Site icon Vistara News

Teachers Day | ಗಣಿತ ಕಷ್ಟವಲ್ಲ, ಸುಲಲಿತವೆಂದ ಈ ಶಿಕ್ಷಕರ ಶಾಲೆಯಲ್ಲಿ ಗಣಿತಕ್ಕೆ ಶೇ.100 ಫಲಿತಾಂಶ!

ಶಿವಮೊಗ್ಗ ರಘು ೨

ಶಿವಮೊಗ್ಗ: ಗಣಿತ ಎಂದರೆ ಕಬ್ಬಿಣದ ಕಡಲೆಯಲ್ಲ, ಇದು ಸುಲಲಿತ ಎಂದು ಹೇಳಿಕೊಡುತ್ತಿರುವ ಶಿಕ್ಷಕರೊಬ್ಬರು (Teachers Day) ಶಿವಮೊಗ್ಗದಲ್ಲಿದ್ದಾರೆ. ಈಗ ಇವರು ಬೋಧಿಸುತ್ತಿರುವ ಶಾಲೆಯಲ್ಲಿ ಗಣಿತ ವಿಷಯದಲ್ಲಿ ನೂರಕ್ಕೆ ನೂರು ಫಲಿತಾಂಶ ಲಭ್ಯವಾಗುತ್ತಿದ್ದು, ಮಕ್ಕಳ ಲೆಕ್ಕಾಚಾರವನ್ನು ಸರಿದಾರಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

ಶಿವಮೊಗ್ಗ ನಗರದ ಬಸವನಗುಡಿಯ ಬಿ.ಎಂ.ರಘು ಎಂಬ ಶಿಕ್ಷಕರು ಶೈಕ್ಷಣಿಕವಾಗಿ ಮಕ್ಕಳ ಪ್ರಗತಿಗೆ ಶ್ರಮಿಸುತ್ತಿರುವವರು. ಇವರು ಎನ್ಇಎಸ್ ಪ್ರೌಢಶಾಲೆಯಲ್ಲಿ ಗಣಿತ ಹಾಗೂ ವಿಜ್ಞಾನ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದು, ಪ್ರಸ್ತುತ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಗಣಿತ, ವಿಜ್ಞಾನ ಬೋಧಿಸುವ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಘು

ಗಣಿತವನ್ನು ಅತ್ಯಂತ ಸರಳವಾಗಿ ಬೋಧಿಸುವುದು ಇವರ ವಿಶೇಷತೆ. ಹೀಗಾಗಿ ಎನ್ಇಎಸ್ ಪ್ರೌಢಶಾಲೆಯಲ್ಲಿ ಹಲವು ವರ್ಷಗಳಿಂದ ಎಸ್ಎಸ್ಎಲ್‌ಸಿ ಗಣಿತ ವಿಷಯದಲ್ಲಿ ಶೇ.100 ಫಲಿತಾಂಶ ಲಭ್ಯವಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆಯೋಜಿಸಿರುವ ಅನೇಕ ಕಾರ್ಯಾಗಾರಗಳಲ್ಲಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಕೇವಲ ಗಣಿತ ಮಾತ್ರವಲ್ಲದೆ ವಿಜ್ಞಾನದಲ್ಲೂ ಅತ್ಯುತ್ತಮ ಶಿಕ್ಷಕ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ | Teachers’ Day | ನೀತಿಕತೆ, ಬೆಡಗುಗಳೊಂದಿಗೆ ಕಲಿಕೆಗೆ ಮೆರಗು ನೀಡಿದ ಶಿಕ್ಷಕ!

ಶಾಲೆಯ ಗೋಡೆಗಳಲ್ಲಿ ಶೈಕ್ಷಣಿಕ ಮಾದರಿ

ಗಣಿತ ಸೂತ್ರಗಳು, ಆಕೃತಿಗಳು, ಘನಾಕೃತಿಗಳು, ಗಣಿತ ಸಾಧಕರು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಶಾಲೆಯ ಗೋಡೆಯಲ್ಲಿ ಚಿತ್ರಗಳ ರೂಪದಲ್ಲಿ ಕೊಡಲಾಗಿದೆ. ಇದು ಪ್ರತಿ ಬಾರಿ ಕಣ್ಣಿಗೆ ಕಾಣಿಸುವುದರಿಂದ ಮಕ್ಕಳ ಕಲಿಕೆಗೆ ಪೂರಕವಾಗಲಿದೆ. ಅಲ್ಲದೆ, ಗಣಿತ ಲ್ಯಾಬ್‌ ಅನ್ನು ಸಹ ಇವರು ತೆರೆದಿದ್ದಾರೆ. ಜತೆಗೆ ಮಕ್ಕಳಿಗೆ ಪಾಠ ಮಾಡುವ ವೇಳೆ ಪ್ರಾಯೋಗಿಕವಾಗಿಯೇ ಹೇಳಿಕೊಡುತ್ತಿದ್ದಾರೆ. ಇದು ಸುಲಭ ಹಾಗೂ ಸರಳವಾಗಿ ಅರಿಯಲು ಸಹಾಯಕವಾಗುತ್ತಿದೆ.

ಸಂದ ಪ್ರಶಸ್ತಿಗಳು:
ದಾವಣಗೆರೆ ಜಿಲ್ಲಾ ಮಟ್ಟದಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ತರಬೇತಿ ನೀಡುವುದರೊಂದಿಗೆ ಹಾಗೂ ಎಸ್‌ಎಸ್‌ಎಲ್‌ಸಿಗೆ ಸಂಬಂಧಿಸಿದ ವಿವಿಧ ಜಿಲ್ಲೆಗಳ ಶೈಕ್ಷಣಿಕ ಪರಾಮರ್ಶೆ ನಡೆಸಿದ್ದಕ್ಕಾಗಿ ದಾವಣಗೆರೆ ಜಿಲ್ಲಾ ಮಟ್ಟದ ಸಾಧಕ ಶಿಕ್ಷಕ ಪ್ರಶಸ್ತಿ, ತಾರಾ ಮಂಡಲ ಸಂಘಟಿಸಿದ್ದ ವಿಜ್ಞಾನ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷದ ಪ್ರಶಸ್ತಿ ದೊರೆತಿದೆ. ಶಿವಮೊಗ್ಗ ನಗರ ಪಾಲಿಕೆಯ ಕಲಾ ದಸರಾ ಪ್ರಶಸ್ತಿ, ಸಾಗರದ ಸಹೃದಯ ಗೌರವ ಪ್ರಶಸ್ತಿ, ಬೆಂಗಳೂರಿನ ತಾಯ್ನಾಡು ಕನ್ನಡ ರಕ್ಷಣಾ ವೇದಿಕೆಯಿಂದ 2015ರ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ರತ್ನ ಪ್ರಶಸ್ತಿ ಹೆಸರಿನ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ಬೆಳಗಾವಿಯ ಡಾ.ಸ.ಜ. ನಾಗಲೋಟಮಠ ಅಂತಾರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ 2015-16ನೇ ಸಾಲಿನ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಹೀಗೆ ಅನೇಕ ಗೌರವಗಳಿಗೆ ಇವರು ಪಾತ್ರರಾಗಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ತಾಲೂಕಾಡಳಿತ, ಜಿಲ್ಲಾ ಪಂಚಾಯಿತಿಗಳಿಂದಲೂ ಜಿಲ್ಲಾ ಮಟ್ಟಗಳಲ್ಲಿ ಅಭಿನಂದನಾ ಪತ್ರಗಳೊಂದಿಗೆ ಸನ್ಮಾನಿಸಲಾಗಿದೆ. ಕುಮಟಾದ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ 2013 ಮತ್ತು 2014ರಲ್ಲಿ ನಡೆದ ತಾಲೂಕು ಮಟ್ಟದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸನ್ಮಾನಿತಗೊಂಡಿದ್ದು, ಇನ್ನೂ ಅನೇಕ ಸಂಘ-ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ | Teachers Day | ಸರ್ಕಾರಿ ಶಾಲೆಗೆ ಸೊಗಸು ತಂದ ಕೆ.ರಾಂಪುರದ ಶಿಕ್ಷಕ ಚಂದ್ರಶೇಖರ ರೆಡ್ಡಿ

Exit mobile version