ಬೆಂಗಳೂರು: ಕಲಬುರಗಿ ಮೂಲದ ಉಗ್ರ ಮೊಹಮ್ಮದ್ ಸಿರಾಜುದ್ದೀನ್ ಅಲಿಯಾಸ್ ಸಿರಾಜ್‌ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಜೈಪುರ ಎನ್ಐಎ ಸ್ಪೆಷಲ್ ಕೋರ್ಟ್ ತೀರ್ಪು ನೀಡಿದೆ.
ಐಸಿಸ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಹಿನ್ನೆಲೆಯಲ್ಲಿ ಮೊಹಮ್ಮದ್ ಸಿರಾಜುದ್ದೀನ್‌ನನ್ನು ಬಂಧಿಸಲಾಗಿತ್ತು. ಸಿರಾಜುದ್ದೀನ್ ಫೇಸ್‌ಬುಕ್, ವಾಟ್ಸ್ಯಾಪ್, ಟೆಲಿಗ್ರಾಂ ಮುಂತಾದ ಸೋಶಿಯಲ್ ಜಾಲತಾಣಗಳ ಮೂಲಕ ಮುಸ್ಲಿಂ ಯುವಕರನ್ನು ಐಸಿಸ್ ಸೇರುವಂತೆ ಪ್ರಚೋದನೆ ನೀಡುತ್ತಿದ್ದ. ಹಿಂಸೆ ಹಾಗೂ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಲು ಪ್ರೇರೇಪಿಸುತ್ತಿದ್ದ. ಯುವಕರಿಗೆ ಆನ್‌ಲೈನ್ ಮೀಟಿಂಗ್ ಮತ್ತು ವಿಚಾರಗೋಷ್ಠಿಗಳನ್ನು ಆಯೋಜಿಸಿ ಐಸಿಸ್ ಐಡಿಯಾಲಜಿಯನ್ನು ಯುವಕರಲ್ಲಿ ಬಿತ್ತಲು, ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ವಿಸ್ತರಿಸಲು ಸಂಚು ಹೂಡುತ್ತಿದ್ದ.
ಭಾರತೀಯ ತೈಲ ನಿಗಮದ (ಐಒಸಿ)ಯಲ್ಲಿ ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಿರಾಜುದ್ದೀನ್‌ನ್ನು 2015ರ ಡಿಸೆಂಬರ್‌ನಲ್ಲಿ ಜೈಪುರದಲ್ಲಿ ಬಂಧಿಸಲಾಗಿತ್ತು. ಎನ್ಐಎ ಅಧಿಕಾರಿಗಳು ಯುಎಪಿಎ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.
ಇದನ್ನೂ ಓದಿ: ಉಗ್ರರ ನಿಗ್ರಹಕ್ಕೆ ಕೇಂದ್ರ ದಿಟ್ಟ ಕ್ರಮ, 2 ಸಂಘಟನೆ ನಿಷೇಧ, ಹರ್ವಿಂದರ್ ಸಿಂಗ್ ಸಂಧುನನ್ನು ಉಗ್ರನೆಂದು ಘೋಷಣೆ