ಉಡುಪಿ: ಹಿಂದು ಎಂಬ ಪದ ಅಶ್ಲೀಲ ಎಂದು ವ್ಯಾಖ್ಯಾನಿಸಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ʻನಾನು ಸ್ವಾಭಿಮಾನಿ ಹಿಂದುʼ ಅಭಿಮಾನವನ್ನು ಮಂಗಳವಾರದಿಂದಲೇ ಆರಂಭ ಮಾಡಿದ್ದೇವೆ. ಕಾಂಗ್ರೆಸ್ ಬಹಿರಂಗವಾಗಿ ಕ್ಷಮೆ ಕೇಳುವವರೆಗೆ ಈ ಅಭಿಯಾನ ಮುಂದುವರಿಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಹಿಂದೂ ಪದ ಅಶ್ಲೀಲ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿ. ಅವರ ಈ ಹೇಳಿಕೆಗೆ ಕಾಂಗ್ರೆಸ್ ಕ್ಷಮೆ ಯಾಚಿಸಲೇಬೇಕು. ಯಾಕೆಂದರೆ, ಅವರು ಸಾಮಾನ್ಯ ವ್ಯಕ್ತಿಯಾಗಿ ಹೇಳಿಕೆ ನೀಡಿಲ್ಲ. ಕಾಂಗ್ರೆಸ್ ಕಾರ್ಯಾಧ್ಯಕ್ಷನಾಗಿ ಜಾರಕಿಹೋಳಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷವೇ ಕ್ಷಮೆ ಕೇಳಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ʻಕಾಂಗ್ರೆಸ್ ಹುಟ್ಟಿನಿಂದ ಇವತ್ತಿನವರೆಗೆ ಹಲವಾರು ಬಾರಿ ಹಿಂದುತ್ವ ಮತ್ತು ಭಾರತೀಯತೆಗೆ ಅವಮಾನ ಮಾಡಿದೆ. ಈ ಅಪಮಾನವನ್ನು ಇನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲʼʼ ಎಂದು ಹೇಳಿದ ಸುನಿಲ್ ಕುಮಾರ್, ʻʻನೆಹರು ನನ್ನನ್ನು ಹಿಂದು ಎಂದು ಕರೆಯಬೇಡಿ ಎಂದು ಹೇಳಿದ್ದರು. ನೆಹರು ಹಾಕಿಕೊಟ್ಟ ಪರಂಪರೆ ಇವತ್ತಿಗೂ ಮುಂದುವರೆಯುತ್ತಾ ಬಂದಿದೆ. ಅವಕಾಶ ಸಿಕ್ಕಾಗಲೆಲ್ಲ ಹಿಂದುತ್ವ ಮತ್ತು ಭಾರತೀಯತೆ ಬಗ್ಗೆ ಕಾಂಗ್ರೆಸ್ ಅಪಮಾನ ಮಾಡುತ್ತಾ ಬಂದಿದೆʼʼ ಎಂದು ನೆನಪಿಸಿದರು.
ʻʻಕಾಂಗ್ರೆಸ್‌ನ ಹಿರಿಯ ನಾಯಕ ಶಿವರಾಜ್ ಪಾಟೀಲ್ ಭಗವದ್ಗೀತೆಯನ್ನು ಜಿಹಾದ್‌ಗೆ ಹೋಲಿಸಿದ್ದರು. ಸಿದ್ದರಾಮಯ್ಯನವರಿಗೆ ತಿಲಕ ಕಂಡರೆ ಆಗುವುದಿಲ್ಲ ಎಂದು ಅವರೇ ಹೇಳಿದ್ದಾರೆ. ವಿ.ಡಿ. ಸಾವರ್ಕರ್ ಅವರಿಗೂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್‌ಗೆ ಹಿಂದುಗಳನ್ನು ಕಂಡರೆ ಅಸಹನೆ. ಕಾಂಗ್ರೆಸ್ ಭಾರತೀಯತೆಯನ್ನು ಯಾವತ್ತೂ ಒಪ್ಪಿಲ್ಲ. ಹಿಂದುತ್ವಕ್ಕೆ ಧಕ್ಕೆಯಾದಾಗಲೆಲ್ಲ ನಾವು ಎದ್ದು ನಿಂತಿದ್ದೇವೆ. ಹೀಗಾಗಿ ಈ ವಿಚಾರವನ್ನು ನಾವು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಈ ಹೇಳಿಕೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆʼʼ ಎಂದು ಹೇಳಿದರು ಸುನಿಲ್ ಕುಮಾರ್. ʻʻಭಾರತೀಯತೆ, ಹಿಂದೂ ಜೀವನ ಪದ್ಧತಿಯನ್ನು ಒಪ್ಪದ ಕಾಂಗ್ರೆಸ್ ಸಮಾಜದ ಕ್ಷಮೆ ಕೇಳಬೇಕುʼʼ ಎಂದು ಆಗ್ರಹಿಸಿದರು.
ʻʻಸತೀಶ್ ಜಾರಕಿಹೊಳಿ ಅವರು ಶಾಲೆಗೆ ಸೇರುವಾಗ, ಚುನಾವಣೆಗೆ ಸ್ಪರ್ಧಿಸುವಾಗ ಹಿಂದೂ ಪರಿಶಿಷ್ಟ ಜಾತಿ ಎಂದು ಹೇಳಿದ್ದಿರೋ ಅಥವಾ ಅಶ್ಲೀಲ ಹಿಂದೂ ಎಂದು ಹೇಳಿ ಶಾಲೆಗೆ ಸೇರಿದ್ದರೋʼʼ ಎಂದು ಕೇಳಿರುವ ಸುನಿಲ್ ಕುಮಾರ್, ಕಾಂಗ್ರೆಸ್ ಈ ಹೇಳಿಕೆಗೆ ಬಹಳ ದೊಡ್ಡ ಪ್ರಮಾಣದ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯುವಕರು ರಸ್ತೆಗೆ ಬರಬೇಕು ಎಂದ ಸುನಿಲ್
ʻʻಹಿಂದುತ್ವಕ್ಕೆ ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಅಪಮಾನ ಮಾಡಿದೆ. ಈ ನಡೆಯ ವಿರುದ್ಧ ಯುವಕರು ರಸ್ತೆಗೆ ಬರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ಇದನ್ನು ಖಂಡಿಸಬೇಕು. ನಾನು ಸ್ವಾಭಿಮಾನಿ ಹಿಂದು, ಹಿಂದುತ್ವಕ್ಕೆ ಧಕ್ಕೆಯಾದಾಗ ಸೆಟೆದು ನಿಲ್ಲುತ್ತೇನೆ, ದೇಶದ ಅಸ್ಮಿತೆಗೆ ಧಕ್ಕೆಯಾದಾಗ ಹೋರಾಟ ಮಾಡುತ್ತೇನೆ ಎಂಬುದನ್ನು ತೋರಿಸಿಕೊಡಬೇಕು. ರಸ್ತೆಗೂ ಬನ್ನಿ, ಸಾಮಾಜಿಕ ಜಾಲತಾಣಗಳಲ್ಲೂ ಕಾಂಗ್ರೆಸ್ ನಡೆಯನ್ನು ಖಂಡಿಸಿʼʼ ಎಂದು ಮನವಿ ಮಾಡಿದರು.
ʻʻಕಾಂಗ್ರೆಸ್ ನಾಯಕಿ ಲಲಿತಾ ನಾಯಕ್ ಕನ್ನಡ ಸಂಸ್ಕೃತಿ ಸಚಿವರಾಗಿದ್ದವರು. ಅಂಥವರು ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳಬೇಡಿ ಎನ್ನುತ್ತಾರೆ. ಇದು ಅವರ ಮಾನಸಿಕತೆಯನ್ನು ತೋರಿಸುತ್ತದೆ. ದೈವ ನರ್ತಕರಿಗೆ ಮಾಸಾಶನ ಕೊಟ್ಟಾಗ ಸಮಾಜ ಅದನ್ನು ಸ್ವಾಗತಿಸಿದೆ. ಆದರೆ, ಲಲಿತಾ ನಾಯಕ್ ವಿರೋಧಿಸಿದ್ದಾರೆʼʼ ಎಂದರು ಸುನಿಲ್.
ಇದನ್ನೂ ಓದಿ | Satish Jarakiholi | ಹಿಂದು ಬಗ್ಗೆ ನಾನು ಹೇಳಿದ್ದೇ ಸರಿ, ಕ್ಷಮೆ ಕೇಳೋದಿಲ್ಲ ಎಂದ ಸತೀಶ್ ಜಾರಕಿಹೊಳಿ