ಬೆಂಗಳೂರು: ರೈತರು ಇನ್ನು ಮುಂದೆ ತಮ್ಮ ಜಮೀನಿನ ಪೋಡಿ, 11 ಇ ನಕ್ಷೆ, ಭೂ ಪರಿವರ್ತನಾ ಪೂರ್ವ ನಕ್ಷೆಗಳನ್ನು ತಾವೇ ತಯಾರಿಸಿಕೊಳ್ಳಬಹುದಾದ ಸ್ವಯಂ ಸರ್ವೆಯ ಹೊಸ ವ್ಯವಸ್ಥೆಯನ್ನು ಕಂದಾಯ ಇಲಾಖೆ ಸಿದ್ಧಪಡಿಸಿದೆ. ಜಮೀನು ಸರ್ವೆಯಲ್ಲಿ ರೈತರಿಗೆ ಆಗುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಲು ಕಂದಾಯ ಇಲಾಖೆ ಈ ಹೊಸ ʼಸ್ವಾವಲಂಬಿ ಆ್ಯಪ್ʼ ಪರಿಚಯಿಸಿದೆ.
ರೈತರು ಏಪ್ರಿಲ್ 25ರಿಂದ ಈ ಸೌಲಭ್ಯ ಪಡೆಯಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ರೈತರು ತಮ್ಮ ಜಮೀನಿನ ಇ ಸ್ಕೆಚ್, ತತ್ಕಾಲ್ ಪೋಡಿ, ನಕ್ಷೆ, ಭೂ ಪರಿವರ್ತನಾ ಪೂರ್ವ ನಕ್ಷೆಗಳಿಗಾಗಿ ಭೂಮಾಪನ ಇಲಾಖೆಗೆ ಅರ್ಜಿ ಸಲ್ಲಿಸುತ್ತಾರೆ. ಈ ಮೇಲಿನ ಸೌಲಭ್ಯಗಳಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಸರ್ಕಾರಿ ಭೂಮಾಪಕರು ಅಥವಾ ಪರವಾನಗಿ ಪಡೆದ ಭೂಮಾಪಕರುಗಳಿಂದ ಸಿದ್ಧಪಡಿಸಲಾಗುತ್ತದೆ. ಇತ್ತೀಚೆಗೆ ಅರ್ಜಿಗಳು ಹೆಚ್ಚು ಬರುತ್ತಿದ್ದುದರಿಂದ ರೈತರಿಗೆ ಸಕಾಲಕ್ಕೆ ಸೌಲಭ್ಯ ನೀಡಲಾಗುತ್ತಿಲ್ಲ. ಹಾಗಾಗಿ ರೈತರು ಸ್ವತಃ ತಾವೇ ಸ್ಕೆಚ್ ಮಾಡುವ ಸೌಲಭ್ಯವನ್ನು ನೀಡಲಾಗುವುದು ಎಂದಿದ್ದಾರೆ.
ಪ್ರತಿ ತಿಂಗಳು ಒಂದು ಲಕ್ಷಕ್ಕಿಂತ ಹೆಚ್ಚಿನ ಅರ್ಜಿಗಳು ನಾಗರಿಕರಿಂದ ಸ್ವೀಕೃತವಾಗುತ್ತವೆ. ಆರು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸರ್ವೆಗಾಗಿ ವಿವಿಧ ಹಂತಗಳಲ್ಲಿ ಬಾಕಿ ಇವೆ. ಇದರಿಂದಾಗಿ ತಮ್ಮ ಸ್ವಂತ ಜಮೀನಿನಲ್ಲಿ ಯಾವುದೇ ರೀತಿಯ ಕ್ರಯ ಮತ್ತು ವಿಭಾಗ ಮಾಡಿಸಿಕೊಳ್ಳಲು ಅಗತ್ಯವಿರುವ ಸ್ಕೆಚ್‌ಗಾಗಿ ಹಲವಾರು ತಿಂಗಳುಗಳವರೆಗೆ ಕಾಯಬೇಕಾಗುತ್ತಿದೆ. ಈ ವಿಳಂಬ ತಡೆಯಲು 11 ಇ ಸ್ಕೆಚ್, ತತ್ಕಾಲ್ ಪೋಡಿ ಇವುಗಳನ್ನು ಸ್ವಂತ ಜಮೀನಿಗೆ ತಾವೇ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂದರು.
ಏನಿದು ಸ್ವಾವಲಂಬಿ ಆ್ಯಪ್?
ರೈತರಿಗಾಗಿ ಕಂದಾಯ ಇಲಾಖೆ ಸಿದ್ಧಪಡಿಸಿದ ಸ್ವಾವಲಂಬಿ ಆ್ಯಪ್ ಏ.25ರಿಂದ ಸಿಗಲಿದೆ. ಈ ಆ್ಯಪ್ ಬಳಕೆ ಮಾಹಿತಿಯುಳ್ಳ ರೈತರು ತಮ್ಮ ಜಮೀನಿನ ನಕ್ಷೆ ತಯಾರಿಸಿಕೊಳ್ಳಬಹುದು. ಒಂದು ಕುಟುಂಬದ ಸದಸ್ಯರು ತಾವೇ ತಮ್ಮ ಜಮೀನು ಭಾಗ ಮಾಡಿಕೊಳ್ಳಬಹುದು. ಯಾರಿಗೆ ಎಷ್ಟು ಭಾಗ ಎಂಬುದನ್ನು ಕುಟುಂಬದ ಸದಸ್ಯರು ನಿರ್ಧರಿಸಿ ಆ್ಯಪ್ ಮೂಲಕ ಸ್ಕೆಚ್ ಮಾಡಬಹುದು. ಇದಕ್ಕಾಗಿ ರೈತರು ಯಾರ ಸಹಾಯವೂ ಕೇಳಬೇಕಿಲ್ಲ. ಸರ್ವೆಯರ್‌ಗಳನ್ನು ಕರೆಯಬೇಕಿಲ್ಲ. ರೈತರು ತಮ್ಮ ಜಮೀನಿನ ಸ್ಕೆಚ್ ಸಿದ್ಧಪಡಿಸಿದ ಬಳಿಕ ಭೂ ದಾಖಲೆಗಳ ಕಚೇರಿಗೆ ಅಪ್ಲೋಡ್ ಮಾಡಬೇಕು. ನಂತರ ನೋಂದಣಿ ಇಲಾಖೆಯಲ್ಲಿ ಆ ಸ್ಕೆಚ್ ಗಡಿಗಳಿಗೆ ಅನುಗುಣವಾಗಿ ನೋಂದಣಿ ಮಾಡಲಾಗುತ್ತದೆ ಎಂದು ಕಂದಾಯ ಇಲಾಖೆಯ ಸಚಿವರು ತಿಳಿಸಿದ್ದಾರೆ.
ಸ್ವಾವಲಂಬಿಯ ಉಪಯೋಗ
ರೈತರು ತಮ್ಮ ಜಮೀನಿನಲ್ಲಿ ಒಂದು ಭಾಗವನ್ನು ಮಾರಾಟ ಮಾಡಲು ನೋಂದಣಿಗೆ ಸ್ಕೆಚ್ ತಾವೇ ಸಿದ್ಧಪಡಿಸಬಹುದು. ಜಮೀನಿನಲ್ಲಿ ಪೋಡಿ ಮಾಡಿಕೊಡುವ ಬಗ್ಗೆ ಸ್ಕೆಚ್ ತಯಾರಿಸಬಹುದು. ಕೃಷಿ ಜಮೀನಿನ ಒಂದು ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳಲು ಸ್ಕೆಚ್ ಮಾಡಬಹುದು. ಸ್ವಾವಲಂಬಿ ಆ್ಯಪ್‌ನಿಂದ ರೈತರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಸರ್ವೆಯರ್‌ಗಳನ್ನು ಕರೆಸಿ ಮಾಡಿಸಬೇಕಿದ್ದ ಕೆಲಸ ಉಳಿಯಲಿದ್ದು, ಅಷ್ಟರ ಮಟ್ಟಿಗೆ ಹಣಕಾಸು ಸಹ ಉಳಿತಾಯವಾಗಲಿದೆ. ಹಿಂದೆ ಆಸ್ತಿಯನ್ನು ಹಿಸ್ಸೆ ಭಾಗ ಮಾಡಲು ಸರ್ವೆ ನಡೆಸಿ, ನಕ್ಷೆ ಮಾಡಿ, ನೋಂದಣಿ ಮಾಡಿ ಪಹಣಿ ಪಡೆಯಲು ಕನಿಷ್ಠ ಆರು ತಿಂಗಳುಗಳಿಂದ ಒಂದು ವರ್ಷ ಬೇಕಾಗುತ್ತಿತ್ತು. ಮುಂದೆ ಕಡಿಮೆ ಸಮಯದಲ್ಲಿ ಈ ಕೆಲಸವಾಗಲಿದೆ.
ಇದನ್ನೂ ಓದಿ: ಕಾಸರಕೋಡು ಕಡಲಲ್ಲಿ ಕಂಡು ಬಂದ ವಿಸ್ಮಯ!
ಮಾಡುವುದು ಹೇಗೆ?
ಜಮೀನಿನ ಪಹಣಿ ಹೊಂದಿರುವ ವ್ಯಕ್ತಿ ಇದನ್ನು ಮಾಡಬಹುದು. ಮೋಜಣಿ ವ್ಯವಸ್ಥೆಯಡಿ ಇ-ಸಹಿ ಅಥವಾ ಆಧಾರ್ ಕೆವೈಸಿ ಪ್ರಕ್ರಿಯೆ ಬಳಸಿಕೊಂಡು ತನ್ನ ಗುರುತನ್ನು ದೃಢೀಕರಿಸಿ ಅರ್ಜಿ ಸಲ್ಲಿಸಬೇಕು. ಈ ವೇಳೆ ಮೊಬೈಲ್ ಫೋನ್ ಸಂಖ್ಯೆ ಒದಗಿಸುವುದು ಒಟಿಪಿ ಇತ್ಯಾದಿ ಪಡೆಯಲು ಅಗತ್ಯವಾಗಿರುತ್ತದೆ. ಬಹು ಮಾಲಿಕತ್ವದ ಪಹಣಿಯಯ ಹಕ್ಕುದಾರರಲ್ಲಿ ಒಬ್ಬರು ಸ್ಕೆಚ್ ಕೋರಿ ಮೋಜಣಿ ವ್ಯವಸ್ಥೆಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರ ಮತ್ತು ಪಹಣಿಯಲ್ಲಿನ ಹೆಸರಿನ ನಡುವೆ ವ್ಯತ್ಯಾಸ ಇದ್ದರೆ ಭೂದಾಖಲೆಗಳ ಸಹಾಯಕ ನಿರ್ದೇಶಕರು ನೋಟಿಸ್ ನೀಡಲಿದ್ದಾರೆ. ಅವರ ಮುಂದೆ ಹಾಜರಾಗಿ ಅರ್ಜಿದಾರರು ಮತ್ತು ಪಹಣಿದಾರರು ಒಂದೇ ಎಂದು ದಾಖಲೆ ಒದಗಿಸಿ ಗುರುತು ದೃಢೀಕರಿಸಬೇಕು.