ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಎರಡರಿಂದ ಮೂರು ತಿಂಗಳು ಬಾಕಿ ಇರುವ ಹೊತ್ತಿನಲ್ಲಿಯೇ ರಾಜ್ಯ ರಾಜಕೀಯದಲ್ಲಿ ಭಾರಿ ಚಟುವಟಿಕೆ ನಡೆಯುತ್ತಿವೆ. ಈ ಮಧ್ಯೆ ಜಿಲ್ಲೆಯ ನರಸಿಂಹರಾಜ (ಎನ್‌ಆರ್) ಕ್ಷೇತ್ರದ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ (Tanveer Sait) ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿರುವುದಾಗಿ ಮಂಗಳವಾರ (ಫೆ.೨೮) ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ, ಈಗ ಅವರು ಯೂಟರ್ನ್ ಹೊಡೆದಿದ್ದು, ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ. ಪಕ್ಷದ ನಾಯಕರು ಚುನಾವಣೆಗೆ ನಿಲ್ಲಲೇಬೇಕು ಎಂದು ಹೇಳಿದರೆ ನಾನು ಅದಕ್ಕೆ ಬದ್ಧನಾಗಿರುತ್ತೇನೆ ಎಂದೂ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿ, ನಿವೃತ್ತಿ ಹೊಂದಲು ನಿರ್ಧರಿಸಿದ್ದು ನಿಜ. ಅನಾರೋಗ್ಯ ಕಾರಣದಿಂದ ಮಾತ್ರ ಈ ನಿರ್ಧಾರ ಮಾಡಿದ್ದೆ. ಬೇರೆ ಇನ್ಯಾವುದೇ ಕಾರಣವೂ ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅಭಿಮಾನಿಗಳು ನಿರ್ಧಾರ ಬದಲಿಸಿ ಎಂದು ಒತ್ತಡ ಹೇರುತ್ತಿದ್ದಾರೆ. ಪಕ್ಷದ ನಾಯಕರ ನಿರ್ಧಾರಕ್ಕೆ ನಾನು ಬದ್ಧ.
ಪಕ್ಷದ ನಾಯಕರು ಚುನಾವಣೆಗೆ ನಿಲ್ಲಲೇಬೇಕು ಎಂದು ಹೇಳಿದರೆ ನಾನು ಅದಕ್ಕೆ ಬದ್ಧನಾಗಿರುತ್ತೇನೆ ಎಂದು ತನ್ವೀರ್ ಸೇಠ್ ಹೇಳಿದರು.
ಇದನ್ನೂ ಓದಿ: Actress Mrunal Thakur : ಮದುವೆಗೆ ಸಿದ್ಧವೆಂದ ಅಭಿಮಾನಿಗೆ ಕ್ಯೂಟ್ ಆಗಿ ಉತ್ತರಿಸಿದ ಮೃಣಾಲ್
ಮೊದಲು ಹೇಳಿದ್ದೇನು?
ನನ್ನ ಆರೋಗ್ಯ ಸರಿ ಇಲ್ಲ. ಅದೇ ಕಾರಣಕ್ಕೆ ಚುನಾವಣಾ ರಾಜಕೀಯ ನಿವೃತ್ತಿಯನ್ನು ಬಯಸಿದ್ದೇನೆ. ಜನ ನನ್ನ ತಾತನನ್ನು ಒಮ್ಮೆ, ತಂದೆಯನ್ನು 6 ಬಾರಿ, ನನ್ನನ್ನು 5 ಬಾರಿ ಗೆಲ್ಲಿಸಿದ್ದಾರೆ. ನರಸಿಂಹ ರಾಜ ಕ್ಷೇತ್ರದ ಮತದಾರರ ಋಣ ತೀರಿಸಬೇಕಿದೆ. ಕಾಂಗ್ರೆಸ್ ನನಗೆ ಹಲವಾರು ಅವಕಾಶ ನೀಡಿದೆ. ಯಾವುದೇ ಬೇಸರ ಇಲ್ಲ. ನರಸಿಂಹ ರಾಜ (ಎನ್‌ಆರ್) ಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೂ ನಾನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಮಂಗಳವಾರ (ಫೆ. ೨೮) ಬೆಳಗ್ಗೆ ಘೋಷಿಸಿದ್ದರು.
ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ತನ್ವೀರ್ ಸೇಠ್, ನನಗೆ ಇಲ್ಲಿ ಯಾವುದೇ ರೀತಿಯಾದಂತಹ ಬೇಸರ ಇಲ್ಲ. ನನ್ನ ಆರೋಗ್ಯ ಸರಿ ಇಲ್ಲ. ಬೇರೆ ಯಾವುದೇ ಬೆಳವಣಿಗೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸುವುದಾದರೆ ನಾನೇ ಮುಂದೆ ನಿಂತು ಗೆಲ್ಲಿಸುತ್ತೇನೆ. ಬೇರೆಯವರಿಗೆ ಟಿಕೆಟ್ ಕೊಟ್ಟರೂ ಕಾಂಗ್ರೆಸ್‌ಗೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ಆತಂಕ ನಿಜವಾಯ್ತು! ಉದ್ಯೋಗ ಕಸಿಯುತ್ತಿರುವ ChatGPT, ಚಾಟ್‌ಬಾಟ್ ನಿಯೋಜಿಸುತ್ತಿರುವ ಅಮೆರಿಕನ್ ಕಂಪನಿಗಳು
ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದು ನನ್ನ ನಿರ್ಧಾರವಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ತನ್ವೀರ್ ಸೇಠ್ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದರು.
ರಾಜಕೀಯ ನಿವೃತ್ತಿ ಬಗ್ಗೆ ತನ್ವೀರ್ ಸೇಠ್ ಹೇಳಿದ ಮಾತುಗಳೇನು ಎಂಬ ವಿಡಿಯೊ ಇಲ್ಲಿದೆ
ಆತ್ಮಹತ್ಯೆಗೆ ಯತ್ನಿಸಿದ ತನ್ವೀರ್ ಸೇಠ್ ಅಭಿಮಾನಿ
ಮಾಜಿ ಸಚಿವ ತನ್ವೀರ್ ಸೇಠ್ ರಾಜಕೀಯ ನಿವೃತ್ತಿಯನ್ನು ಘೋಷಣೆ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ ನೂರಾರು ಕಾರ್ಯಕರ್ತರು ಅವರ ಮನೆ ಮುಂದೆ ದೌಡಾಯಿಸಿದ್ದರು. ಈ ವೇಳೆ ತನ್ವೀರ್ ಸೇಠ್ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಸುಲ್ ಎಂಬಾತ ತನ್ನ ಶರ್ಟ್ ಬಿಚ್ಚಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನ ಮಾಡಿದ್ದು, ಸ್ಥಳದಲ್ಲಿದ್ದ ಉದಯಗಿರಿ ಠಾಣೆ ಪೊಲೀಸರು ಕೂಡಲೇ ಬಾಟಲಿ ಕಸಿದುಕೊಂಡು ಎಸೆದರು. ಬಳಿಕ ಅಲ್ಲಿಯೇ ಇದ್ದ ಉಳಿದ ಅಭಿಮಾನಿಗಳು ಈತನ ಮೈಮೇಲೆ ನೀರು ಸುರಿದು ಸಮಾಧಾನಪಡಿಸಿದ್ದರು.
ಮೂರು ದಿನದಲ್ಲಿ ಮತ್ತೊಮ್ಮೆ ಸ್ಪಷ್ಟನೆ ನೀಡುವುದಾಗಿ ಹೇಳಿದ್ದ ತನ್ವೀರ್
ಮತ್ತೊಬ್ಬ ಅಭಿಮಾನಿಯೊಬ್ಬ ತನ್ವೀರ್ ಸೇಠ್ ಮನೆ ಮೇಲೆ ಹತ್ತಿ ಕೆಳಗೆ ಹಾರುವುದಾಗಿ ಬೆದರಿಕೆಯೊಡ್ಡಿದ್ದ. ಹಾರಿಯೇ ಬಿಡುವಂತೆ ಕೂಗಾಟ ನಡೆಸಿದ್ದ. ಕೂಡಲೇ ಎಚ್ಚೆತ್ತ ಉಳಿದವರು ಮನೆ ಹತ್ತಿ ಆತನನ್ನು ಅಲ್ಲಿಂದ ಮೇಲಕ್ಕೆತ್ತಿಕೊಂಡು ಬಂದಿದ್ದರು. ಈ ನಡುವೆ ವಿಕಲಚೇತನ ಅಭಿಮಾನಿಯೊಬ್ಬ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿ, ಹೂವಿನ ಹಾರ ಹಾಕಿ ಸ್ಪರ್ಧಿಸುವಂತೆ ಮನವಿ ಮಾಡಿದ್ದರು.
ಡಿಸೆಂಬರ್‌ನಲ್ಲೇ ಪತ್ರ ಬರೆದಿದ್ದ ಸೇಠ್!
ನರಸಿಂಹರಾಜ ಕ್ಷೇತ್ರದ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಡಿಸೆಂಬರ್‌ನಲ್ಲಿಯೇ ರಾಜಕೀಯ ನಿವೃತ್ತಿಯನ್ನು ಘೋಷಣೆ ಮಾಡಿರುವ ವಿಷಯ ಈಗ ಗೊತ್ತಾಗಿದೆ. ಆದರೆ, ಚುನಾವಣೆ ಹೊಸ್ತಿಲಲ್ಲಿ ಈ ವಿಷಯ ಬಹಿರಂಗವಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
ಶಾಸಕ ತನ್ವೀರ್ ಸೇಠ್‌ಗೆ ಕಾರ್ಯಕರ್ತರ ಕ್ಲಾಸ್; ಇಲ್ಲಿದೆ ವಿಡಿಯೊ
ಇದನ್ನೂ ಓದಿ: 7th Pay Commission : ನೌಕರರ ಮುಷ್ಕರ ಸಮಸ್ಯೆ ಸಂಜೆಯೊಳಗೆ ಇತ್ಯರ್ಥ: ಬೊಮ್ಮಾಯಿ ವಿಶ್ವಾಸ, ಕೈಲಾಗದ ಸಿಎಂ ಎಂದ ಕಾಂಗ್ರೆಸ್
ಡಿಸೆಂಬರ್‌ನಲ್ಲಿ ನಡೆದಿದ್ದ ಅಧಿವೇಶನದ ಸಂದರ್ಭದಲ್ಲಿಯೇ ಎಐಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ನಿವೃತ್ತಿ ಘೋಷಿತ ಪತ್ರವನ್ನು ತನ್ವೀರ್ ಸೇಠ್ ನೀಡಿದ್ದರು. ತಮ್ಮ ರಾಜಕೀಯ ಜೀವನವನ್ನು ಕೊನೆಗೊಳಿಸುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಇದಕ್ಕೆ ಅನಾರೋಗ್ಯದ ಕಾರಣವನ್ನೂ ನೀಡಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯ ನಿವೃತ್ತಿ ಬಗ್ಗೆ ತಿಳಿಸಿದ್ದರು. ಆಗ ಈ ಇಬ್ಬರು ನಾಯಕರೂ ಸಾರಾಸಗಟಾಗಿ ತಿರಸ್ಕರಿಸಿದ್ದು ನೀವೇ ಸ್ಪರ್ಧೆ ಮಾಡಿ ಎಂದು ಹೇಳಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ತನ್ವೀರ್ ಈ ವಿಷಯವನ್ನು ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದರು ಎನ್ನಲಾಗಿದ್ದು, ಅವರೂ ಸಹ ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ.