Site icon Vistara News

ಒಬ್ಬ ವ್ಯಕ್ತಿ, ಒಂದು ಪುಸ್ತಕದಿಂದ ಭಯೋತ್ಪಾದನೆ ಹೆಚ್ಚಾಗಿದೆ: ಸಂಸದ ಪ್ರತಾಪ್‌ ಸಿಂಹ

Pratap simha

ಮೈಸೂರು: ಆರ್‌ಎಸ್‌ಎಸ್‌- ಆಳ ಅಗಲ ಎಂದು ಸಾಹಿತಿ ದೇವನೂರು ಮಹಾದೇವ ಅವರು ಇತ್ತೀಚೆಗೆ ಬರೆದ ಕಿರು ಪುಸ್ತಕವನ್ನು ಹೊರತಂದಿದ್ದು, ಇದು ಮಹಾದೇವ ಅವರ ಕೃತಿಯಲ್ಲ ವಿಕೃತಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಕೃತಿಯ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್‌ ಸಿಂಹ, ಕಾಂಗ್ರೆಸ್‌ಗೆ ಆಳಾಗಿ ಬರೆಯುವವರಿಗೆ ಆರ್‌ಎಸ್‌ಎಸ್- ಆಳ ಅಗಲ ತಿಳಿದುಕೊಳ್ಳಲು ಸಾಧ್ಯವಿಲ್ಲ. ಈ ಕೃತಿಯನ್ನು ಒಂದು ಪಕ್ಷದ ಆಳಾಗಿ ಬರೆದಿದ್ದಾರೆ. ಕುಸುಮ ಬಾಲೆ ನಂತರ ದೇವನೂರು ಮಹಾದೇವ ಅವರಲ್ಲಿ ಒಂದಷ್ಟು ಸೃಜನಶೀಲತೆ ಉಳಿದುಕೊಂಡಿದೆ ಎಂದುಕೊಂಡಿದ್ದೆ. ಆದರೆ ಆರ್‌ಎಸ್‌ಎಸ್‌ ಆಳ ಅಗಲ ಪುಸ್ತಕ ಬರೆಯಲು ಹೋಗಿ ಅವರ ಘನತೆಯನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಚಾತುರ್ವರ್ಣ ಪದ್ಧತಿ ಬಗ್ಗೆ ಬರೆಯಲು ಹೋಗಿದ್ದಾರೆ. ಒಂದು ಧರ್ಮ, ಒಬ್ಬ ನಾಟಕ, ಒಂದು ದೇಶವನ್ನು ಆರ್‌ಎಸ್ಎಸ್‌ ಪ್ರತಿಪಾದಿಸುತ್ತದೆ ಎಂದು ಬರೆದಿದ್ದಾರೆ. ಆದರೆ ಒಬ್ಬ ವ್ಯಕ್ತಿ, ಒಂದು ಪುಸ್ತಕ, ಒಂದು ದೇಶದಿಂದ ಇಡೀ ಪ್ರಪಂಚದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. ಆ ಧರ್ಮ ಯಾವುದು ಎಂದು ನಿಮಗೆ ಗೊತ್ತಿಲ್ಲವೇ? ಚಾತುರ್ವರ್ಣ ಪದ್ಧತಿ ಕೇವಲ ಹಿಂದೂ ಧರ್ಮದಲ್ಲಿ ಇಲ್ಲ. ಕ್ರಿಶ್ಚಿಯನ್ನರಲ್ಲಿ ಕ್ಯಾಥೋಲಿಕ್, ಪ್ರೋಟೆಸ್ಟೆಂಟ್, ನಿಗ್ರೋ ಮುಂತಾದ ಪಂಥಗಳಿವೆ. ಇಸ್ಲಾಂನಲ್ಲಿ ಸುನ್ನಿ, ಸಿಯಾ, ಪಠಾಣ್, ಮೊಘಲ್ ಪಂಥಗಳಿವೆ. ಚಾತುರ್ವರ್ಣ ವಿರೋಧಿಸುವುದಾದರೆ ಎಲ್ಲ ಧರ್ಮಗಳ ಬಗ್ಗೆಯೂ ಮಾತನಾಡಿ ಎಂದರು.

ಅಂಬಾನಿ, ಅದಾನಿ ಆದಾಯ ಜಾಸ್ತಿಯಾಗಿದೆ, ಬ್ಯಾಂಕ್‌ಗಳ ಸಾಲ ರೈಟ್ ಆಫ್ ಆಗಿದೆ ಎಂದು ಏನೇನೋ ಬರೆದಿದ್ದಾರೆ ಎಂದ ಪ್ರತಾಪ್‌ ಸಿಂಹ, ಇದೆಲ್ಲವನ್ನೂ ಗಮನಿಸಿದರೆ ಒಬ್ಬ ಕಾಂಗ್ರೆಸ್‌ನ ಕಾರ್ಯಕರ್ತ ರಾಹುಲ್ ಗಾಂಧಿ ಭಾಷಣದಿಂದ ಪ್ರೇರಿತನಾಗಿ ಇದನ್ನು ಬರೆದಿದ್ದಾನೆ. ಸಿದ್ದರಾಮಯ್ಯ ಅವರು ದೇವನೂರು ಮಹದೇವ ಜತೆ ಮಾತನಾಡಿ, ಅವರ ಹೆಸರನ್ನು ಹಾಕಿಸಿದ್ದಾರೆ ಎನ್ನುವಂತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ರಾಜಕೀಯದಿಂದ ಆರ್‌ಎಸ್‌ಎಸ್‌ ದೂರ, ಸಂಘಕ್ಕೆ ರಾಜಕೀಯ ಹೊಂದುವುದಿಲ್ಲ: ಡಾ. ಮೋಹನ್‌ ಭಾಗವತ್‌

Exit mobile version