Site icon Vistara News

ವಿಸ್ತಾರ ಸಂಪಾದಕೀಯ: ಕರ್ನಾಟಕದ ಜೈಲುಗಳಾಗುತ್ತಿವೆ ಉಗ್ರರ ತರಬೇತಿ ಕೇಂದ್ರ

Terrorist

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಉಗ್ರ ಶಾರೀಕ್‌ಗೆ ಬೆಳಗಾವಿ ಜೈಲಿನಲ್ಲಿ ತರಬೇತಿ ನೀಡಿದವನು ಅಂತಾರಾಷ್ಟ್ರೀಯ ಕುಖ್ಯಾತ ಲಷ್ಕರೆ ತಯ್ಬಾದ ಉಗ್ರನಾಗಿದ್ದ ಎಂಬುದು ಬಹಿರಂಗವಾಗಿದೆ. ಮಹಾರಾಷ್ಟ್ರ ಪೊಲೀಸರ ತನಿಖೆ ವೇಳೆ ಈ ಮಾಹಿತಿಗಳು ಹೊರಬಂದಿದೆ. ಲಷ್ಕರೆ ತಯ್ಬಾದ ಸದಸ್ಯ ಉಗ್ರ ಅಪ್ಸರ್ ಪಾಷ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ವೇಳೆ ಇಸ್ಲಾಮಿಕ್‌ ಸ್ಟೇಟ್‌ ಮೂಲಭೂತವಾದದ ಬೋಧನೆ ಮಾಡುತ್ತಿದ್ದ. ಜೈಲಿನಲ್ಲೇ ಮೂಲಭೂತವಾದ ಬೋಧನೆ ಹಾಗೂ ಸ್ಫೋಟಕ ತಯಾರಿಸುವ ಬಗ್ಗೆ ತರಬೇತಿ ನೀಡುತ್ತಿದ್ದ. ಹಾಗೆಯೇ ಬೆಳಗಾವಿ ಜೈಲಿನಲ್ಲಿ ಉಗ್ರ ಶಾರೀಕ್‌ಗೆ ತರಬೇತಿ ನೀಡಿದ್ದ. ಇನ್ನೊಂದು ಇಂಥದೇ ಪ್ರಕರಣ ಇತ್ತೀಚೆಗೆ ಬಯಲಾದುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಬೆಂಗಳೂರಿನಲ್ಲಿ ಭಾರಿ ಸ್ಫೋಟಗಳನ್ನು ನಡೆಸಲು ಸಂಚು ಹೂಡಿ ಕೆಲದಿನಗಳ ಹಿಂದೆ ಐವರು ಉಗ್ರರು ಸಿಕ್ಕಿಬಿದ್ದಿದ್ದರು. ಇವರ ಧರ್ಮದ್ವೇಷದ ಮೊದಲ ಟ್ರೇನಿಂಗ್‌ ನಡೆದಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಂಬುದು ಗೊತ್ತಾಗಿದೆ. 2008ರಲ್ಲಿ ನಡೆದ ಬೆಂಗಳೂರು ಸರಣಿ ಬಾಂಬ್‌ ಸ್ಫೋಟದ ರೂವಾರಿ ಟಿ.ನಝೀರ್‌ ಪ್ರಸಕ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಇವನೇ ಈ ಎಲ್ಲ ಕೃತ್ಯಗಳ ಹಿಂದಿರುವ ಮಾಸ್ಟರ್‌ ಮೈಂಡ್‌. ಇವರು ಈ ಐವರನ್ನು ಟ್ರೈನ್‌ ಮಾಡಿದ್ದ. ಬಾಂಬ್‌ ತಯಾರಿ ಹೇಗೆ, ಪರಿಕರಗಳನ್ನು ಎಲ್ಲಿಂದ ತರಬೇಕು, ಧರ್ಮದ್ವೇಷದ ಉದ್ದೇಶವೇನು? ಅದರಿಂದ ಪರಲೋಕದಲ್ಲಿ ಸಿಗುವ ಸವಲತ್ತುಗಳೇನು ಎಂದೆಲ್ಲ ತಿಳಿಸುತ್ತಿದ್ದ ಎಂಬುದು ಗೊತ್ತಾಗಿದೆ.

ಈ ಎರಡು ಪ್ರಕರಣಗಳು ಇಲ್ಲಿರುವ ಅಪಾಯದ ಬಗ್ಗೆ ನಮ್ಮ ಕಣ್ಣು ತೆರೆಸಬೇಕಿದೆ. ಕರ್ನಾಟಕದ ಜೈಲುಗಳು ಉಗ್ರರ ತರಬೇತಿ ಕೇಂದ್ರಗಳಾಗುತ್ತಿವೆಯೇ ಎಂಬ ಪ್ರಶ್ನೆಯನ್ನು ನಮ್ಮ ಪೊಲೀಸರು, ಜೈಲು ಅಧಿಕಾರಿಗಳು ಕೇಳಿಕೊಳ್ಳಬೇಕಿದೆ. ಜೈಲುಗಳು ಪಾತಕಿಗಳಿಗೆ ಸ್ವರ್ಗವಾಗುತ್ತಿವೆ ಎಂಬ ದೂರು ಹಿಂದಿನಿಂದಲೂ ಇದೆ. ಅಲ್ಲಿ ಅವರಿಗೆ ಎಲ್ಲ ಬಗೆಯ ಸೌಕರ್ಯಗಳು ಸಿಗುತ್ತವೆ. ಅಲ್ಲೇ ಡೀಲ್ ನಡೆಯುತ್ತವೆ. ಡಾನ್‌ಗಳು ಅಲ್ಲಿ ಕುಳಿತೇ ಹೊರಗಿರುವ ತಮ್ಮ ʼಹುಡುಗʼರಿಗೆ ಸುಪಾರಿ ನೀಡುತ್ತಾರೆ. ಮೊಬೈಲ್ ಜಾಮರ್ ಹಾಕಲಾಗಿದ್ದರೂ ಇವರು ಹೇಗೋ ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಗಾಂಜಾ, ಡ್ರಗ್ಸ್ ಕೂಡ ಸರಬರಾಜಾಗುತ್ತಿವೆ. ಜೈಲು ಅಧಿಕಾರಿಗಳು ಇದರಲ್ಲಿ ಶಾಮೀಲಾಗದೇ ಈ ದಂಧೆಗಳು ನಡೆಯುವುದು ಅಸಂಭವ. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಜೈಲುಗಳನ್ನೇ ಪಾತಕಿಗಳು ಉಗ್ರ ತರಬೇತಿ ಕೇಂದ್ರಗಳನ್ನಾಗಿ ಪರಿವರ್ತಿಸಿಕೊಂಡು ಬಿಟ್ಟಿದ್ದಾರೆ.

ಇದು ಇನ್ನಷ್ಟು ಅಪಾಯಕಾರಿಯಾಗಿದೆ. ವಿಶೇಷವಾಗಿ ಇಸ್ಲಾಮಿಕ್‌ ಉಗ್ರರ ಬಗ್ಗೆ ಹೆಚ್ಚಿನ ನಿಗಾ ಇಡುವ ಅಗತ್ಯ ಇದರಿಂದ ಕಂಡುಬರುತ್ತಿದೆ. ವೈಯಕ್ತಿಕ ಪ್ರಕರಣಗಳಲ್ಲಿ ಜೈಲಿನೊಳಗೆ ಇರುವವರು ಸಾರ್ವಜನಿಕವಾಗಿ ಹಾನಿ ಉಂಟುಮಾಡುವ ಸಾಧ್ಯತೆಗಳಿಲ್ಲ. ಆದರೆ ಧರ್ಮಾಂಧರು, ಮತಾಂಧರು, ತಮ್ಮಂತೆಯೇ ಇರುವ ನೂರಾರು ಜನರನ್ನು ತಮ್ಮ ಬೋಧನೆಗಳಿಂದಲೇ ಸೃಷ್ಟಿಸಿ, ಭಸ್ಮಾಸುರರಂತೆ ಅವರನ್ನು ಹೊರಗೆ ಕಳಿಸಬಲ್ಲರು. ಸಣ್ಣಪುಟ್ಟ ಪ್ರಕರಣಗಳಲ್ಲಿ ಜೈಲಿನೊಳಗೆ ಹೋದ ಕೇಡಿಗಳು ಇವರಿಂದ ದುರ್ಬೋಧನೆ ಹೊಂದಿ ಮಹಾಪಾತಕಿಗಳಾಗುವ ದೀಕ್ಷೆ ಪಡೆದುಕೊಂಡು ಹೊರಗೆ ಬರುತ್ತಿರುವುದು ಆತಂಕಕರ. ಈ ಬೆಳವಣಿಗೆಯನ್ನು ಈಗಲೇ ಚಿವುಟದಿದ್ದರೆ ಅನಾಹುತ ಕಾದಿದೆ. ಇಲ್ಲಿ ಇಂತಹವರನ್ನು ಗುರುತಿಸಿ ಏಕಾಂತವಾಸದಲ್ಲಿಡುವುದು ಅಗತ್ಯ. ಜತೆಗೆ ನಿಗಾ ಇಡಲು ತಪ್ಪಿದ ಜೈಲು ಅಧಿಕಾರಿಗಳ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು. ಭಯೋತ್ಪಾದನೆ ಸಂಚುಗಳು ಯಾವ ಹಂತದಲ್ಲೂ ಮೊಳಕೆಯೊಡೆಯದಂತೆ ಕಟ್ಟೆಚ್ಚರ ವಹಿಸಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಜಗದಗಲಕ್ಕೂ ಹಬ್ಬಿತು ನಮ್ಮ ಹೆಮ್ಮೆಯ ಇಸ್ರೊ ಸಾಧನೆಯ ಕೀರ್ತಿ

ಜೈಲುಗಳು ಸುಧಾರಣೆಯ ಜಾಗಗಳು ಕೂಡ ಆಗಬೇಕು ಎಂಬ ಪರಿಕಲ್ಪನೆ ಇದೆ. ಪರಪ್ಪನ ಅಗ್ರಹಾರ ಕೆಲವು ವರ್ಷಗಳ ಹಿಂದೆ ಅಕ್ರಮಗಳ ಕೇಂದ್ರವಾಗಿತ್ತು. ಇದೀಗ ಸಾಕಷ್ಟು ಸುಧಾರಣೆ ಕ್ರಮಗಳು ಆಗಿವೆ. ಮೊಬೈಲ್‌, ಗಾಂಜಾ ಮುಂತಾದವು ಒಳಗೆ ಹೋಗದಂತೆ ಕಣ್ಗಾವಲು ಇಡಲಾಗುತ್ತಿದೆ. ಆದರೂ ಅಧಿಕಾರಿಗಳು ಕಣ್ಣು ತಪ್ಪಿಸಿ ಇವು ಒಳನುಸುಳುತ್ತವೆ. ಇವುಗಳನ್ನಾದರೂ ತಡೆಹಿಡಿಯಬಹುದು. ಆದರೆ ದುರ್ಬೋಧನೆಯ ಮೂಲಕ ಬುದ್ಧಿಯನ್ನೇ ಹಾಳು ಮಾಡುವವರು, ಉಗ್ರಗಾಮಿ ಕೃತ್ಯಕ್ಕೆ ಇತರರಿಗೆ ಮಾನಸಿಕವಾಗಿ ಸಿದ್ಧತೆ ನೀಡುವವರನ್ನು ಗುರುತಿಸುವುದು ಸುಲಭವಲ್ಲ. ಇದಕ್ಕೆ ಈ ಉಗ್ರರ ಮಾನಸಿಕತೆಯ ಬಗ್ಗೆ ತಿಳಿದ, ಅಧ್ಯಯನ ಮಾಡಿದ ಪೊಲೀಸ್‌ ಅಧಿಕಾರಿಗಳು ಮುಂದಾಗಬೇಕು. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ವಿಶೇಷ ಓರಿಯೆಂಟೇಶನ್‌ ಅಗತ್ಯವಿದೆ. ಇಲ್ಲವಾದರೆ ಭವಿಷ್ಯದ ಉಗ್ರರು ಇಲ್ಲೇ ಸೃಷ್ಟಿಯಾಗಬಹುದು.

Exit mobile version