ಚಿಕ್ಕೋಡಿ: ಹಿಂದು ಶಬ್ದದ ಉತ್ಪತ್ತಿಯ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೊಳಗಾದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ತವರಾದ, ಅವರು ಕಣವಾದ ಯಮಕನ ಮರಡಿಯಲ್ಲೇ ದೊಡ್ಡದೊಂದು ಸಮಾವೇಶಕ್ಕೆ ವೇದಿಕೆ ಅಣಿಯಾಗಿದೆ.
ಹಿಂದು ಶಬ್ದಕ್ಕೆ ಪರ್ಶಿಯನ್ ಭಾಷೆಯಲ್ಲಿ ಕೀಳು ಎಂಬ ಅರ್ಥವಿದೆ ಎಂದು ಹೇಳಿದ್ದ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯ ನಾಯಕ, ಸಚಿವ ಸುನಿಲ್ ಕುಮಾರ್ ಮೊದಲ ದಿನವೇ ನಾನು ಸ್ವಾಭಿಮಾನಿ ಹಿಂದು ಎಂಬ ಆಂದೋಲನ ಆರಂಭಿಸಿದ್ದರು. ಮರುದಿನ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆದಿತ್ತು. ಇದರ ನಡುವೆ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿಷಾದ ಸೂಚಿಸಿದ್ದರು. ಅದಾದ ಬಳಿಕ ಬಿಜೆಪಿ ಈ ವಿಚಾರದಲ್ಲಿ ಸ್ವಲ್ಪ ತಣ್ಣಗಾಗಿದೆ. ಆದರೆ, ಈಗ ಈ ವಿಚಾರವನ್ನು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಎತ್ತಿಕೊಂಡಂತೆ ಕಾಣುತ್ತಿದೆ.
ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನವೆಂಬರ್ ೧೬ರಂದು ಯಮಕನಮರಡಿಯಲ್ಲೇ ಬೃಹತ್ ಸಮಾವೇಶ ನಡೆಯಲಿದೆ. ಇದಕ್ಕೆ ನಾನೂ ಹಿಂದು ಎಂದು ಹೆಸರಿಡಲಾಗಿದೆ.
ಸತೀಶ್ ಜಾರಕಿಹೊಳಿ ಅವರಿಗೆ ಸಡ್ಡು ಹೊಡೆಯಲು ಹಿಂದೂ ಸಂಘಟನೆಗಳು ಚಕ್ರವರ್ತಿ ನೇತೃತ್ವದಲ್ಲಿ ಈ ಸಮಾವೇಶ ಆಯೋಜಿಸಿವೆ ಎಂದು ಹೇಳಲಾಗಿದೆ. ನವಂಬರ್ ೧೬ಕ್ಕೆ ವಿದ್ಯಾವರ್ಧಕ ಸಂಘದ ಶಾಲಾ ಆವರಣದಲ್ಲಿ ಸಮಾವೇಶ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿರುವ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲಿದ್ದಾರೆ.
ಇದನ್ನೂ ಓದಿ | Swabhimani hindu | ಸತೀಶ್ ಜಾರಕಿಹೊಳಿಯದ್ದು ವಾಮಾಚಾರ ಫ್ಯಾಮಿಲಿ, ಇದೆಲ್ಲ ಅರ್ಥ ಆಗಲ್ಲ ಎಂದ ಜಗ್ಗೇಶ್