Site icon Vistara News

Power Point with HPK : ಭಯೋತ್ಪಾದಕರಿಗೆ ಇದು ನಮ್ಮ ಸರ್ಕಾರ ಎಂಬ ಭಾವನೆ ಬಂದಿದೆ: ಆರಗ ಜ್ಞಾನೇಂದ್ರ

Araga Gyanendra in Power Point with HPK

ಬೆಂಗಳೂರು: ಉಗ್ರ ಚಟುವಟಿಕೆಯಲ್ಲಿ (Terrorist activity) ತೊಡಗಿಕೊಂಡಿದ್ದ 5 ಮಂದಿ ಶಂಕಿತ ಭಯೋತ್ಪಾದಕರನ್ನು ಈಚೆಗೆ ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ. ಇವರೆಲ್ಲರೂ ನಮ್ಮ ಬೆಂಗಳೂರಿನಲ್ಲಿಯೇ ಇರುವುದು ಭಯದ ಸಂಗತಿಯಾಗಿದೆ. ಆದರೆ, ಈ ಕೃತ್ಯಗಳು ನಡೆಯುತ್ತಿರುವುದು ಏಕೆ? ಭಯೋತ್ಪಾದಕರಿಗೆ, ಅಪರಾಧಿಗಳಿಗೆ ಈಗ ನಮ್ಮ ಸರ್ಕಾರ ಬಂದಿದೆ ಎಂಬ ಮನೋಭಾವ ಬಂದಿದೆ. ಇದೇ ಈಗ ಅಪರಾಧ ಕೃತ್ಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Former Home Minister Araga Jnanendra) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ನಿಜವಾಗಿಯೂ ನಾಡಿನ ಪ್ರಜೆಗಳಿಗೆ ನಮ್ಮ ಸರ್ಕಾರ ಬಂದಿದೆ ಎಂದು ಅನ್ನಿಸಬೇಕಿತ್ತು. ಆದರೆ, ಅಪರಾಧಿ ಜಗತ್ತಿನ ವ್ಯಕ್ತಿಗಳಿಗೆ ನಮ್ಮ ಸರ್ಕಾರ ಬಂದಿದೆ. ಏನು ಮಾಡಿದರೂ ನಡೆಯುತ್ತದೆ ಎಂಬುದು ಬಂದುಬಿಟ್ಟಿದೆ. ಕಾಂಗ್ರೆಸ್ಸಿನವರ ತುಷ್ಟೀಕರಣ ನೀತಿಯು ಹೆಚ್ಚಾಗಿದೆ. ಒಂದು ಸಮುದಾಯದವರನ್ನು ಅವರು ಓಲೈಸುವ ನೀತಿಯಿಂದ ಅಪರಾಧ ಪ್ರಕರಣಗಳು ಹೆಚ್ಚಿವೆ. ನಮ್ಮ ಸರ್ಕಾರ ಇದ್ದಾಗ ಯಾವುದೇ ಜಾತಿ, ಧರ್ಮವನ್ನು ನೋಡದೇ ಕ್ರಮ ತೆಗೆದುಕೊಳ್ಳುತ್ತಿದ್ದೆವು. ಕಾನೂನು ಕೈಗೆತ್ತಿಕೊಂಡವರಿಗೆ ಶಿಕ್ಷೆ ಕೊಡುತ್ತಿದ್ದೆವು ಎಂದು ಹೇಳಿದರು.

ಹಿಂದು ವಿರೋಧಿಯಾಗಿರಿ ಎಂಬ ಸಂದೇಶ ಕೊಟ್ಟರು

ಈ ಕಾಂಗ್ರೆಸ್‌ ಸರ್ಕಾರ ಬಂದ ಕೂಡಲೇ ಮಾಡಿದ ಆದೇಶ ಏನು? ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪೊಲೀಸರ ಸಭೆ ಕರೆದು ಕೇಸರೀಕರಣ ಮಾಡಲು ಹೋಗಬೇಡಿ ಎಂದು ಎಚ್ಚರಿಕೆ ನೀಡಿದರು. ಅಂದರೆ ಹಿಂದು ವಿರೋಧಿಯಾಗಿರಿ ಎಂಬ ಸಂದೇಶವನ್ನು ರವಾನೆ ಮಾಡಿದರು. ಈ ಚಿತಾವಣೆಯೇ ಇಷ್ಟೆಲ್ಲ ಅವಘಡಗಳಿಗೆ ಕಾರಣ. ಯಾವ ಧರ್ಮ, ಜಾತಿ, ಪಕ್ಷ ಆಗಿದ್ದರೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ. ಅಪರಾಧಿ ಕೃತ್ಯಗಳಿಗೆ ಕಡಿವಾಣ ಹಾಕಿ ಎಂದು ಹೇಳುತ್ತಿದ್ದೆವು. ಆದರೆ, ಇವರು ನಡೆದುಕೊಂಡ ರೀತಿ ಏನು? ಎಂದು ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದರು.

ಆರಗ ಜ್ಞಾನೇಂದ್ರ ಅವರ ನೇರ ಸಂದರ್ಶನದ ಪೂರ್ಣ ಭಾಗ ಇಲ್ಲಿದೆ

ಇದನ್ನೂ ಓದಿ: CT Ravi : ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಜವಾಬ್ದಾರಿ‌, ಕೇಳಿ ಪಡೆಯಲ್ಲ ಎಂದ ಸಿ.ಟಿ. ರವಿ; ದೆಹಲಿಗೆ ಬುಲಾವ್?

ನಮ್ಮ ಸರ್ಕಾರ ಇದ್ದಾಗ ಮೈಸೂರು ಅತ್ಯಾಚಾರ, ಹಿಜಾಬ್‌, ಆಳಂದ, ಹುಬ್ಬಳ್ಳಿ ಸೇರಿದಂತೆ ಅನೇಕ ಪ್ರಕರಣಗಳು ಒಮ್ಮೆಲೆಗೆ ಆದರೂ ನಾವು ನಿಯಂತ್ರಣವನ್ನು ಮಾಡಿದ್ದಲ್ಲದೆ, 24, 48 ಗಂಟೆ ಸಮಯದಲ್ಲಿ ನಾವು ಪ್ರಕರಣಗಳನ್ನು ಭೇದಿಸಿದ್ದೆವು. ಆದರೆ, ಈ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಕೇವಲ ಎರಡೇ ತಿಂಗಳಲ್ಲಿ ಅನೇಕ ಕೊಲೆ, ಸುಲಿಗೆ ಪ್ರಕರಣಗಳು, ಗಲಭೆಗಳು ಆಗಿವೆ. ಜತೆಗೆ ಉಡುಪಿಯಲ್ಲಿ ಹೆಣ್ಣು ಮಕ್ಕಳ ವಿಡಿಯೊ ಪ್ರಕರಣದಲ್ಲಿ ಈ ರಾಜ್ಯ ಸರ್ಕಾರ ನಡೆದುಕೊಂಡ ರೀತಿ ಸರಿಯಲ್ಲ. ಇವರು ಎಫ್‌ಐಆರ್‌ ಹಾಕಲೇ ತಯಾರಿಲ್ಲ ಎಂದು ಅಭಿಪ್ರಾಯಪಟ್ಟರು.

Exit mobile version