ಬೆಂಗಳೂರು: ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ʻಕೀಳು ಹಿಂದುʼ ಹೇಳಿಕೆ ವಿರುದ್ಧ ಬುಧವಾರ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲೂ ಪ್ರತಿಭಟನೆ ನಡೆಸಲು ಬಿಜೆಪಿ ಕರೆಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು (Swabhinami Hindu) ಬೀದಿಗಿಳಿದು ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ದೂರನ್ನೂ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದೇ ವೇಳೆ ಹಲವು ಕಡೆ ಕಾಂಗ್ರೆಸ್‌ನ ಹಿಂದು ವಿರೋಧಿ ಧೋರಣೆ ಹಾಗೂ ನಾನು ಹಿಂದು ಎಂಬ ಬರಹ ಇರುವ ಭಿತ್ತಿ ಫಲಕಗಳನ್ನು ಪ್ರದರ್ಶಿಸಲಾಗಿದ್ದು, ಹಿಂದುಪರ ಘೋಷಣೆಗಳನ್ನು ಕೂಗಲಾಗಿದೆ.
ಬೆಳಗಾವಿಯಲ್ಲಿ ಬೇಷರತ್ ಕ್ಷಮೆಗೆ ಆಗ್ರಹ
ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು, ಚನ್ನಮ್ಮ ವೃತ್ತದ ಎದುರು ರಸ್ತೆ ಮೇಲೆ ಧರಣಿ ಕುಳಿತರು. ಈ ವೇಳೆ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಗಿತ್ತು. 20 ನಿಮಿಷಗಳಿಂದ ನಾಲ್ಕು ಮಾರ್ಗಗಳಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ್, ಮಹಾಂತೇಶ ದೊಡಗೌಡರ ಸೇರಿ ಹಲವರು ಭಾಗಿಯಾಗಿದ್ದರು. ಈ ವೇಳೆ ಸತೀಶ್ ಜಾರಕಿಹೊಳಿ ಬೇಷರತ್ ಕ್ಷಮೆಯಾಚನೆ ಮಾಡಬೇಕೆಂಬ ಆಗ್ರಹ ವ್ಯಕ್ತವಾಯಿತು.
ಇದನ್ನೂ ಓದಿ | Satish Jarakiholi | ಹಿಂದು ಪದದ ಕುರಿತು ʼಕೀಳುʼ ಮಾತಿಗೆ ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿದ ದಾಖಲೆ ಇಲ್ಲಿದೆ
ಸತೀಶ್ ಜಾರಕಿಹೊಳಿ ಹೇಳಿಕೆ ಇಡೀ ವಿಶ್ವದ ಹಿಂದುಗಳಿಗೆ ಆಘಾತವಾಗಿದೆ. ಅವರ ಮೇಲೆ ಕಾಂಗ್ರೆಸ್ ಏನು ಕ್ರಮ ಕೈಗೊಳ್ಳುತ್ತದೆ ಎಂದು ನೋಡಬೇಕು. ಕಾಂಗ್ರೆಸ್ ನಾಯಕರು ಏನು ಕ್ರಮ ಕೈಗೊಳ್ಳುತ್ತಾರೆ ನೋಡಿಕೊಂಡು ಮುಂದಿನ ಕ್ರಮವನ್ನು ತೆಗೆದುಕೊಳ್ಳೋಣ ಎಂದ ಶಾಸಕ ಅಭಯ್ ಪಾಟೀಲ್ ಹೇಳಿದ್ದು, ಕಾಂಗ್ರೆಸ್‌ನವರಿಗೆ ಏನಾದರೂ ಧಮ್, ತಾಕತ್ತು ಇದ್ದರೆ ಸತೀಶ್ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿ ಎಂದ ಈರಣ್ಣ ಕಡಾಡಿ ಸವಾಲು ಹಾಕಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಹಿಂದುನಾ? ಅಲ್ಲವಾ ಎಂಬುದನ್ನು ಸ್ಪಷ್ಟಪಡಿಸಬೇಕು. ಅವರು ಕ್ಷಮೆ ಕೇಳಬೇಕಾಗುತ್ತದೆ. ಕಾಂಗ್ರೆಸ್ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಾಜದ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಮಾಡಿದೆ. ಲಿಂಗಾಯತ ಸಂಘಟನೆ ಬಗ್ಗೆಯೂ ಉದ್ಧಟತನದ ಮಾತುಗಳನ್ನು ಆಡಿದ್ದಾರೆ. ಸಮಾಜ ಒಡೆಯುವ ಕೆಟ್ಟ ಕೆಲಸಕ್ಕೆ ಕೈ ಹಾಕಿದ್ದಾರೆ. ಸತೀಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜನ ಕಸದ ಬುಟ್ಟಿಗೆ ಹಾಕುತ್ತಾರೆ ಎಂದು ಹೇಳಿದರು.
ರಾಯಚೂರಲ್ಲಿ ಸತೀಶ್ ಫೋಟೊಗೆ ತುಳಿತ, ಬೆಂಕಿ
ರಾಯಚೂರು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ಜೋರಾಗಿದೆ. ಅಂಬೇಡ್ಕರ್ ಸರ್ಕಲ್‌ನಲ್ಲಿ ಸೇರಿದ ಕಾರ್ಯಕರ್ತರು ಸತೀಶ್ ಜಾರಕಿಹೊಳಿ ಭಾವಚಿತ್ರವನ್ನು ಬೂಟಿನಿಂದ ತುಳಿದಿದ್ದಲ್ಲದೆ, ಅದಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ವೃತ್ತದ ಸುತ್ತ ಮಾನವ ಸರಪಳಿ ನಿರ್ಮಿಸಿ ಜಾರಕಿಹೊಳಿ ವಿರುದ್ಧ ಘೋಷಣೆ ಕೂಗಲಾಗಿದೆ. ಜಿಲ್ಲಾಧ್ಯಕ್ಷ ರಮಾನಂದ ಯಾದವ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ಇದನ್ನೂ ಓದಿ | Swabhimani hindu | ಸತೀಶ್ ಜಾರಕಿಹೊಳಿ ಹೇಳಿಕೆಗೆ ರಾಹುಲ್, ಸಿದ್ದರಾಮಯ್ಯ ಸಮ್ಮತಿಯೇ?: ಬೊಮ್ಮಾಯಿ ಪ್ರಶ್ನೆ
ಜಾರಕಿಹೊಳಿ ಬಂಧನಕ್ಕೆ ಬಳ್ಳಾರಿಯಲ್ಲಿ ಆಗ್ರಹ
ಬಳ್ಳಾರಿಯ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದು, ಕೂಡಲೇ ಜಾರಕಿಹೊಳಿ ಅವರನ್ನು ಬಂಧಿಸಲು ಆಗ್ರಹಿಸಿದ್ದಾರೆ. ಸತೀಶ್ ಅವರ ಹಿಂದು ವಿರೋಧಿ ಹೇಳಿಕೆ ಸರಿಯಲ್ಲ. ಪ್ರತಿಭಟನೆಯಲ್ಲಿ ನಿಗಮ ಮಂಡಳಿ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಿಗೌಡ, ಮುಖಂಡರಾದ ವೀರಶೇಖರ ರೆಡ್ಡಿ, ಶ್ರೀನಿವಾಸ ಮೋತ್ಕರ್, ರಾಜೀವ್ ತೊಗರಿ, ಸುಗುಣ, ಸುಮಾರೆಡ್ಡಿ ಸೇರಿದಂತೆ ಇತರರು ಭಾಗಿಯಾಗಿದ್ದರು.
ಕಾರವಾರದಲ್ಲಿ ಎಸ್‌ಪಿಗೆ ದೂರು
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ಬಿಜೆಪಿ ಮುಖಂಡರಿಂದ ಪ್ರತಿಭಟನೆ ನಡೆದಿದ್ದು, ಶಾಸಕಿ ರೂಪಾಲಿ ನಾಯ್ಕ, ಎಂಎಲ್‌ಸಿ ಗಣಪತಿ ಉಳ್ವೇಕರ್, ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಸೇರಿದಂತೆ ಇತರರು ಭಾಗಿಯಾಗಿದ್ದರು. ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್‌ಗೆ ದೂರು ನೀಡಲಾಗಿದೆ.
ಬಾಗಲಕೋಟೆಯಲ್ಲಿ ಸತೀಶ್ ಕ್ಷಮೆಗೆ ಒತ್ತಾಯ
ಬಾಗಲಕೋಟೆ ನಗರದ ಶಿವಾನಂದ್ ಜಿನ್‌ನಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸತೀಶ್ ಜಾರಕಿಹೊಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಭಾಗಿಯಾಗಿದ್ದರು. ಸತೀಶ್ ಕ್ಷಮೆ ಕೇಳಬೇಕು. ಕೇಳದಿದ್ದರೆ ಅವರಿಗೆ ತೊಂದರೆ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಈ ರೀತಿಯ ದುರಹಂಕಾರದ ಮಾತುಗಳು ಯಾವ ರಾಜಕಾರಣಿಗೂ ಶೋಭೆ ತರುವುದಿಲ್ಲ. ಅವರ ಮಾತುಗಳನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಶಾಸಕ ಚರಂತಿಮಠ ಹೇಳಿದರು.
ಇದನ್ನೂ ಓದಿ | ಹಿಂದು-ಹಿಂದುತ್ವ ವಿಷಯದಲ್ಲಿ ಸಮಸ್ಯೆ ಇದ್ದವರು ಪಾಕಿಸ್ತಾನಕ್ಕೆ ಹೋಗಿ; ಸತೀಶ್ ಜಾರಕಿಹೊಳಿಗೆ ಮಧ್ಯಪ್ರದೇಶ ಸಂಸದನ ತಿರುಗೇಟು
ಶಾಲೆಗೆ ಸೇರುವಾಗ ಸತೀಶ್ ಯಾವ ಧರ್ಮ ಎಂದು ಕೊಟ್ಟಿದ್ದಾರೆ?: ಮೈಸೂರಲ್ಲಿ ಪ್ರಶ್ನೆ
ಜಾರಕಿಹೊಳಿ ಹೇಳಿಕೆಯು ನೀಚ ಕೆಲಸವಾಗಿದೆ. ಅವರು ಕ್ಷಮೆ ಯಾಚಿಸಬೇಕು. ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಮೈಸೂರಿನಲ್ಲಿ ಬಿಜೆಪಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಒತ್ತಾಯಿಸಿದ್ದಾರೆ. ಸತೀಶ್ ಜಾರಕಿಹೊಳಿ ಶಾಲೆಗೆ ಸೇರುವಾಗ, ಚುನಾವಣೆಗೆ ಸ್ಪರ್ಧೆ ಮಾಡಿದಾಗ ಯಾವ ಧರ್ಮ ಎಂದು ಮಾಹಿತಿ ಕೊಟ್ಟಿದ್ದಾರೆ? ಎಂಬುದನ್ನು ಸ್ಪಷ್ಟಪಡಿಸಬೇಕು. ಇಬ್ಬಗೆ ನೀತಿಯನ್ನು ಬಿಡಬೇಕು. ಇದು ಅವರ ಉದ್ದಟತನದ ವರ್ತನೆ.
ಕಾಂಗ್ರೆಸ್ ನಾಯಕರು ಇದನ್ನು ಖಂಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಕ್ಷಮೆಯಾಚಿಸುವಂತೆ ತಿಳಿಸಿದ್ದಾರೆ. ಆದರೂ ಸತೀಶ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ರಮ ಕೈಗೊಳ್ಳಬೇಕು. ಸತೀಶ್ ಜಾರಕಿಹೋಳಿ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಉಡುಪಿಯಲ್ಲಿ ಶಾಸಕ ರಘುಪತಿ ಭಟ್, ರಾಯಚೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಯಾದಗಿರಿಯಲ್ಲಿ ಮಾಜಿ ಶಾಸಕ ಶಿವರಾಜ್ ಸಜ್ಜನರ್, ಹಾಸನದಲ್ಲಿ ಶಾಸಕ ಪ್ರೀತಂ ಗೌಡ, ಕೋಲಾರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ ವೇಣುಗೋಪಾಲ್, ಕೊಪ್ಪಳದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿವೆ.
ಇದನ್ನೂ ಓದಿ | Swabhimani hindu | ರಾಹುಲ್ ಮೌನ ಯಾಕೆ, ಸಿದ್ದು ನುಣುಚಿಕೊಳ್ಳೋದ್ಯಾಕೆ, ಮಾತಾಡ್ಲಿ: ಸವಾಲು ಹಾಕಿದ ಸಿಎಂ