Site icon Vistara News

Textbook Controversy | ಸರ್ಕಾರದಿಂದ ಮತ್ತೊಂದು U-Turn: ತೆಗೆದಿದ್ದ ಪಠ್ಯ ಮತ್ತೆ ಬೋಧನೆಗೆ ಆದೇಶ

rohith chakratirtha

ಬೆಂಗಳೂರು: ಅನೇಕ ಸಮಯ ವಿವಾದಕ್ಕೆ ಒಳಗಾಗಿ ಇನ್ನೇನು ತಣ್ಣಗಾಯಿತು ಎನ್ನಲಾಗುತ್ತಿದ್ದ ಪಠ್ಯಪುಸ್ತಕ ವಿವಾದಕ್ಕೆ ಮತ್ತೆ ರಾಜ್ಯ ಸರ್ಕಾರ ಜೀವ ನೀಡಿದ್ದು, ಈ ವರ್ಷ ಬೋಧನೆಗೆ ಬೇಡವೆಂದು ಕೈಬಿಟ್ಟಿದ್ದ ಪಠ್ಯವನ್ನು ಬೋಧಿಸುವಂತೆ ಹೊಸ ತಿದ್ದೋಲೆ ಹೊರಡಿಸಿದೆ.

ಲೇಖಕ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿರೋಧಿಸಿದ್ದ ಅನೇಕ ಲೇಖಕರು ಹಾಗೂ ಸಾಹಿತಿಗಳು, ತಮ್ಮ ಬರವಣಿಗೆಯನ್ನು ಪಠ್ಯದಲ್ಲಿ ಅಳವಡಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆಯುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಈ ಕುರಿತು ಕರ್ನಾಟಕ ಪಠ್ಯಪುಸ್ತಕ ಸಂಘ ಸೆಪ್ಟೆಂಬರ್‌ 23ರಂದು ಸುತ್ತೋಲೆ ಹೊರಡಿಸಿತ್ತು. ಅದರಂತೆ, ಹತ್ತನೇ ತರಗತಿಯ ಪ್ರಥಮ ಭಾಷೆಯಲ್ಲಿದ್ದ ದೇವನೂರು ಮಹದೇವ ಅವರ ʼಎದೆಗೆ ಬಿದ್ದ ಅಕ್ಷರʼ(ಗದ್ಯ), ಜಿ. ರಾಮಕೃಷ್ಣ ಅವರ ʼಭಗತ್‌ ಸಿಂಗ್‌ʼ(ಪೂರಕ ಪಠ್ಯ), ತೃತೀಯ ಭಾಷೆಯ ಪಠ್ಯದಲ್ಲಿದ್ದ ಈರಪ್ಪ ಎಂ. ಕಂಬಳಿ ಅವರ ʼಹೀಗೊಂದು ಟಾಪ್‌ ಪ್ರಯಾಣʼ(ಪೂರಕ ಗದ್ಯ), ಸತೀಶ್‌ ಕುಲಕರ್ಣಿ ಅವರ ʼಕಟ್ಟತೇವ ನಾವುʼ(ಪದ್ಯ), ದ್ವಿತೀಯ ಭಾಷೆಯಲ್ಲಿದ್ದ ಸುಕನ್ಯ ಮಾರುತಿ ಅವರ ʼಏಣಿʼ(ಪದ್ಯ), ಒಂಭತ್ತನೇ ತರಗತಿಯ ತೃತೀಯ ಭಾಷೆ ಪಠ್ಯದಲ್ಲಿದ್ದ ರೂಪ ಹಾಸನ ಅವರ ʼಅಮ್ಮನಾಗುವುದೆಂದರೆʼ (ಪೂರಕ ಪದ್ಯ), ಆರನೇ ತರಗತಿ ಪ್ರಥಮ ಭಾಷೆ ಪಠ್ಯದಲ್ಲಿದ್ದ ದೊಡ್ಡಹುಲ್ಲೂರು ರುಕ್ಕೋಜಿರಾವ್‌ ಅವರ ʼಡಾ. ರಾಜಕುಮಾರ್‌ʼ (ಗದ್ಯ)ವನ್ನು ಹಿಂಪಡೆಯಲಾಗಿತ್ತು.

ಇದೀಗ ಶಿಕ್ಷಣ ಇಲಾಖೆ ಮತ್ತೊಂದು ಆದೇಶವನ್ನು ತಿದ್ದೋಲೆಯನ್ನು, ಸೆಪ್ಟೆಂಬರ್‌ 23ರ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದೆ. ಈ ವರ್ಷ ಬೋಧನೆ ಹಾಗೂ ಮೌಲ್ಯಮಾಪನಕ್ಕೆ ಈ ಎಲ್ಲ ಪಠ್ಯಗಳನ್ನೂ ಪರಿಗಣಿಸಬೇಕು ಎಂದು ತಿಳಿಸಿದೆ. ಈಗಾಗಲೆ ಪಠ್ಯದಲ್ಲಿ ಸೇರಿಸಿರುವ ಬರವಣಿಗೆಯನ್ನು ತೆಗೆಯುವುದು ಸರಿಯಲ್ಲ ಎಂದು ಅನೇಕ ಸಾರ್ವಜನಿಕರು, ಪೋಷಕರು ಹಾಗೂ ಶಿಕ್ಷಕರಿಂದ ಒತ್ತಾಯ ಕೇಳಿಬಂದಿದ್ದರಿಂದ ಹೀಗೆ ಮಾಡುತ್ತಿರುವುದಾಗಿ ಶಿಕ್ಷಣ ಇಲಾಖೆ ಸ್ಪಷ್ಟೀಕರಣ ನೀಡಿದೆ.

ತಮ್ಮ ಪಠ್ಯವನ್ನು ಹಿಂಪಡೆಯುವುದಾಗಿ ಈಗಾಗಲೆ ಪತ್ರ ಬರೆದಿದ್ದರೂ ಸರ್ಕಾರ ಪಾಠ ಮಾಡಲು ಮುಂದಾಗಿರುವುದಕ್ಕೆ ಸಾಹಿತಿಗಳು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಕ್ರಮದ ವಿರುದ್ಧ ಕಾನೂನು ಕ್ರಮಕ್ಕೂ ಮುಂದಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅಷ್ಟೆ ಅಲ್ಲದೆ, ಮತ್ತೊಂದು ಸುತ್ತಿನ ಸಾರ್ವಜನಿಕ ವಾಗ್ವಾದಗಳಿಗೂ ಇದು ಕಾರಣವಾಗುವ ಸಾಧ್ಯತೆಯಿದೆ.

ಸರ್ಕಾರದ ಕ್ರಮಕ್ಕೆ ಚಕ್ರತೀರ್ಥ ಬೇಸರ
ಪಠ್ಯವನ್ನು ಬೋಧನೆಯಿಂದ ಹಿಂಪಡೆದಿದ್ದನ್ನು ಮತ್ತೆ ಬದಲಾಯಿಸುವ ಸರ್ಕಾರದ ನಿರ್ಧಾರಕ್ಕೆ ರೋಹಿತ್‌ ಚಕ್ರತೀರ್ಥ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ತಮ್ಮ ಫೇಶ್‌ಬುಕ್‌ನಲ್ಲಿ ಬರೆದುಕೊಂಡಿರುವ ಚಕ್ರತೀರ್ಥ, “ಪ್ರಸ್ತುತ ಸರಕಾರಕ್ಕೆ ಯೂಟರ್ನ್ ಸರಕಾರ ಎಂಬ ಹೆಸರು ಬಂದು ನಿಂತಿದೆ. ಆದೇಶಗಳನ್ನು ಮಾಡುವುದು, ಮತ್ತೆ ವಾಪಸು ತೆಗೆದುಕೊಳ್ಳುವುದು ಒಂದು ಚಾಳಿ ಆಗಿಬಿಟ್ಟಿದೆ. ಮೊನ್ನೆ ಮೊನ್ನೆ ಎಲ್ಲ ಟ್ರಸ್ಟ್ ಗಳ ಪದಾಧಿಕಾರಿಗಳನ್ನು ಬದಲಾಯಿಸಿ ಆದೇಶ ಹೊರಡಿಸಿದ ಸರಕಾರದ ಒಂದೇ ದಿನದಲ್ಲಿ ಅದನ್ನು ವಾಪಸು ಪಡೆದು ಇದೀಗ ತಿಜೋರಿಯಲ್ಲಿಟ್ಟು ಬೀಗಹಾಕಿ ಕೂತಿದೆ. ಇಂಥ ಆದೇಶ-ವಾಪಸು-ಮರು ಆದೇಶಗಳ ಹೊಸ ಉದಾಹರಣೆ ಇಲ್ಲಿದೆ.”

“ಪಠ್ಯಪುಸ್ತಕಗಳು ಪ್ರಕಟವಾಗಿ ಮಕ್ಕಳ ಕೈಗೆ ಸೇರಿದ ಮೇಲೆ ಒಂದಷ್ಟು ಸಾಹಿತಿಗಳು ‘ನಮ್ಮ ಬರಹ ಇಲ್ಲಿರಬಾರದು’ ಎಂದು ವರಾತ ಎಬ್ಬಿಸಿದರು (ವರಾತ ತೆಗೆದ ಬಹುತೇಕರ ಬರಹಗಳು ಪಠ್ಯಗಳಲ್ಲಿ ಇರಲೇ ಇಲ್ಲ, ಆ ಮಾತು ಬೇರೆ). ಹೀಗೆ ವರಾತ ಎತ್ತಿದ ಸಾಹಿತಿಗಳ ಕಾಲುಗಳಿಗೆ ಮಂಡಿಯೂರಿ ನಮಸ್ಕರಿಸಿದ ಸರಕಾರ ಎರಡೆರಡು ಸಲ ‘ದಯವಿಟ್ಟು ಒಪ್ಪಿಗೆ ಕೊಡಿ’ ಎಂದು ಪತ್ರ ಬರೆಯಿತು. ಸರಕಾರ ಅದೆಷ್ಟೇ ಗೋಗರೆದರೂ ಸಾಹಿತಿಗಳು ಒಪ್ಪದ ಹಿನ್ನೆಲೆಯಲ್ಲಿ ಅವರ (ಒಟ್ಟು ಏಳು ಜನರ) ಪಾಠಗಳನ್ನು ಕೈಬಿಡಲು ಆದೇಶ ನೀಡಿತ್ತು. ಆದರೆ ಈಗ ಸಾರ್ವಜನಿಕರು, ಪೋಷಕರು, ಶಿಕ್ಷಕರು ವಿನಂತಿಸಿರುವುದರಿಂದ ಆ ಪಾಠಗಳನ್ನು ಮತ್ತೆ ಸೇರಿಸಲು ಆದೇಶ ಕೊಟ್ಟಿದೆ!”

“ಮೊದಲನೆಯದಾಗಿ, ಪಠ್ಯಪುಸ್ತಕಗಳು ಪ್ರಕಟವಾಗಿ ಬಂದ ಮೇಲೆ ಸಾಹಿತಿಗಳು ವರಾತ ಎತ್ತುವುದೇ ಅಸಾಂವಿಧಾನಿಕ. ಯಾಕೆಂದರೆ ಅವರ ಪಾಠಗಳಾವುದನ್ನೂ ನಾವು ಹೊಸದಾಗಿ ಸೇರಿಸಿರುವುದಲ್ಲ. ಅವು ಈ ಹಿಂದಿನಿಂದ ಇದ್ದು ಮುಂದುವರೆದುಕೊಂಡು ಬಂದಿರುವಂಥವು. ಹಾಗಿರುವಾಗ ಯಾವನೋ ಸಾಹಿತಿ ಬಂದು ‘ಈಗ ಪಾಠ ತೆಗೆಯಿರಿ’ ಎಂದು ಹೂಂಕರಿಸಿದರೆ ‘ಏನೇ ಬದಲಾವಣೆ ಇದ್ದರೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ’ ಎಂದು ಮರು-ಹೂಂಕರಿಸುವ ಅವಕಾಶ ಸರಕಾರಕ್ಕೆ ಇದ್ದೇ ಇದೆ. ಇಷ್ಟಕ್ಕೂ ಸಾಹಿತಿಯೊಬ್ಬರ ಬರಹವನ್ನು ಪಠ್ಯಪುಸ್ತಕದಲ್ಲಿ ಬಳಸಿಕೊಳ್ಳಬೇಕೆಂದರೆ ಅದಕ್ಕೆ ಸಾಹಿತಿಯ ಅನುಮತಿಯ ಅಗತ್ಯವೂ ಇಲ್ಲ ಎಂದು ಕಾನೂನು ಹೇಳುತ್ತದೆ. ಸಾಹಿತಿಯ ಅನುಮತಿ, ಕಾಪಿರೈಟ್ ಏನಿದ್ದರೂ ಆತನ ಪ್ರಕಟಿತ ಪುಸ್ತಕಗಳ ವಿಷಯದಲ್ಲಿ. ಮಕ್ಕಳಿಗೆ ಭಾಷಾಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಒಂದು ಬರಹವನ್ನು ಸೇರಿಸಬೇಕು ಎಂದು ವ್ಯವಸ್ಥೆ ಬಯಸಿದರೆ ಅದಕ್ಕೆ ಮುಕ್ತ ಸ್ವಾತಂತ್ರ್ಯವಿದೆ. ಹಾಗಿರುವಾಗ ಸಾಹಿತಿಗಳಿಗೆ ‘ಪರ್ಮಿಶನ್ ಕೊಡಿ’ ಎಂದು ಮತ್ತೆ ಮತ್ತೆ ಗೋಗರೆದು ಬೇಡುವ ಅಗತ್ಯವಿತ್ತೆ? ಅವರ ಅನುಮತಿ ಸಿಗದಾಗ ಆ ಪಾಠಗಳನ್ನು ಪಠ್ಯದಿಂದ ಕೈಬಿಡುವ ಅಗತ್ಯ ಇತ್ತೆ? ಈಗ ಸಾರ್ವಜನಿಕರು ಕೇಳುತ್ತಿದ್ದಾರೆಂದು ಮತ್ತೆ ಸೇರಿಸುವ ಪ್ರಸಂಗ ತಂದುಕೊಳ್ಳಬೇಕಿತ್ತೆ?”

“‘ಸರಕಾರ ಅವರದಾದರೂ ವ್ಯವಸ್ಥೆಯೆಲ್ಲ ನಮ್ಮದೇ’ ಎಂಬ ‘ಕಾಶ್ಮೀರ್ ಫೈಲ್ಸ್’ ಸಿನೆಮದ ಮಾತು ಕರ್ನಾಟಕದ ಸದ್ಯದ ಸರಕಾರದ ಮಟ್ಟಿಗಂತೂ ಪ್ರಸ್ತುತ” ಎಂದು ರೋಹಿತ್‌ ಚಕ್ರತೀರ್ಥ ಹೇಳಿದ್ದಾರೆ.

ಇದನ್ನೂ ಓದಿ | ಡಾ. ರಾಜಕುಮಾರ್‌ ಪಾಠಕ್ಕೆ ಕತ್ತರಿ: ದೇವನೂರು ಸೇರಿ ಏಳು ಸಾಹಿತಿಗಳ ಪಠ್ಯ ಬೋಧಿಸದಂತೆ ಶಿಕ್ಷಣ ಇಲಾಖೆ ತಡೆ

Exit mobile version