ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಮೀಪ ಇರುವ ಹೊತ್ತಿನಲ್ಲಿ ಚುನಾವಣಾ ಪ್ರಚಾರಗಳು (Election campaign) ಜೋರಾಗಿವೆ. ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವನ್ನು ನಾಯಕರು ಮಾಡುತ್ತಿದ್ದಾರೆ. ಇದರ ಭಾಗವಾಗಿ ಯಾದಗಿರಿಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಗುರುವಾರ (ಮಾ. 23) ಏರ್ಪಡಿಸಲಾಗಿದ್ದ ಬಿಜೆಪಿ ಯುವ ಸಮಾವೇಶ ಕಾರ್ಯಕ್ರಮದಲ್ಲಿ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejaswi Surya) ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿಸಿ ವಾಪಸಾಗುವ ವೇಳೆ ಅವರೊಂದಿಗೆ ಕಾರ್ಯಕರ್ತರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಆ ತಳ್ಳಾಟ ನೂಕಾಟದಲ್ಲಿ ತೇಜಸ್ವಿ ಎಡವಿದ್ದಾರೆ. ಇನ್ನೇನು ಕೆಳಗೆ ಬೀಳಬೇಕು ಎನ್ನುವಷ್ಟರಲ್ಲಿ ಕಾರ್ಯಕರ್ತರು ಅವರ ರಟ್ಟೆಯನ್ನು ಹಿಡಿದು ಎಳೆದುಕೊಂಡಿದ್ದಾರೆ.
ಏನಿದು ಸೆಲ್ಫಿ ಕ್ರೇಜ್?
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿರುವ ತೇಜಸ್ವಿ ಸೂರ್ಯ ಅವರು ಯಾದಗಿರಿಯಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅವರು ವೇದಿಕೆಯಿಂದ ನಿರ್ಗಮಿಸಲು ಮೆಟ್ಟಿಲುಗಳ ಬಳಿ ಬಂದಿದ್ದಾರೆ. ಆಗ ವೇದಿಕೆ ಮುಂಭಾಗ ಇದ್ದ ನೂರಾರು ಕಾರ್ಯಕರ್ತರು ತೇಜಸ್ವಿ ಅವರ ಬಳಿ ಓಡಿ ಬಂದಿದ್ದಾರೆ.
ಬಂದವರೇ ನಮ್ಮ ಜತೆ ಒಂದು ಸೆಲ್ಫೀ ಪ್ಲೀಸ್ ಎಂದು ಕೇಳಿದ್ದಾರೆ. ತೇಜಸ್ವಿ ಸುತ್ತುವರಿದಿದ್ದ ಬಿಜೆಪಿ ಕಾರ್ಯಕರ್ತರು ಒಬ್ಬೊಬ್ಬರಾಗಿಯೇ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ವೇಳೆ ಕೆಲವರು ತೇಜಸ್ವಿಯವರ ಕೈಹಿಡಿದೆಳೆದು ಸೆಲ್ಫಿ ಪಡೆದುಕೊಂಡಿದ್ದಾರೆ. ಎಲ್ಲರಿಗೂ ತೇಜಸ್ವಿ ನಗುಮೊಗದಿಂದಲೇ ಪೋಸ್ ಕೊಡುತ್ತಾ ಇಳಿಯುತ್ತಾ ಬಂದಿದ್ದಾರೆ. ಆದರೆ, ಈ ವೇಳೆ ಉಂಟಾದ ನೂಕುನುಗ್ಗಲಿನಿಂದ ಆಯತಪ್ಪಿ ಕೆಳಗೆ ಬೀಳುವಂತಾದರು. ಆಗ ತಕ್ಷಣವೇ ಅಲ್ಲಿದ್ದ ಕಾರ್ಯಕರ್ತರು ಅವರನ್ನು ಹಿಡಿದು ಎಳೆದುಕೊಂಡಿದ್ದಾರೆ. ಹೀಗಾಗಿ ಕೆಳಗೆ ಬೀಳುವುದರಿಂದ ಸ್ವಲ್ಪದರಲ್ಲಿಯೇ ಬಚಾವ್ ಆಗಿದ್ದಾರೆ.
ಇದನ್ನೂ ಓದಿ: Panchamasali reservation : 2ಡಿಯಲ್ಲೇ 2ಎನ ಎಲ್ಲ ಸವಲತ್ತು ಸಿಗುವ ವಿಶ್ವಾಸ ಎಂದ ಜಯಮೃತ್ಯುಂಜಯ ಶ್ರೀ
ಇಷ್ಟಾದರೂ ಸಂಸದ ತೇಜಸ್ವಿಯವರು ಕಾರ್ಯಕರ್ತರ ಮೇಲೆ ಯಾವುದೇ ರೀತಿ ಕೋಪಗೊಳ್ಳದೆ, ರೇಗಾಡದೇ ನಗುತ್ತಲೇ ಅಲ್ಲಿಂದ ತೆರಳಿದ್ದಾರೆ.