ವಿಜಯಪುರ: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಎಂ.ಬಿ. ಪಾಟೀಲ್ ಹರಿಹಾಯ್ದರು. ನಮ್ಮ ಆಡಳಿತದಲ್ಲಿ ಹಾಗೂ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ ಅಕ್ರಮವಾಗಿರಲಿಲ್ಲ. ನಾನು ಗೃಹ ಸಚಿವನಾಗಿದ್ದಾಗ ಔರಾದ್ಕರ್ ನೇತೃತ್ವದಲ್ಲಿ ನೇಮಕಾತಿ ಮಾಡಿದ್ದೇವೆ. ಆಗ ಒಂದೇ ಒಂದು ಅಕ್ರಮ ಆಗಿಲ್ಲ. ಒಂದೇ ಒಂದು ದೂರು ಸಹ ಬಂದಿರಲಿಲ್ಲ. ಇಲಾಖೆಯಲ್ಲಿ ಒಳ್ಳೆಯ ಅಧಿಕಾರಿಗಳಿದ್ದು, ಅಂಥವರ ನೇತೃತ್ವದಲ್ಲಿ ನೇಮಕಾತಿ ಆಗಬೇಕೆಂದು ಸಲಹೆ ನೀಡಿದರು.
ಒಬ್ಬ ಮೇಲಧಿಕಾರಿಯೇ ಅಕ್ರಮದಲ್ಲಿ ಶಾಮೀಲಾಗಿ ಬಂಧನಕ್ಕೊಳಗಾಗಿದ್ದಾರೆಂದರೆ ಬಹಳ ಕೆಟ್ಟ ಸರ್ಕಾರ ಇದಾಗಿದೆ. ಇದು ಎಲ್ಲಿಗೆ ಹೋಗಿ ಮುಟ್ಟಲಿದೆ ಎಂಬುದನ್ನು ನೋಡಬೇಕಿದೆ. ಹಿಂದಿನ ಸರ್ಕಾರಗಳಲ್ಲಿ ಪೊಲೀಸ್ ಸಿಬ್ಬಂದಿ ನೇಮಕದಲ್ಲಿ ಅಕ್ರಮವಾಗಿದ್ದರೆ ಕ್ರಮ ತೆಗದುಕೊಳ್ಳಿ ಎಂದು ಸವಾಲು ಹಾಕಿದರು.
ನೀವು ತಪ್ಪು ಮಾಡಿ ಬೇರೆಯವರ ಮೇಲೆ ಆರೋಪ ಮಾಡಬಾರದು. ಇಡೀ ಅಕ್ರಮ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ನೇಮಕಾತಿ ಆದವರಲ್ಲಿ ಪ್ರಾಮಾಣಿಕರೂ ಇದ್ದು, ಅವರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ | ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ, ಜನತೆಯಲ್ಲಿ ಆತಂಕ
ಅಕ್ರಮದಲ್ಲಿ ಮಾಜಿ ಸಿಎಂ ಪುತ್ರ
ಪಿಎಸ್ಐ ನೇಮಕಾತಿಯಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಮಾತನಾಡಿದ ಎಂ.ಬಿ.ಪಾಟೀಲ್, ಯಾರ ಕೈವಾಡವಿದೆ ಎಂಬುದು ಗೊತ್ತಿಲ್ಲ. ಆದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಒಂದು ಕಡೆ 40% ಪರ್ಸೆಂಟ್ ಕಮಿಷನ್, ಇತ್ತ ಅಭಿವೃದ್ಧಿ ಕಾರ್ಯವೂ ಇಲ್ಲ, ಸಚಿವರು ಯಾವ ದಿಕ್ಕಿಗೆ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. 2023ರಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಲು ಜನರು ಕಾಯುತ್ತಿದ್ದಾರೆ. ಈ ರೀತಿ ಸರ್ಕಾರ ಬೇಕಿತ್ತಾ ಎಂದು ಸ್ವತಃ ಬಿಜೆಪಿ ಕಾರ್ಯಕರ್ತರೇ ಬೇಸರಗೊಂಡಿದ್ದಾರೆ ಎಂದರು.
ಅಕ್ರಮ ಮದ್ಯ ಮಾರಾಟ: ಅಧಿಕಾರಿಗಳಿಗೆ ಫುಲ್ ಕ್ಲಾಸ್
ಇಲ್ಲಿನ ಮದಗುಣಕಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದಾಗಿ ಸಮಸ್ಯೆ ಆಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಿ ಎಂದು ಮಹಿಳೆಯರು ಶಾಸಕ ಎಂ.ಬಿ.ಪಾಟೀಲ್‌ಗೆ ದೂರು ನೀಡಿದರು. ಗ್ರಾಮದಲ್ಲಿ ಮದ್ಯ ಮಾರಾಟ ಬಂದ್ ಮಾಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೂಡಲೇ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡರು.
ಅಕ್ರಮ ಮದ್ಯ ಮಾರಾಟ ಯಾಕೆ ನಡೆಯುತ್ತಿದೆ? ನೀವು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೀರಾ? ನೀವೇ ಹೋಗಿ ಬಂದ್ ಮಾಡುತ್ತೀರಾ, ಇಲ್ಲವಾದರೆ ನಾನೇ ಬಂದ್ ಮಾಡಿಸಬೇಕಾ? ಎಂದು ಅಧಿಕಾರಿಗಳ ಮೇಲೆ ಗುಡುಗಿದರು. ಇಂದೇ ನೀವು ಗ್ರಾಮಕ್ಕೆ ಹೋಗಬೇಕು. ಇಲ್ಲವಾದರೆ ಪರಿಣಾಮ ಸರಿ ಇರದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ | ವಿಜಯಪುರದಲ್ಲಿ ಶೈತ್ಯ ಸಂಗ್ರಹಾಗಾರ: ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಿಎಂ ಸೂಚನೆ