Site icon Vistara News

Textbook Revision: ಹಿಜಾಬ್‌ ಓಕೆ, ಸೂಲಿಬೆಲೆ ಪಠ್ಯಕ್ಕೆ ಕತ್ತರಿ, ಟಿಪ್ಪು ಪಾಠ ಸೇರ್ಪಡೆ: ಸಾಹಿತಿಗಳ ಒತ್ತಾಯ, ಸಿದ್ದರಾಮಯ್ಯ ಏನಂದ್ರು?

writers meet cm

ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಿಗೆ ಸಂಬಂಧಿಸಿ ಬಿಜೆಪಿ ಸರ್ಕಾರದ ಅವಧಿಯ ಹಲವು ನಿರ್ಧಾರಗಳಿಗೆ ಬ್ರೇಕ್‌ ಹಾಕಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಮುಖ್ಯವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬದಲಾವಣೆ ಮಾಡಿದ ಪಠ್ಯಕ್ರಮಕ್ಕೆ ಖೊಕ್‌ ನೀಡಲು ನಿರ್ಧರಿಸಿದೆ.

ಪಠ್ಯ ಪುಸ್ತಕದಿಂದ ಬಿಜೆಪಿ ಸರ್ಕಾರ ತೆಗೆದಿದ್ದ ಟಿಪ್ಪು (Tipu sultan) ಅಧ್ಯಯನವನ್ನು ಮರಳಿ ಸೇರಿಸಲು, ಚಕ್ರವರ್ತಿ ಸೂಲಿಬೆಲೆ ಅವರ ಪಾಠವನ್ನು ಹರಿದುಹಾಕಲು ಸರ್ಕಾರ ನಿರ್ಧರಿಸಿದೆ ಎಂದು ಗೊತ್ತಾಗಿದೆ. ನಿನ್ನೆ ಸಾಹಿತಿ ಮರುಳಸಿದ್ದಪ್ಪ ನೇತೃತ್ವದಲ್ಲಿ ಹಲವಾರು ಸಾಹಿತಿಗಳು ಸಿಎಂ ಭೇಟಿ ಮಾಡಿದ್ದು, ಈ ಬಗ್ಗೆ ಆಗ್ರಹಿಸಿದ್ದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಟಿಪ್ಪು ಕುರಿತ ಅಧ್ಯಯನವನ್ನು ಸೇರಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಟಿಪ್ಪು ಜಯಂತಿಯನ್ನು ಮತ್ತೆ ಆಚರಣೆ ಮಾಡುವುದಾಗಿಯೂ ಹೇಳಿದ್ದಾರೆ. ಹಿಂದಿನ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿತ್ತು. ಟಿಪ್ಪು ಜಯಂತಿ ಮತ್ತೆ ಆಚರಣೆಗೆ ಸಿದ್ದರಾಮಯ್ಯ ಉತ್ಸಾಹ ತೋರಿದ್ದಾರೆ ಎಂದು ಸಾಹಿತಿಗಳ ನಿಯೋಗದಲ್ಲಿ ಇದ್ದವರು ಹೇಳಿದ್ದಾರೆ.

ಸೂಲಿಬೆಲೆ ಪಾಠ ಹರಿದುಹಾಕಲು ಕ್ರಮ

ಹೊಸ ಪಠ್ಯಕ್ರಮದಲ್ಲಿ ಸೇರಿಸಲಾಗಿರುವ ಚಕ್ರವರ್ತಿ ಸೂಲಿಬೆಲೆ ಅವರ ಪಾಠವನ್ನು ಹರಿದುಹಾಕುವಂತೆ ಸಾಹಿತಿಗಳು ಸಲಹೆ ನೀಡಿದ್ದು, ಅದನ್ನು ಸರ್ಕಾರ ಒಪ್ಪಿದೆ. ಸಾವರ್ಕರ್ (Savarkar) ಕುರಿತು ಸೂಲಿಬೆಲೆ ಬರೆದ ಒಂದು ಅಧ್ಯಾಯ ಸೇರಿಸಲಾಗಿತ್ತು. ಈಗಾಗಲೇ ಪಠ್ಯಪುಸ್ತಕ ವಿತರಣೆ ಆಗಿರುವುದರಿಂದ ಆ ಅಧ್ಯಾಯವನ್ನು ಪುಸ್ತಕದಲ್ಲಿ ಹರಿದು ಹಾಕಿ, ಅದನ್ನು ಬೋಧಿಸುವುದು ಬೇಡ ಎಂದು ಸಾಹಿತಿಗಳು ಸಲಹೆ ನೀಡಿದ್ದಾರೆ. ಕೈಬಿಡಲಾಗಿದ್ದ ಅಂಬೇಡ್ಕರ್ ಅಧ್ಯಾಯ ಸೇರಿಸುವಂತೆ ಸಲಹೆ ನೀಡಿದ್ದಾರೆ. ಸಾಹಿತಿಗಳ ಸಲಹೆ ಒಪ್ಪಿರುವ ಸಿದ್ದರಾಮಯ್ಯ, ಕೂಡಲೇ ಸರ್ಕಾರದಿಂದ ಆದೇಶ ಹೊರಡಿಸುವ ಭರವಸೆ ನೀಡಿದ್ದಾರೆ.

ಹಿಜಾಬ್‌ ಧಾರಣೆಗೆ ಓಕೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶುರುವಾಗಿದ್ದ ಹಿಜಾಬ್ (hijab) ಗಲಾಟೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಹಿಜಾಬ್ ಧರಿಸಿ ಶಾಲೆಗೆ ಬರಬಾರದು ಎಂಬ ಆದೇಶವನ್ನು ಹಿಂದಿನ ಸರ್ಕಾರ ಹೊರಡಿಸಿತ್ತು. ಈ ಆದೇಶವನ್ನು ರದ್ದುಪಡಿಸಿ, ಹಿಜಾಬ್‌ಗೆ ಸಮ್ಮತಿ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನಿನ್ನೆ ಸಾಹಿತಿಗಳು ಸಿಎಂ ಭೇಟಿ ಮಾಡಿದಾಗ ಈ ಬಗ್ಗೆ ಪ್ರಸ್ತಾವಿಸಿದ್ದು, ಸಿಎಂ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಕೋಮು ಗಲಭೆ ಸೃಷ್ಟಿ ಮಾಡುವ ಸಂಘಟನೆಗಳನ್ನೂ ಬ್ಯಾನ್ ಮಾಡಲು ಕ್ರಮ ಕೈಗೊಳ್ಳಿ ಎಂದು ಸಾಹಿತಿಗಳ ತಂಡ ಮನವಿ ಮಾಡಿದೆ. ಈ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೂ ಪ್ರಸ್ತಾಪವಿದ್ದು, ಭಜರಂಗದಳ ಬ್ಯಾನ್ ಬಗ್ಗೆ ಸಾಹಿತಿಗಳು ಮಾತನಾಡಿದ್ದಾರೆ ಎನ್ನಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಗೆ ಜಾರಿಗೆ ಬ್ರೇಕ್?

ಈ ಹಿಂದೆ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ (NEP) ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ವಿರೋಧದ ನಡುವೆಯೂ ಅದನ್ನು ಅಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿತ್ತು. ಈಗ ರಾಜ್ಯದಲ್ಲಿ ಜಾರಿ ಇರುವ ರಾಷ್ಟ್ರೀಯ ಶಿಕ್ಷಣ ನೀತಿಗೆ ಸರ್ಕಾರ ಬ್ರೇಕ್ ಹಾಕುವ ಸಾಧ್ಯತೆ ಇದೆ.

ಸಾಹಿತಿ ಮರುಳಸಿದ್ದಪ್ಪ ಹೇಳಿಕೆ

ಹಿಂದಿನ ಪಠ್ಯಕ್ರಮದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವಂತೆ ಸಿಎಂಗೆ ಸಲಹೆ ನೀಡಿದ್ದೇವೆ. ಈಗಾಗಲೇ ಪುಸ್ತಕ ವಿತರಣೆ ಆಗಿರುವುದರಿಂದ ವಿತ್‌ಡ್ರಾ ಮಾಡಿಕೊಳ್ಳುವುದು ಕಷ್ಟ. ಆದರೆ ಕೆಲ ವಿಚಾರಗಳನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ. ಕೆಲವನ್ನು ಸೇರ್ಪಡೆ ಮಾಡಬೇಕು. ಈ ಶೈಕ್ಷಣಿಕ ವರ್ಷದಲ್ಲಿ ಹೊಸ ಅಧ್ಯಾಯಗಳ ಬೋಧನೆ ಬೇಡ ಎಂದು ಹೇಳಿದ್ದೇವೆ. ಸೂಲಿಬೆಲೆ ಮತ್ತು ಸಾವರ್ಕರ್ ಅಧ್ಯಾಯ ಬೋಧಿಸದಂತೆ ಸಲಹೆ ಕೊಟ್ಟಿದ್ದೇವೆ ಎಂದು ಮರುಳಸಿದ್ದಪ್ಪ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ತಂಡದಲ್ಲಿ ಮರುಳಸಿದ್ದಪ್ಪ, ಎಸ್‌ಜಿ ಸಿದ್ದರಾಮಯ್ಯ, ನಿರಂಜನಾರಾಧ್ಯ, ಬಂಜಗೆರೆ ಜಯಪ್ರಕಾಶ್‌ ಮತ್ತಿತರರು ಇದ್ದರು.

ಇದನ್ನೂ ಓದಿ: Textbook Revision: ಸಾವರ್ಕರ್‌, ಹೆಡ್ಗೆವಾರ್‌ ಪಠ್ಯಕ್ಕೆ ಕಾಂಗ್ರೆಸ್‌ ಸರ್ಕಾರ ಕೊಕ್‌?: ಅನೇಕ ಕಾಯ್ದೆಗಳೂ ವಾಪಸ್‌ ಸಾಧ್ಯತೆ

Exit mobile version