ಮೈಸೂರು: ತಮಿಳುನಾಡಿಗೆ ಕಾವೇರಿ ನದಿ ನೀರು (Cauvery Dispute) ಬಿಡುಗಡೆ ಖಂಡಿಸಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ಬದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ತಮಟೆ ಚಳವಳಿ ನಡೆಸಲಾಯಿತು.
ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ತಮಿಳುನಾಡು ಕಾವೇರಿ ವಿಚಾರದಲ್ಲಿ ಉದ್ಧಟತನ ತೋರುತ್ತಿದೆ. ತಮಿಳುನಾಡಿನ ಎಲ್ಲಾ ಸಿಎಂಗಳು ಕಾವೇರಿ ವಿಚಾರದಲ್ಲಿ ತಕರಾರು ಮಾಡುತ್ತಲೇ ಬಂದಿದ್ದಾರೆ. ಇದೇ ರೀತಿ ಮುಂದುವರಿದರೆ ನೀವು ಬೆಂಗಳೂರಿನ ಎಲ್ಲಾ ತಮಿಳಿಗರನ್ನು ವಾಪಸ್ ಕರೆಸಿಕೊಳ್ಳಿ. ರಾಜ್ಯದಲ್ಲಿ ತಮಿಳು ಚಿತ್ರ ಬಂದ್ ಮಾಡುತ್ತೇವೆ, ಗಡಿ ಬಂದ್ ಮಾಡುತ್ತೇವೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಎಚ್ಚರಿಕೆ ನೀಡಿದರು.
ಸಿಎಂ ಸಿದ್ದರಾಮಯ್ಯ ಈ ಹಿಂದೆ ಕಾಡಿನ ಹುಲಿಯಂತಿದ್ದರು. ಈಗ ಬೋನಿಗೆ ಹಾಕಿರುವ ಗಿಣಿಯಂತಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯದ್ಯಂತ ರೈತರು ಪ್ರತಿಭಟನೆ ನಡೆಸುತ್ತಾರೆ. ರೈತರು, ಕನ್ನಡಪರ ಹೋರಾಟಗಾರರನ್ನು ಬಂಧಿಸಿದರೂ ಜಗ್ಗಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ | CM Siddaramaiah : ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರಕ್ಕೆ ಬಿಜೆಪಿಯಲ್ಲಿ ನಡುಕ ಹುಟ್ಟಿದೆ ಎಂದ ಸಿದ್ದರಾಮಯ್ಯ
ಮಂಡ್ಯದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ನಗರದಲ್ಲಿ ಭಾನುವಾರವೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಬಳಿ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನೆ ನಾಲ್ಕನೇ ದಿನವೂ ಮುಂದುವರಿಯಿತು. ಇನ್ನು ಕೆಆರ್‌ಎಸ್‌ನ ಬೃಂದಾವನದ ಬಳಿ ರೈತರು ಎಂದಿನಂತೆ ಪ್ರತಿಭಟನೆ ನಡೆಸಿ ಸರ್ಕಾರದ ನಡೆಯನ್ನು ಖಂಡಿಸಿದರು. ಅದೇ ರೀತಿ ಕಳೆದ ಮೂರ್ನಾಲ್ಕು ದಿನಗಳಿಂದ ಶ್ರೀರಂಗಪಟ್ಟಣದಲ್ಲಿ ವಿಭಿನ್ನವಾಗಿ ಪ್ರತಿಭಟನೆ ಮಾಡುತ್ತಿರುವ ಭೂಮಿತಾಯಿ ಹೋರಾಟ ಸಮಿತಿಯ ರೈತರ ಜತೆ ಮಕ್ಕಳು ಕೂಡ ಭಾಗವಹಿಸಿದ್ದರು.
ಬಿಜೆಪಿ ಕಾರ್ಯಕರ್ತರಿಂದ ಅಪ್ಪಿಕೋ ಚಳವಳಿ
ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಬಿಜೆಪಿ ಕಾರ್ಯಕರ್ತರು ಅಪ್ಪಿಕೊ ಚಳವಳಿ ಮೂಲಕ ಸರ್ಕಾರದ ಆಕ್ರೋಶ ಹೊರಹಾಕಿದರು. ಮಂಡ್ಯದ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿಯ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು, ನಂತರ ಪ್ರತಿಮೆಯನ್ನು ಅಪ್ಪಿಕೊಂಡು, ಕಾವೇರಿ ಮಾತೆ ನಮ್ಮ ತಾಯಿ. ತಾಯಿ ಮೊದಲು ತನ್ನ ಮಕ್ಕಳನ್ನು ಹರಸಲಿ. ತಮಿಳುನಾಡಿಗೆ ಹರಿಯದೇ ನಮ್ಮಲ್ಲೇ ನೆಲಸಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಈ ವೇಳೆ ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಇದನ್ನೂ ಓದಿ | Operation Hasta : ಮಾಜಿ ಶಾಸಕರಾದ ಬಿ.ಸಿ. ಪಾಟೀಲ್, ರಾಜುಗೌಡ ಜತೆ ಡಿಕೆಶಿ ರಹಸ್ಯ ಮಾತುಕತೆ!
ಬೈಕ್ ರ‍್ಯಾಲಿ, ತಲೆ ಮೇಲೆ ಕಲ್ಲು ಹೊತ್ತು ಆಕ್ರೋಶ
ಮಂಡ್ಯದಲ್ಲಿ ಕನ್ನಡ ಸೇನೆ ವತಿಯಿಂದ ಬೈಕ್ ರ‍್ಯಾಲಿ ಹಾಗೂ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಲಾಯಿತು. ಮಂಡ್ಯದ ಫ್ಯಾಕ್ಟರಿ ಸರ್ಕಲ್‌ನಿಂದ ಬೈಕ್ ರ‍್ಯಾಲಿ ನಡೆಸಿದ ಕಾರ್ಯಕರ್ತರು, ಬಳಿಕ ಸಂಜಯ್ ವೃತ್ತದಲ್ಲಿ ತಲೆ ಮೇಲೆ ಕಲ್ಲು ಹೊತ್ತು, ಕಾವೇರಿ ನಮ್ಮದು ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಶ್ರೀರಂಗಪಟ್ಟಣದಲ್ಲಿ ಮಕ್ಕಳ ಪ್ರತಿಭಟನೆ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿಯ ಸ್ನಾನಘಟ್ಟದ ಬಳಿ ಭೂಮಿ ತಾಯಿ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಹೋರಾಟದಲ್ಲಿ ಹಲವು ಮಕ್ಕಳು ಭಾಗವಹಿಸಿದ್ದರು. ವಿವಿಧ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ಮಕ್ಕಳು, ಸಮಾಜಕ್ಕೆ ಕೈ ಮುಗಿದು ಕೇಳುತ್ತೇವೆ. ನೀರು ಕೊಡಿ, ವಿಷ ಕೊಡಬೇಡಿ. ಇಂದಿನ, ಮುಂದಿನ ತಲೆಮಾರಿಗೆ ಕಾವೇರಿ ನೀರನ್ನು ಉಳಿಸಿ. ಮೈಸೂರು ರಾಜರು ಕಾವೇರಿ ನೀರನ್ನು ಕೊಟ್ಟರೆ, ಪ್ರಜಾತಂತ್ರದ ಈ ರಾಜರು ತಮಿಳುನಾಡಿಗೆ ನೀರನ್ನು ಬಿಟ್ಟರು. ನಮ್ಮ ತಾತ, ಮುತ್ತಾತ ಕಾವೇರಿ ನೀರು ಬಳಸಿ ಬೆಳೆ ಬೆಳೆದಿದ್ದರು. ನಮಗೂ ಕಾವೇರಿ ನೀರು ಬೇಕು. ಹೀಗಾಗಿ ನಾವು ಹೋರಾಟಕ್ಕೆ ಬಂದಿದ್ದೇವೆ. ಎಲ್ಲರೂ ಹೋರಾಟಕ್ಕೆ ಬನ್ನಿ ಎಂದು ಮಕ್ಕಳು ಮನವಿ ಮಾಡಿದರು.
ಚಾಮರಾಜನಗರದಲ್ಲಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನಾ ಮೆರವಣಿಗೆ
ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಕೂಡ ಕಾವೇರಿ ಕಿಚ್ಚು ಮುಂದುವರಿದಿದೆ. ಚಾಮರಾಜನಗರದಲ್ಲಿ ತಲೆ ಮೇಲೆ ಕಲ್ಲು ಹೊತ್ತು ಕನ್ನಡಪರ ಸಂಘಟನೆಗಳಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು. ಕಾವೇರಿ ನ್ಯಾಯ ಮಂಡಳಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕನ್ನಡಿಗರ ತಲೆ ಮೇಲೆ ಚಪ್ಪಡಿ ಹಾಕಿವೆ ಎಂದು ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಭುವನೇಶ್ವರಿ ವೃತ್ತದ ಬಳಿ ಜಮಾಯಿಸಿದ ನಂತರ ಶಾಸಕರು, ಸಂಸದರ ವಿರುದ್ಧ ಕನ್ನಡಪರ ಕಾರ್ಯಕರ್ತರು ಘೋಷಣೆ ಕೂಗಿದರು. ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು. ರಾಜ್ಯ ಸರ್ಕಾರ ಕಾವೇರಿ ನ್ಯಾಯಾಧಿಕರಣಕ್ಕೆ ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | HD Devegowda: ಕಾವೇರಿ ವಿಚಾರದಲ್ಲಿ ನಾನು ಮಾತನಾಡುವ ಟೈಮ್ ಬರಬೇಕು, ಆಗ ಮಾತಾಡ್ತೇನೆ: ಎಚ್.ಡಿ.ದೇವೇಗೌಡ
ಖಾಲಿ ಬಿಂದಿಗೆ ಹಿಡಿದು ಪ್ರತಿಭಟಿಸಿದ ಕನ್ನಡಪರ ಹೋರಾಟಗಾರರು
ರಾಮನಗರ: ಡಿಸಿಎಂ ತವರು ಜಿಲ್ಲೆಯಲ್ಲೂ ಕಾವೇರಿ ಕಿಚ್ಚು ಹೆಚ್ಚಾಗಿದೆ. ಕಸ್ತೂರಿ ಜನಪರ ವೇದಿಕೆ ಕಾರ್ಯಕರ್ತರು ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ತಲೆಯ ಮೇಲೆ ಖಾಲಿ ಬಿಂದಿಗೆ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.