Site icon Vistara News

ರಾಜ್ಯಸಭೆಯಲ್ಲಿ ಬಂದ ಮಾನ ಪರಿಷತ್‌ನಲ್ಲಿ ಹೋಯಿತು: ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ದೌಡು

basavaraja bommai sad and nalin kumar kateel

ರಮೇಶ ದೊಡ್ಡಪುರ ಬೆಂಗಳೂರು

‘ಸಿಎಂ ಬದಲಾವಣೆʼ ಎಂಬ ಶಬ್ದ ಬಿಜೆಪಿ ವಲಯದಲ್ಲಿ ಕೇಳದೆ ಅನೇಕ ಸಮಯ ಕಳೆದಿತ್ತು. ಇನ್ನು ಕೆಲವೇ ದಿನಗಳಲ್ಲಿ ಮತ್ತೆ ʼಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆʼ ಶಬ್ದ ಕೇಳುವ ಸಾಧ್ಯತೆ ದಟ್ಟವಾಗಿದೆ. ಕಾರಣ ಇಷ್ಟೆ, ಗುರುವಾರ ಹೊರಬಿದ್ದ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಕಂಡ ಸೋಲು.

ಜೂನ್‌ 10ರಂದು ದೇಶಾದ್ಯಂತ ರಾಜ್ಯಸಭೆ ಚುನಾವಣೆಗಳು ನಡೆದವು. ವಿಧಾನಸಭೆಯಿಂದ ಆಯ್ಕೆ ಮಾಡಬೇಕಾದ ಈ ಸ್ಥಾನಗಳಿಗೆ ಕರ್ನಾಟಕದಿಂದ ನಾಲ್ವರನ್ನು ಕಳಿಸುವ ಅವಕಾಶವಿತ್ತು. ಸದಸ್ಯರಾಗಿದ್ದ ಕಾಂಗ್ರೆಸ್‌ನ ಜೈರಾಮ್‌ ರಮೇಶ್‌, ಬಿಜೆಪಿಯ ನಿರ್ಮಲಾ ಸೀತಾರಾಮನ್‌ ಅವರಿಗೆ ಅವೆರಡೂ ಪಕ್ಷಗಳು ಮತ್ತೆ ಅವಕಾಶ ಕಲ್ಪಿಸಿದ್ದವು. ಇನ್ನು, ಕೆ.ಸಿ. ರಾಮಮೂರ್ತಿ ಹಾಗೂ 2021ರ ಸೆಪ್ಟೆಂಬರ್‌ 13ರಂದು ನಿಧನರಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಆಸ್ಕರ್‌ ಫರ್ನಾಂಡೀಸ್‌ ಸ್ಥಾನಕ್ಕೆ ಇಬ್ಬರನ್ನು ಆಯ್ಕೆ ಬೇಕಿತ್ತು. ಇದರಲ್ಲಿ ಬಿಜೆಪಿಯಿಂದ ನವರಸನಾಯಕ ಜಗ್ಗೇಶ್‌ ಆಯ್ಕೆಯಾಗುವುದು ಖಚಿತವಾಗಿತ್ತು. ಆದರೆ ಉಳಿದ ಒಂದು ಸ್ಥಾನಕ್ಕೆ ಅಂದರೆ ನಾಲ್ಕನೇ ರಾಜ್ಯಸಭೆ ಸ್ಥಾನಕ್ಕೆ ಮೂವರು ಪೈಪೋಟಿಯಿತ್ತು.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಕಾಂಗ್ರೆಸ್‌ ಎರಡನೇ ಅಭ್ಯರ್ಥಿ ಕಣಕ್ಕೆ: JDS ಮೈತ್ರಿಗೆ ಸಿದ್ದು ಗುದ್ದು

ರಾಜ್ಯಸಭೆ ಚುನಾವಣೆಗೆ ನಾಲ್ಕನೇ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿರುವಂತೆಯೇ ಕಾಂಗ್ರೆಸ್‌ ಅಚ್ಚರಿಯ ನಡೆ ಇಟ್ಟಿತ್ತು. ಅದಾಗಲೇ ಒಂದು ಸ್ಥಾನಕ್ಕೆ ಜೈರಾಮ್‌ ರಮೇಶ್‌ ಅವರ ಹೆಸರು ಘೋಷಿಸಿದ್ದ ಕಾಂಗ್ರೆಸ್‌, ಮತ್ತೊಬ್ಬ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಹಿರಿಯ ನಾಯಕ ರೆಹಮಾನ್‌ ಖಾನ್‌ ಪುತ್ರ ಮನ್ಸೂರ್‌ ಖಾನ್‌ ಅವರನ್ನು ಕಣಕ್ಕಿಳಿಸಿತು. ತಮ್ಮ ಬದ್ಧವೈರಿ ಜೆಡಿಎಸ್‌ ಅಭ್ಯರ್ಥಿ ಗೆಲ್ಲಬಾರದು ಎಂದು ಸಿದ್ದರಾಮಯ್ಯ ಅವರು ಹೂಡಿದ ತಂತ್ರ ಇದು ಎಂಬುದು ರಾಜಕೀಯ ವಲಯದಲ್ಲಿ ಕೇಳಿಬಂದ ಮಾತು.

ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಅವಶ್ಯಕ ಹೆಚ್ಚುವರಿ ಮತಗಳನ್ನು ಜೆಡಿಎಸ್‌ಗೆ ನೀಡುವಂತೆ ದೇವೇಗೌಡರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಳಿಯೇ ಮಾತುಕತೆ ನಡೆಸಿದ್ದರು ಎನ್ನುವುದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ನುಡಿ. ಹೀಗೆ ನಡೆದಿದ್ದ ಮಾತುಕತೆಯನ್ನು ವಿಫಲಗೊಳಿಸಲು ಸಿದ್ದರಾಮಯ್ಯ ತಂತ್ರ ಹೂಡಿದ್ದು, ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಲೆಹರ್‌ಸಿಂಗ್‌ ಸಿರೋಯಾ ಗೆದ್ದುಬರುತ್ತಾರೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿಯವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು.

ಇದರ ಮುಂದುವರಿದ ಭಾಗವಾಗಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪರಸ್ಪರರ ವಿರುದ್ಧ ಜಾತ್ಯಾತೀತೆಯ ಅಸ್ತ್ರ ಪ್ರಯೋಗಿಸಿದವು. ಮನ್ಸೂರ್‌ ಖಾನ್‌ರನ್ನು ಗೆಲ್ಲಿಸಿದರೆ ಜಾತ್ಯಾತೀತತೆ ಎಂದು ಸಿದ್ದರಾಮಯ್ಯ ಹೇಳಿದರೆ, ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸುವುದು ನಿಜವಾದ ಜಾತ್ಯಾತೀತತೆ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಇಬ್ಬರೂ ಆತ್ಮಸಾಕ್ಷಿಗಳ ಮಾತನ್ನೂ ಆಡಿದರು. ಸಿದ್ದರಾಮಯ್ಯ ಒಂದು ಹೆಜ್ಜೆ ಮುಂದೆ ಹೋಗಿ, ಜೆಡಿಎಸ್‌ ಶಾಸಕರಿಗೇ ನೇರವಾಗಿ ಬಹಿರಂಗ ಪತ್ರ ಬರೆದರು. ತಮ್ಮ ಮತವನ್ನು ಕಾಂಗ್ರೆಸ್‌ಗೆ ಚಲಾಯಿಸಿ ಆತ್ಮಸಾಕ್ಷಿ ಮತ ನೀಡಿ ಎಂದರು.

ಇದೆಲ್ಲದರ ನಡುವೆ ಬಿಜೆಪಿ ಮೌನವಾಗಿ ಲೆಹರ್‌ಸಿಂಗ್‌ ಸಿರೋಯಾ ಅವರನ್ನು ಕಣಕ್ಕಿಳಿಸಿತ್ತು. ಹಾಗೆ ನೋಡಿದರೆ ಬಿಜೆಪಿಗೆ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಇರಾದೆ ಇರಲಿಲ್ಲ. ತಮ್ಮ ಶಾಸಕರ ಸಂಖ್ಯೆಗೆ ಅನುಗುಣವಾಗಿ ನಿರ್ಮಲಾ ಸೀತಾರಾಮನ್‌ ಹಾಗೂ ಜಗ್ಗೇಶ್‌ ಅವರನ್ನು ಗೆಲ್ಲಿಸಿಕೊಳ್ಳುವ ಆಲೋಚನೆಯಲ್ಲಿತ್ತು. ಆದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವಿನ ಜಟಾಪಟಿಯಲ್ಲಿ ಬಿಜೆಪಿಗೆ ಅವಕಾಶದ ಆಶಾಕಿರಣ ಗೋಚರಿಸಿತ್ತು. ಕೂಡಲೆ ನವದೆಹಲಿಯಲ್ಲಿನ ವರಿಷ್ಠರನ್ನು ಸಂಪರ್ಕಿಸಿದ ರಾಜ್ಯ ಮುಖಂಡರು, ಅದಾಗಲೇ ರಾಜ್ಯಸಭೆ ಟಿಕೆಟ್‌ಗೆ ಲಾಬಿ ಮಾಡುತ್ತಿದ್ದ ಲೆಹರ್‌ಸಿಂಗ್‌ ಹೆಸರು ಸೂಚಿಸಿದರು. ಗೆಲ್ಲಿಸಿಕೊಂಡು ಬಂದರೆ ನಿಮ್ಮ ಹಣೆಬರಹ, ಆದರೆ ನಮ್ಮ ಮರ್ಯಾದೆ ಹೋಗದಂತೆ ನೋಡಿಕೊಳ್ಳಿ ಎಂದ ವರಿಷ್ಠರು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಿದ್ದಾಗ ಟಿಕೆಟ್‌ ಘೋಷಣೆ ಮಾಡಿದರು.

ಒಂದೆಡೆ ಕಾಂಗ್ರೆಸ್‌-ಜೆಡಿಎಸ್‌ ಕಚ್ಚಾಟವಾದರೆ, ತಮ್ಮ ಬಳಿಯಿರುವ ಮತಗಳನ್ನು ಅತ್ಯಂತ ಜಾಗರೂಕತೆಯಿಂದ ಬಳಸುವ ಅನಿವಾರ್ಯತೆ ಬಿಜೆಪಿಗಿತ್ತು. ಮೊದಲನೆಯದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಗೆಲುವು ಖಚಿತವಾಗಬೇಕಿತ್ತು. ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು 45 ಮತಗಳು ಬೇಕಿತ್ತು. ಬಿಜೆಪಿಯಲ್ಲಿ ನಿರ್ಮಲಾ ಸೀತಾರಾಮನ್‌ ಹಾಗೂ ಜಗ್ಗೇಶ್‌ಗೆ ತಲಾ 45 ಪ್ರಥಮ ಪ್ರಾಶಸ್ತ್ಯದ ಮತ ನೀಡಿದ ನಂತರ, ಪಕ್ಷೇತರರ ಬೆಂಬಲವನ್ನೂ ಪಡೆದು 32 ಮತಗಳು ಉಳಿಯುತ್ತಿದ್ದವು. ಚುನಾವಣೆ ನಡೆಯುವುದು ಮತಪತ್ರದ ಮೂಲಕವಾದ್ಧರಿಂದ ಕೆಲವು ಶಾಸಕರು ಯಡವಟ್ಟು ಮಾಡಿ, ಚಲಾಯಿಸಿದ ಮತ ಕುಲಗೆಟ್ಟಮತವಾಗುವ ಅಪಾಯವೂ ಇರುತ್ತದೆ. ಹೀಗಾಗಿ ನಿರ್ಮಲಾ ಸೀತಾರಾಮನ್‌ ಅವರಿಗೆ 45ರ ಜತೆಗೆ ಸೇಫ್ಟಿಗಾಗಿ ಒಂದು ಮತವನ್ನು ಮೀಸಲಿಡಲಾಯಿತು. ಜಗ್ಗೇಶ್‌ಗೆ 44ಮತಗಳನ್ನು ಮೀಸಲಿಟ್ಟು, ಉಳಿದ ಒಂದು ಮತಕ್ಕೆ ಎರಡನೇ ಪ್ರಾಶಸ್ತ್ಯದ ಸುಮಾರು 80 ಮತಗಳನ್ನು ಮೀಸಲಿಡಲಾಯಿತು. ಇದರಿಂದಾಗಿ ಲೆಹರ್‌ಸಿಂಗ್‌ಗೆ ಒಂದು ಹೆಚ್ಚುವರಿ ಮತ ಲಭಿಸಿತು. ಲೆಹರ್‌ ಸಿಂಗ್‌ ತಮ್ಮ ʼಸಾಮರ್ಥ್ಯʼವನ್ನು ಬಳಸಿ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರನ್ನು ತಮ್ಮತ್ತ ಸೆಳೆದರು. ಒಟ್ಟಾರೆಯಾಗಿ, ರಾಜ್ಯಸಭೆಯಲ್ಲಿ ಬಿಜೆಪಿಗೆ ಒಂದು ಹೆಚ್ಚುವರಿ ಸ್ಥಾನವನ್ನು ಕರ್ನಾಟಕದಿಂದ ನೀಡಲಾಯಿತು. ಇದು ಸಹಜವಾಗಿಯೇ ಕೇಂದ್ರದ ವರಿಷ್ಠರಿಗೆ ಖುಷಿಯಾಯಿತು.

ಈ ಫಲಿತಾಂಶವು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರ ವರ್ಚಸ್ಸನ್ನು ಹೆಚ್ಚಿಸಿತು. ಫಲಿತಾಂಶ ಬಂದ ಕೂಡಲೆ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ ಹಾಗೂ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕರೆ ಮಾಡಿ ಸಿಎಂಗೆ ಅಭಿನಂದಿಸಿದರು. ದೆಹಲಿ ಮಟ್ಟದಲ್ಲಿ ಸಿಎಂ ಬೊಮ್ಮಾಯಿ ಕುರಿತು ಸದಭಿಪ್ರಾಯ ಮೂಡಿದ್ದು, ʼಸಿಎಂ ಬದಲಾವಣೆʼ ಚರ್ಚೆಗೆ ತಿಲಾಂಜಲಿ ನೀಡಿತ್ತು. 2023ರಲ್ಲಿ ಯಾರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಬೇಕು ಎನ್ನುವುದಕ್ಕೂ ಉತ್ತರ ನೀಡಿದಂತಿತ್ತು.

ಬೆಂಗಳೂರನ್ನು ಗಿರಗಿರನೆ ಸುತ್ತಿದ್ದ ಬೊಮ್ಮಾಯಿ

ರಾಜ್ಯಸಭೆ ಚುನಾವಣೆಯಿಂದ ವರ್ಚಸ್ಸು ಹೆಚ್ಚಿಸಿಕೊಂಡಿದ್ದೇ ತಡ ಸಿಎಂ ಬೊಮ್ಮಾಯಿ ಬೆಂಗಳೂರು ರೌಂಡ್ಸ್‌ ಹಾಕಿದರು. ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಬಿಬಿಎಂಪಿ ಕಾಯ್ದೆಯನ್ನು ಜಾರಿಗೆ ತಂದರು. ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದ್ದದ್ದನ್ನು ಕಂಡು ದಿಢೀರ್‌ ತಪಾಸಣೆ ನಡೆಸಿದರು. ಬುಧವಾರ ಮದ್ಯಾಹ್ನದವರೆಗೆ ಬೆಂಗಳೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ, ವಿದ್ಯಾರ್ಥಿ ಭವನದಲ್ಲಿ ದೋಸೆ ಸೇವಿಸಿ ತೆರಳಿದರು.

ಎಣಿಕೆ ಆರಂಭವಾದಾಗಲೇ ಆತಂಕ

ಬುಧವಾರ ಮದ್ಯಾಹ್ನದೊಳಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿ ಬಸವರಾಜ ಹೊರಟ್ಟಿ ಆಯ್ಕೆಯಾದರು. ಅದಷ್ಟೆ. ಮತ್ತೆ ಸಿಎಂಗೆ ಅವತ್ತು ಸಂಜೆವರೆಗೆ ಖುಷಿಯ ವಿಚಾರ ಬರಲೇ ಇಲ್ಲ. ಇನ್ನೂ ಮೂರು ಸ್ಥಾನಗಳ ಎಣಿಕೆ ನಡೆದೇ ಇತ್ತು. ಸಂಜೆ ವೇಳೆಗೆ, ವಾಯವ್ಯ ಪದವೀಧರ ಕ್ಷೇತ್ರದಿಂದ ಹನುಮಂತ ನಿರಾಣಿ ಗೆಲ್ಲುವ ಮುನ್ಸೂಚನೆ ಲಭಿಸಿತು. ಗುರುವಾರ ಉಳಿದ ಎಣಿಕೆ ಆರಂಭವಾದಾಗ ನಿರೀಕ್ಷೆಯಂತೆ ನಿರಾಣಿ ಜಯಿಸಿದರು. ಆದರೆ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್‌ ಶಹಾಪುರ ಸೋಲುಂಡರು. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಿರಿಯ ಕಾರ್ಯಕರ್ತ ಮೈ.ವಿ. ರವಿಶಂಕರ್‌ ಪ್ರಬಲ ಪೈಪೋಟಿ ನೀಡಿದರಾದರೂ, ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ ವಿರುದ್ಧ ಮಂಡಿಯೂರಿದರು.

ಎರಡು ಉಳಿಸಿಕೊಂಡರೂ ಸಮಸ್ಯೆ ತಪ್ಪಲಿಲ್ಲ

ಚುನಾವಣೆಗೂ ಮುನ್ನ, ಈ ನಾಲ್ಕು ಸ್ಥಾನದಲ್ಲಿ ಎರಡು ಬಿಜೆಪಿ ಬಳಿಯಿದ್ದರೆ ಇನ್ನೊಂದು ಜೆಡಿಎಸ್‌ ಬಳಿಯಿತ್ತು. ಒಂದು ಸ್ಥಾನ ಖಾಲಿ ಇತ್ತು. ಕಾಂಗ್ರೆಸ್‌ ಯಾವುದೇ ಹಾಲಿ ಸದಸ್ಯರನ್ನು ಹೊಂದಿರಲಿಲ್ಲ. ಫಲಿತಾಂಶದ ನಂತರವೂ ಬಿಜೆಪಿ ತನ್ನ ಎರಡು ಸ್ಥಾನಗಳನ್ನು ಉಳಿಸಿಕೊಂಡಿತು. ಸಂಖ್ಯೆ ಪ್ರಕಾರ ಇದು ಒಕೆ. ಆದರೆ ಆಳಕ್ಕಿಳಿದರೆ ಸಮಸ್ಯೆಯೇ ಹೆಚ್ಚು.

ಬಿಜೆಪಿಯಿಂದ ಜಯಿಸಿರುವ ಮೊದಲ ಅಭ್ಯರ್ಥಿ ಬಸವರಾಜ ಹೊರಟ್ಟಿ, ಬಿಜೆಪಿ ಎಂಬ ಕಾರಣಕ್ಕೆ ಗೆದ್ದಿಲ್ಲ. ಕಳೆದ ಏಳು ಬಾರಿ ಜಯಿಸಿರುವ ಅವರು ಈ ಬಾರಿ ಬಿಜೆಪಿಗೆ ಆಗಮಿಸಿದ್ದಾರೆ. ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸುವುದು ಬೇಡ, ಬಿಜೆಪಿಗೆ ಬನ್ನಿ ಎಂದು ತಮ್ಮ ಮತದಾರರು ಹೇಳಿದ್ದರಿಂದ ಇಲ್ಲಿ ಕಣಕ್ಕಿಳಿದರು ಅಷ್ಟೆ. ಇನ್ನು ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬಿಜೆಪಿ ವರಿಷ್ಠರಿಗೆ ಇಷ್ಟ ಇರಲಿಲ್ಲ. ಸಹೋದರ ಹಾಗೂ ಸಚಿವ ಮುರುಗೇಶ್‌ ನಿರಾಣಿ ಅವರ ಸತತ ಪ್ರಯತ್ನ ಹಾಗೂ ಒತ್ತಾಯಕ್ಕೆ ಮಣಿದು ಟಿಕೆಟ್‌ ನೀಡಿದರು. ಅವರು ಜಯಗಳಿಸಿದರೂ ಅದರು ಸಹೋದರರ ಸಾಮರ್ಥ್ಯ ಹಾಗೂ ಜಾತಿಯ ಕಾರಣಕ್ಕೆ ಎನ್ನುವುದು ಬಿಜೆಪಿ ವಲಯದಲ್ಲಿರುವ ಮಾತು. ಹಾಗಾಗಿ ಇಬ್ಬರೂ ಅಭ್ಯರ್ಥಿಗಳ ಗೆಲುವನ್ನು ಬಿಜೆಪಿ, ಸಂಘಟನೆಯಾಗಿ ತನ್ನದೆಂದು ಹೇಳಿಕೊಳ್ಳುವಂತಿಲ್ಲ.

ಸೋತ ಇಬ್ಬರಲ್ಲಿ ಮೈ.ವಿ. ರವಿಶಂಕರ್‌ ಜನಸಂಘದ ಕಾಲದಿಂದಲೂ ಕಾರ್ಯಕರ್ತ. ಯಾವುದೇ ಸ್ಥಾನಕ್ಕೆ ಆಸೆ ಪಡದೆ ಅನೇಕ ದಶಕ ದುಡಿದ ನಂತರ ಕಳೆದ ಚುನಾವಣೆಲ್ಲಿ ಪರಿಷತ್‌ ಟಿಕೆಟ್‌ ನೀಡಲಾಗಿತ್ತು. ಆ ಚುನಾವಣೆಯಲ್ಲಿಯೇ ಪ್ರಬಲ ಪೈಪೋಟಿ ನೀಡಿದ್ದ ರವಿಶಂಕರ್‌ ಕೇವಲ 146 ಮತಗಳ ಅಂತರದಲ್ಲಿ ಸೋಲುಂಡಿದ್ದರು. ಈ ಬಾರಿ ಹೇಗಾದರೂ ಮಾಡಿ ಅವರನ್ನು ಗೆಲ್ಲಿಸಲೇಬೇಕು ಎಂದು ಸಂಘಟನೆಯಿಂದ ಸೂಚನೆ ಇತ್ತು. ಇನ್ನು ಎರಡನೇ ಅಭ್ಯರ್ಥಿ ಅರುಣ್‌ ಶಹಾಪುರ ಎಬಿವಿಪಿ ಹಿನ್ನೆಲೆ ಇರುವವರು. ವಿಶೇಷವಾಗಿ ಶಿಕ್ಷಣದ ವಿಚಾರದಲ್ಲಿ ಬಿಜೆಪಿ ವಲಯದಲ್ಲಿ ಗುರುತಿಸಿಕೊಂಡವರು. ಬಿಜೆಪಿ ವರಿಷ್ಠರ ಜತೆಗಷ್ಟೆ ಅಲ್ಲದೆ ಆರ್‌ಎಸ್‌ಎಸ್‌ ಹಾಗೂ ಎಬಿವಿಪಿ ವಲಯದಲ್ಲಿಯೂ ಗೌರವ ಉಳಿಸಿಕೊಂಡವರು. ಕೈ ಬಾಯಿ ಶುದ್ಧ ಎಂದೂ ಹೆಸರು ಪಡೆದವರು. ಈಗಾಗಲೆ ಎರಡು ಬಾರಿ ಜಯಿಸಿದ್ದ ಶಹಾಪುರ ಈ ಬಾರಿ ಹ್ಯಾಟ್ರಿಕ್‌ ಗೆಲುವಿನ ಕನಸಿನಲ್ಲಿದ್ದರು. ಈ ಬಾರಿ ಅವರು ಜಯಿಸಿ, 2023ರಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಚಿವರಾಗುವುದು ಗ್ಯಾರಂಟಿ ಎನ್ನಲಾಗುತ್ತಿತ್ತು. ಆದರೆ ಇವರೂ ಸೋತರು. ಸಂಗಟನಾತ್ಮಕವಾಗಿ ಗೆಲ್ಲಲೇಬೇಕಿದ್ದ ಇಬ್ಬರು ಅಭ್ಯರ್ಥಿಗಳ ಸೋಲು ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ವರಿಷ್ಠರ ಕೆಂಗಣ್ಣು ಬೀಳುವಂತೆ ಮಾಡಿದೆ.

ದಿಢೀರ್‌ ದೆಹಲಿ ಪ್ರವಾಸ

ಗುರುವಾರ ದಿನವಿಡಿ ಸಿಎಂ ಮಾತಿನಲ್ಲಿ ಈ ಬೇಸರ ವ್ಯಕ್ತವಾಗುತ್ತಿತ್ತು. ಅವರ ಹೇಳಿಕೆಗಳಲ್ಲಿ ಎಂದಿನ ಲವಲವಿಕೆ ಇರಲಿಲ್ಲ. ಇದೆಲ್ಲದರ ನಡುವೆ ಸಿಎಂ ದಿಢೀರ್‌ ದೆಹಲಿ ಪ್ರವಾಸ ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಗೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳುತ್ತಾರೆ. 9.45ಕ್ಕೆ ತಲುಪಿ, 12.30ರವರೆಗೂ ವಿವಿಧ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ. 12.30ಕ್ಕೆ ಖಾಸಗಿ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುತ್ತಾರೆ. ಮದ್ಯಾಹ್ನ 2.30 ಕ್ಕೆ ಜಿಎಸ್‌ಟಿ ಸಭೆಯಲ್ಲಿ ಭಾಗವಹಿಸುತ್ತಾರೆ. ಸಂಜೆ 4.30ಕ್ಕೆ ಹೊರಟು 7.30ಕ್ಕೆ ಬೆಂಗಳೂರಿಗೆ ವಾಪಸಾಗುತ್ತಾರೆ.

ಇದರಲ್ಲಿ ಮಜಾ ಏನು ಎಂದರೆ, ಗುರುವಾರದವರೆಗೂ ಸಿಎಂ ದೆಹಲಿ ಭೇಟಿ ಅಂತಿಮವಾಗಿರಲಿಲ್ಲ. ಖಾಸಗಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದಲೇ ವರ್ಚುವಲ್‌ ಆಗಿ ಭಾಗವಹಿಸುವ ನಿರ್ಧಾರವಾಗಿತ್ತು. ಜಿಎಸ್‌ಟಿ ಸಭೆ ಅದಾಗಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯುವುದು ಎಂದು ಖಾತ್ರಿ ಆಗಿದ್ದರಿಂದ ಅದನ್ನೂ ಬೆಂಗಳೂರಿನಿಂದಲೇ ಅಟೆಂಡ್‌ ಮಾಡುವವರಿದ್ದರು. ಆದರೆ ವಿಧಾನಪರಿಷತ್‌ ಚುನಾವಣೆಯ ನಂತರ ಬದಲಾದ ಕಾಲಘಟ್ಟದಲ್ಲಿ, ಖಾಸಗಿ ಸಂಸ್ಥೆಯ ಕಾರ್ಯಕ್ರಮಕ್ಕೆ ಖುದ್ದಾಗಿ ತೆರಳುವ ನೆಪ ಇಟ್ಟುಕೊಂಡು ಅದಕ್ಕೆ ಜತೆಯಾಗಿ ಕೆಲವು ಕೇಂದ್ರ ಸಚಿವರ ಭೇಟಿ ಎನ್ನುತ್ತ ದೆಹಲಿಗೆ ಹೊರಟಿದ್ದಾರೆ ಸಿಎಂ. ಇದರಲ್ಲಿ ಇನ್ನೂ ಮಜಾ ಏನು ಎಂದರೆ, ದೆಹಲಿಗೆ ಹೋದರೂ ಅಲ್ಲಿಯ ಕರ್ನಾಟಕ ಭವನದಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ಜಿಎಸ್‌ಟಿ ಸಭೆಯಲ್ಲಿ ಭಾಗಿವಹಿಸಿ ಬೆಂಗಳೂರಿಗೆ ವಾಪಸಾಗುವುದು.

ಸಿಎಂ ಕೊಡಲಿರುವ ಕಾರಣಗಳು

ಬೆಳಗ್ಗಿನ ಸಮಯದಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಅವರ ಜತೆಗೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೂ ಭೇಟಿ ಮಾಡುವ ಪ್ರಯತ್ನ ಮಾಡಲಾಗುತ್ತದೆ. ರವಿಶಂಕರ್‌ ಹಾಗೂ ಅರುಣ್‌ ಶಹಾಪುರ ಸೋಲಿಗೆ ಸಿಎಂ ಕಾರಣಗಳನ್ನು ವಿವರಿಸಲಿದ್ದಾರೆ. ಚುನಾವಣೆಯಲ್ಲಿ ಆದ ಸೋಲಿಗೆ ತಾವು ಕಾರಣರಲ್ಲ. ರವಿಶಂಕರ್‌ ಸೋಲಿಗೆ, ಮುಖ್ಯವಾಗಿ ಆ ಭಾಗದ ಲಿಂಗಾಯತ ಮತದಾರರು ಮುನಿಸಿಕೊಂಡಿದ್ದು ಕಾರಣ. ವಿಜಯೇಂದ್ರಗೆ ಟಿಕೆಟ್‌ ಕೊಡಲಿಲ್ಲ ಎಂಬ ಬೇಸರ ಇವರಲ್ಲಿರುವ ಕಾರಣಕ್ಕೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಇನ್ನು ಅರುಣ್‌ ಶಹಾಪುರ ಸೋಲಿಗೆ ಸ್ಥಳೀಯ ಅಡ್ಜಸ್ಟ್‌ಮೆಂಟ್‌ ರಾಜಕಾರಣದ ಜತೆಗೆ ಕಾಂಗ್ರೆಸ್‌ ನಾಯಕರು ಹಣ ಹಂಚಿದ್ದು ಕಾರಣ. ಜತೆಗೆ ಬಿಜೆಪಿ ನಾಯಕರು ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ್‌ ಹುಕ್ಕೇರಿ ವಿರುದ್ದ ಆಡಿತ ಮಾತುಗಳೇ ಮುಳುವಾದವು. ತಮ್ಮ ತಪ್ಪೇನೂ ಇಲ್ಲ ಎಂದು ವಿವರಣೆ ನೀಡುವವರಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಒಟ್ಟಾರೆ, ಒಂದು ವಾರದ ಹಿಂದಷ್ಟೆ ತಾನೇ ರಾಜಕುಮಾರ ಎಂದು ಗೆದ್ದು ಬೀಗಿದವರು ಸಿಎಂ ಬಸವರಾಜ ಬೊಮ್ಮಾಯಿ. ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಹೆಚ್ಚುವರಿ ಅಭ್ಯರ್ಥಿಯನ್ನು ಗೆಲ್ಲಿಸಿ ಗೌರವ ಸಂಪಾದಿಸಿದ್ದರು. ವರಿಷ್ಠರಿಂದ ಭೇಷ್‌ ಎನ್ನಿಸಿಕೊಂಡಿದ್ದರು. ಆದರೆ ಇದೀಗ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷದ ಕಟ್ಟಾ ಕಾರ್ಯಕರ್ತರು ಸೋಲುವ ಮೂಲಕ ಮುಖಂಭಂಗ ಅನುಭವಿಸಿದ್ದಾರೆ. ರಾಜ್ಯಸಭೆಯಲ್ಲಿ ಬಂದ ಮಾನ ವಿಧಾನ ಪರಿಷತ್‌ನಲ್ಲಿ ಕೊಚ್ಚಿ ಹೋಗಿದೆ. ಇದೀಗ ನವದೆಹಲಿ ದಂಡಯಾತ್ರೆಯಲ್ಲಿ ಈ ಗಾಯಕ್ಕೆ ಮುಲಾಮು ಹಚ್ಚಾಲಾಗುತ್ತದೆಯೋ ಅಥವಾ ಮತ್ತೆ ರಾಜ್ಯದಲ್ಲಿ ʼಸಿಎಂ ಬದಲಾವಣೆʼ ಚರ್ಚೆ ಆರಂಭವಾಗುತ್ತದೆಯೋ ಕಾಲವೇ ಉತ್ತರಿಸಲಿದೆ.

Exit mobile version