Site icon Vistara News

Tesla Car: ಬೆಂಗಳೂರು ರಸ್ತೆಯಲ್ಲಿ ಕಾಣಿಸಿಕೊಂಡ ಟೆಸ್ಲಾ ಕಾರು; ಜಾಲತಾಣಗಳಲ್ಲಿ ಚರ್ಚೆ ಜೋರು

Tesla Car In Bengaluru

Tesla car spotted on Bengaluru roads, sparks buzz on social media

ಬೆಂಗಳೂರು: ಭಾರತದಲ್ಲಿ ಟೆಸ್ಲಾ ಕಾರು ಉತ್ಪಾದನೆ ಘಟಕ (Tesla Car Plant In India) ಸ್ಥಾಪನೆಗೆ ಕಾಲ ಸನ್ನಿಹಿತವಾಗಿದೆ ಎಂದು ಏಳಲಾಗುತ್ತಿದೆ. ಗುಜರಾತ್‌ನಲ್ಲಿ ಮೊದಲ ಟೆಸ್ಲಾ ಕಾರು ಉತ್ಪಾದನೆ ಘಟಕ ಸ್ಥಾಪಿಸಲಾಗುತ್ತದೆ, ಈ ಕುರಿತು ಅಧಿಕೃತ ಘೋಷಣೆ ಒಂದೇ ಬಾಕಿ ಎಂದು ವರದಿಗಳು ತಿಳಿಸಿವೆ. ಇದರ ಬೆನ್ನಲ್ಲೇ, ಅಚ್ಚರಿ ಎಂಬಂತೆ ಬೆಂಗಳೂರಿನ ರಸ್ತೆಗಳಲ್ಲಿ ಟೆಸ್ಲಾ ಕಾರು (Tesla Car) ಓಡಾಡಿರುವ ವಿಡಿಯೊ, ಫೋಟೊಗಳು ವೈರಲ್‌ (Viral Video) ಆಗಿದ್ದು, ಇದರ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ.

ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣದ ಬಳಿ ಟೆಸ್ಲಾ ಕಾರು (Tesla Model X SUV) ಕಾಣಿಸಿಕೊಂಡಿದೆ. ಇದರ ಎರಡು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಮಿನ್‌ಸ್ಕ್‌ ರಸ್ತೆ ಮಾರ್ಗವಾಗಿ ಟೆಸ್ಲಾ ಕಾರು ಚಲಿಸಿದೆ. ಕರ್ನಾಟಕಕ್ಕೆ ಇನ್ನೂ ಟೆಸ್ಲಾ ಕಾರುಗಳು ಲಗ್ಗೆ ಇಟ್ಟಿರದ ಕಾರಣ ಈ ಕಾರು ಓಡಾಡಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಅಪ್‌ಲೋಡ್‌ ಮಾಡುತ್ತಲೇ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕಾರಿನ ಮೇಲೆ ಬೃಹತ್‌ ಮರ ಬಿದ್ದರೂ ನಜ್ಜುಗುಜ್ಜಾಗದ ಟೆಸ್ಲಾ ಕಾರು, ಚಾಲಕ ಪಾರು!

“ಇದು ದುಬೈನಲ್ಲಿ ನೋಂದಣಿಯಾದ ಕಾರು. ದುಬೈನಿಂದ ಭಾರತಕ್ಕೆ ಕಾರು ತಂದಿರಬಹುದು” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಟೆಸ್ಲಾ ಕಾರನ್ನು ಟೆಸ್ಟ್‌ ಡ್ರೈವ್‌ಗೆ ಬಿಡಲಾಗಿದೆ” ಎಂದು ಮತ್ತೊಬ್ಬರು ಊಹಿಸಿದ್ದಾರೆ. “ಇದು ದುಬೈನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನೋಂದಣಿ ಮಾಡಿಕೊಂಡಂತೆ ಕಾಣುತ್ತಿದೆ” ಎಂದು ಇನ್ನೊಬ್ಬರು ಹೇಳಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಫೋಟೊಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಟೆಸ್ಲಾ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಟೆಸ್ಲಾ ಕಾರೇ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಕಾರಣ ಚರ್ಚೆಗಳು ನಡೆದಿವೆ.

ಗುಜರಾತ್‌ನಲ್ಲಿ ಕಾರು ಉತ್ಪಾದನೆ ಘಟಕ?

ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆಗೆ ಜಾಗತಿಕವಾಗಿ ಖ್ಯಾತಿ ಗಳಿಸಿರುವ ಟೆಸ್ಲಾ ಕಂಪನಿಯು ಗುಜರಾತ್‌ನಲ್ಲಿ ತನ್ನ ಮೊದಲ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ತಿಳಿದುಬಂದಿದೆ. ಶೀಘ್ರದಲ್ಲಿಯೇ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ. “ಗುಜರಾತ್‌ನಲ್ಲಿ ಕಾರು ಉತ್ಪಾದನಾ ಘಟಕ ಸ್ಥಾಪಿಸಲು ಟೆಸ್ಕಾ ಕಂಪನಿಯ ಅಧಿಕಾರಿಗಳು ಸುಸಜ್ಜಿತವಾದ ಜಾಗವನ್ನು ಹುಡುಕಿದ್ದಾರೆ. 2024ರ ಜನವರಿಯಲ್ಲಿ ನಡೆಯಲಿರುವ ಗುಜರಾತ್‌ ವೈಬ್ರೆಂಟ್‌ ಶೃಂಗಸಭೆಯಲ್ಲಿ ಟೆಸ್ಲಾ ಉತ್ಪಾದನಾ ಘಟಕ ಸ್ಥಾಪನೆ ಕುರಿತು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವರು ಕೂಡ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಅಹಮದಾಬಾದ್‌ ಮಿರರ್‌ ವರದಿ ಮಾಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version