ತುಮಕೂರು: ಟೆಂಪೋ ಟ್ರಾವೆಲರ್ ಒಂದು ಕ್ಷಣಾರ್ಧದಲ್ಲಿ ಬೆಂಕಿ ಹತ್ತಿಕೊಂಡು ಧಗಧಗಿಸಿದ ಘಟನೆ ಕುಣಿಗಲ್ ತಾಲೂಕಿನ ಬಿದನಗೆರೆ ಕ್ರಾಸ್ ಬಳಿಯಿರುವ ಬೈ ಪಾಸ್ ನಲ್ಲಿ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಅದರಲ್ಲಿದ್ದ ಒಂದು ಪುಟ್ಟ ಹಸುಳೆಯೂ ಸೇರಿದಂತೆ ೧೦ ಮಂದಿ ಪವಾಡಸದೃಶವಾಗಿ ಪಾರಾಗಿದ್ದಾರೆ.
ಹಾಸನದಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಿಟಿ ವಾಹನದಲ್ಲಿ ಒಂದು ಮಗು ಸೇರಿ ಒಟ್ಟು ಹತ್ತು ಮಂದಿ ಇದ್ದರು. ಸಾಗುವಾಗ ಒಮ್ಮೆಗೇ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಆಗ ಒಂದು ಕ್ಷಣವೂ ಯೋಚನೆ ಮಾಡದೆ ಚಾಲಕ ವಾಹನವನ್ನು ಮಾರ್ಗದ ಬದಿಯಲ್ಲಿ ನಿಲ್ಲಿಸಿದ್ದಲ್ಲದೆ ಕೂಡಲೇ ಒಳಗಿದ್ದವರನ್ನೆಲ್ಲ ಕೆಳಗೆ ಇಳಿಸಿದ್ದಾನೆ. ಅವರೆಲ್ಲ ಇಳಿದು ಬದಿಗೆ ನಿಲ್ಲುತ್ತಿದ್ದಂತೆಯೇ ಇಡೀ ಟಿಟಿಗೆ ಬೆಂಕಿ ಹತ್ತಿಕೊಂಡು ಧಗಧಗಿಸಿ ಸುಟ್ಟು ಕರಕಲಾಯಿತು.
ಒಂದು ವೇಳೆ ಚಾಲನ ಒಂದು ನಿಮಿಷ ತಡ ಮಾಡಿದ್ದರೂ ಬೆಂಕಿ ಇಡೀ ವಾಹನವನ್ನು ಆವರಿಸಿ ದೊಡ್ಡ ದುರಂತವೇ ಸಂಭವಿಸುವ ಅಪಾಯವಿತ್ತು. ಸ್ವಲ್ಪ ಯಾಮಾರಿದ್ದರೂ ಹತ್ತು ಜನ ಸುಟ್ಟು ಕರಕಲಾಗುವ ಅಪಾಯವಿತ್ತು.
ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಏನು ಕಾರಣ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಯಾವುದೇ ಜೀವ ಹಾನಿ ಸಂಭವಿಸದೆ ಇರುವುದರಿಂದ ಎಲ್ಲರೂ ನಿಟ್ಟುಸಿರುಬಿಟ್ಟಿದ್ದಾರೆ. ಆದರೆ, ಟಿಟಿ ಮಾತ್ರ ಸಂಪೂರ್ಣ ಸುಟ್ಟು ಹೋಗಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.