲಿ ಕಾಶ್ಮೀರಕ್ಕೆ ತೆರಳಲು ಬಿಗ್ ಪ್ಲ್ಯಾನ್ ಮಾಡಿದ್ದ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಅಸ್ಸಾಂ ಮೂಲದ ತೆಲಿತಿಕಾರ್ ಗ್ರಾಮದ ಅಬ್ದುಲ್ ಖಾದರ್ ಲಷ್ಕರ್ ಎಂಬಾತನ ಮಗ ಅಬ್ದುಲ್ ಹುಸೇನ್ ಲಷ್ಕರ್ (ಅಖ್ತರ್ ಹುಸೇನ್) ಕೆಲಸ ಅರಸಿ ಬಂದು, ನಗರದ ತಿಲಕನಗರ ಉಸ್ಮಾನ್ ಘನಿ ಮಸೀದಿ ಹತ್ತಿರ ವಾಸವಿದ್ದ. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಖ್ತರ್ ಹುಸೇನ್ ರಾತ್ರಿ ವೇಳೆಯಲ್ಲೇ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ. ಧರ್ಮಾಂಧನಾಗಿ ಭಾರತವವನ್ನು ದ್ವೇಷಿಸುತ್ತಿದ್ದ ಈತ ಅಲ್‌ಖೈದಾಗೆ ಸಂಬಂಧಿಸಿದ ವೆಬ್‌ಸೈಟ್‌ಗಳನ್ನು ಫಾಲೋ ಮಾಡುತ್ತಿದ್ದ.
ಈ ವೇಳೆ ಸೌದಿ ಅರೇಬಿಯಾ ಹಾಗೂ ಅಫ್ಘಾನಿಸ್ತಾನ ಭಯೋತ್ಪಾದಕ ಹ್ಯಾಂಡ್ಲರ್‌ಗಳ ಸಂಪರ್ಕ ಸಿಕ್ಕಿತ್ತು. ಉಗ್ರರ ಹ್ಯಾಂಡ್ಲರ್‌ನಿಂದ ಭಯೋತ್ಪಾದನಾ ಚಟುವಟಿಕೆ ಚುರುಕಾಯಿತು. ಬೆಂಗಳೂರಲ್ಲಿ ಯುವಕರನ್ನು ಸೆಳೆಯಲು ಬಿಗ್ ಪ್ಲ್ಯಾನ್ ಮಾಡಿದ್ದ ಅಖ್ತರ್, ಉಗ್ರ ಸಂಘಟನೆಯನ್ನು ಆ್ಯಕ್ಟಿವ್ ಮಾಡಲು ಟೆಲಿಗ್ರಾಮ್ ಮೊರೆ ಹೋಗಿದ್ದ. The eagle Of kohrasun and hinder egle ಟೆಲಿಗ್ರಾಮ್ ಗ್ರೂಪ್ ರಚಿಸಿ ಧರ್ಮ ಯುದ್ಧವನ್ನು ಮಾಡಲು ಪ್ರಚೋದನೆ ಮಾಡಲು ಸಂಚು ರೂಪಿಸಿದ್ದನು.
ಇದನ್ನೂ ಓದಿ | Terrorist arrest | ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿದ್ದ ಶಂಕಿತ ಉಗ್ರ
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370ನೇ ವಿಧಿ ರದ್ದುಪಡಿಸಿದಾಗ ಸೈನ್ಯದ ವಿರುದ್ಧ ಸಮರ ಸಾರಲು ಈತ ನಿರ್ಧರಿಸಿದ್ದ. ಟೆಲಿಗ್ರಾಮ್‌ನಲ್ಲಿ ಕಾಶ್ಮೀರಿ ಮುಸ್ಲಿಮರ ಮೇಲೆ ಸೈನಿಕರು ದೌರ್ಜನ್ಯ ನಡೆಸುತ್ತಿದ್ದಾರೆ. ನಾವು ಸೈನ್ಯದ ವಿರುದ್ಧ ಸಮರ ಸಾರಬೇಕು ಎಂದು ಯುವಕರನ್ನು ಪ್ರಚೋದಿಸುತ್ತಿದ್ದ. ಈ ನಿಟ್ಟಿನಲ್ಲಿ ಬೆಂಗಳೂರಿನ ಯುವಕರನ್ನು ಕಾಶ್ಮೀರ ಹಾಗೂ ಅಫ್ಘಾನಿಸ್ತಾನದ ಖೋರಾಸಸ್‌ಗೆ ಕಳುಹಿಸಲು ಸಂಚು ಮಾಡಿದ್ದ.
ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ, ರಾಷ್ಟ್ರ ದ್ರೋಹ, ವಿಧ್ವಂಸಕ ಕೃತ್ಯಕ್ಕೆ ಯುವಕರಿಗೆ ಪ್ರಚೋದಿಸಲು ಕಾಶ್ಮೀರಕ್ಕೆ ತೆರಳಿ, ಭಾರತದಲ್ಲಿ ಹಲವು ಕಡೆ ಬಾಂಬ್ ಸ್ಫೋಟ ಮಾಡುವ ಬಗ್ಗೆ ಈತ ಸ್ಕೆಚ್ ಹಾಕಿದ್ದ. ಈ ಹಿನ್ನೆಲೆಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಉಗ್ರ ಅಖ್ತರ್ ಹುಸೇನ್, ರಾತ್ರಿ ವೇಳೆಯಲ್ಲೇ ಬೆಂಗಳೂರಿನ ಸೂಕ್ಷ್ಮ ಪ್ರದೇಶವನ್ನು ಹುಡುಕುತ್ತಿದ್ದ. ಈ ಎಲ್ಲ ಮಾಹಿತಿ ತನಿಖಾ ಸಂಸ್ಥೆಗಳಿಂದ ಸಿಸಿಬಿಗೆ ರವಾನೆಯಾಗಿತ್ತು. ಎನ್.ಐ.ಎ ಹಾಗೂ ಐ.ಬಿ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ತಿಲಕ್ ನಗರದಲ್ಲಿ ಶಂಕಿತ ಉಗ್ರ ಅಖ್ತರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಪ್ರಕರಣ ದಾಖಲು: ಅಖ್ತರ್ ಹುಸೇನ್ ವಿರುದ್ಧ ಸಿಸಿಬಿ ಅಧಿಕಾರಿಗಳು ನೀಡಿದ ದೂರಿನ ಅನ್ವಯ ತಿಲಕ್‌ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153A (ಕೋಮುಗಲಭೆ) 123 (ಗಲಭೆಗೆ ಸಂಚು),121 (ವಿಧ್ವಂಸಕ ಕೃತ್ಯಕ್ಕೆ ಸಂಚು),120B (ಒಳ ಸಂಚು), ಸೆಕ್ಷನ್ 15 (ಟೆರರಿಸ್ಟ್ ಆ್ಯಕ್ಟ್),16 (ಪನಿಶ್ಮೆಂಟ್ ಫಾರ್ ಟೆರರಿಸ್ಟ್ ಆ್ಯಕ್ಟ್) ,18 (ಉಗ್ರ ಸಂಘಟನೆಗೆ ಪ್ರೇರೇಪಣೆ) ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ನಿಷ್ಕ್ರಿಯವಾದ ಎಟಿಸಿ?
ಭಯೋತ್ಪಾದನಾ ಚಟುವಟಿಕೆಗಳ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಬಹು ನಿರೀಕ್ಷೆ ಮೂಡಿಸಿದ್ದ ಭಯೋತ್ಪಾದನಾ ನಿಗ್ರಹ ದಳ (ಎಟಿಸಿ) ಪ್ರಾರಂಭಿಕ ಹಂತದಲ್ಲಿ ಸಾಕಷ್ಟು ಭರವಸೆ ಮೂಡಿಸಿತ್ತು. ಆದರೆ ಸಿಸಿಬಿಯಿಂದ ಬೇರ್ಪಟ್ಟ ಬಳಿಕ ಎಟಿಸಿ ಬಗ್ಗೆ ಪೊಲೀಸ್ ಇಲಾಖೆಯಲ್ಲೇ ನಿರಾಸಕ್ತಿ ಮೂಡಿದೆ.
ನಗರದಲ್ಲಿ ಉಗ್ರರು ಸಿಕ್ಕಿಬಿದ್ದರೂ ಈ ವಿಂಗ್‌ಗೆ ಮಾಹಿತಿ ಸಿಗುವುದು ತಡವಾಗಿ, ಕೇಂದ್ರದ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ (ಎಟಿಎಸ್)ನಂತೆ ಬೆಂಗಳೂರಿನ ಎಟಿಸಿ ಕಾರ್ಯನಿರ್ವಹಿಸುತ್ತದೆ ಎಂಬ ಭರವಸೆ ಇತ್ತು. ಅದೇ ರೀತಿ ಆರಂಭದ ದಿನಗಳಲ್ಲಿ ಸಿಸಿಬಿಯಲ್ಲಿ ಈ ಸ್ಪೆಷಲ್ ಸ್ಕ್ವಾಡ್ ಭರವಸೆ ಮೂಡಿಸಿತ್ತು. ಬಳಿಕ ಈ ವಿಭಾಗದ ಕಾರ್ಯದಕ್ಷತೆ ಕಡಿಮೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಹಾಲಿ ಎಟಿಸಿಯಲ್ಲಿ ಒಬ್ಬ ಎಸಿಪಿ, ಒಬ್ಬ ಇನ್‌ಸ್ಪೆಪೆಕ್ಟರ್ ಹಾಗೂ ಒಬ್ಬ ಪಿಸಿ ಇದ್ದಾರೆ. ಸಿಸಿಬಿಯಲ್ಲಿ ಸಂದೀಪ್ ಪಾಟೀಲ್ ಜಂಟಿ ಪೊಲೀಸ್ ಆಯುಕ್ತರಾಗಿದ್ದ ವೇಳೆ ಎಟಿಸಿ ರಚನೆಯಾಗಿತ್ತು. ಈಗ ಸಿಸಿಬಿಯಿಂದ ಬೇರೆಯಾಗಿರುವ ಎಟಿಸಿ ಘಟಕ ಆಂತರಿಕ ಭದ್ರತಾ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕೇರಳದ ಸಲೀಂ ಹಾಗೂ ಪಾಕ್‌ನ ಐಎಸ್‌ಐಗೆ ಮಾಹಿತಿ ನೀಡ್ತಿದ್ದವನ ಬಂಧನ ಮಾಡಿದ್ದಷ್ಟೆ ಎಟಿಸಿಯ ಕೆಲಸವಾಗಿದೆ. ಆದರೆ, ಈ ಹಿಂದೆ ಕೇಂದ್ರದಿಂದ ಎನ್‌ಐಎ ಬಂದು ಶ್ರೀರಾಮಪುರದಲ್ಲಿ ಶಂಕಿತ ಉಗ್ರ ತಾಲೀಬ್‌ನನ್ನು ಬಂಧಿಸಿದ ವಿಚಾರ ಎಟಿಸಿಗೆ ಗೊತ್ತಾಗಿದ್ದೇ ತೀರ ತಡವಾಗಿ. ಹೀಗಾಗಿ ಈ ವಿಭಾಗ ನಿಷ್ಕ್ರಿಯವಾಗಿದೆಯೇ ಎಂಬ ಪ್ರಶ್ನೆಗಳು ಮೂಡಿವೆ.
ಇದನ್ನೂ ಓದಿ | Terror Accused | ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರ ಬಂಧನ, ಒಂದೇ ದಿನ ಇಬ್ಬರು ಅರೆಸ್ಟ್!