ಹಾಸನ: ಅರಸೀಕೆರೆ ತಾಲೂಕಿನ ಐತಿಹಾಸಿಕ ಮಾಲೇಕಲ್ ತಿರುಪತಿ ವಸ್ತು ಸಂಗ್ರಹಾಲಯದಲ್ಲಿ ನಿರ್ಮಾಣ ಹಂತದಲ್ಲಿದ್ದ 13 ದೇವರ ವಿಗ್ರಹಗಳನ್ನು ಮೇ 30ರಂದು ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಆರಂಭದಲ್ಲಿ ಇದು ಜಿಹಾದಿ ಕೃತ್ಯ ಎಂದು ಆರೋಪಿಸಿ ಅರಸೀಕೆರೆ ಬಂದ್ ನಡೆಸಲಾಗಿತ್ತು. ಆದರೆ, ಬಂಧನವಾದಾಗ ಈ ಕೃತ್ಯವನ್ನು ನಡೆಸಿದ್ದು ಹಿಂದೂ ಹುಡುಗರು ಎಂದು ತಿಳಿದುಬಂದಿದೆ. ಬಂಧಿತರಲ್ಲಿ ಮೂವರು ಅಪ್ರಾಪ್ತ ವಯಸ್ಕರು! ಅಭಿಷೇಕ್ ನಾಯ್ಕ ಎಂಬಾತ 20 ವರ್ಷದವನು. ಇನ್ನೊಬ್ಬನಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ತಿರುಪತಿ ಎಂದೇ ಪ್ರಸಿದ್ಧವಾಗಿರುವ ಮಾಲೇಕಲ್ ಅಮರಗಿರಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದಲ್ಲಿ ಈ ಮ್ಯೂಸಿಯಂ ಇದೆ. ಇಲ್ಲಿ ಹಲವಾರು ಮೂರ್ತಿಗಳನ್ನು ಇಡಲಾಗಿದೆ. ಜತೆಗೆ ಶಿಲ್ಪಿಗಳು ಇಲ್ಲಿ ಮೂರ್ತಿಗಳ ಕೆತ್ತನೆ ಕೆಲಸಗಳನ್ನು ನಡೆಸುತ್ತಾರೆ. ಇಲ್ಲಿಗೆ ಕೆಲವು ಹುಡುಗರ ತಂಡ ಬಂದು ಪೋಲಿ ಕೃತ್ಯಗಳನ್ನು ನಡೆಸುತ್ತಿತ್ತು.
ಸೋಮವಾರವೂ ಪುಂಡರ ತಂಡ ಇಲ್ಲಿಗೆ ಬಂದು ಕಲ್ಯಾಣಿಯಲ್ಲಿ ಈಜಾಡಿದೆ. ಬಳಿಕ ಅಲ್ಲೇ ಮದ್ಯಪಾನ ಮಾಡಿ, ಸಿಗರೇಟು ಸೇದಿದೆ. ಇದನ್ನು ಅಲ್ಲಿನ ವಿಗ್ರಹ ಕೆತ್ತನೆ ಮಾಡುವ ಕೆಲಸಗಾರರು ಪ್ರಶ್ನಿಸಿದ್ದಾರೆ ಮತ್ತು ಅಲ್ಲಿಂದ ಓಡಿಸಿದ್ದಾರೆ.
ಈ ನಡುವೆ ಪುಂಡರ ತಂಡ ಕಾರ್ಮಿಕರು ಊಟಕ್ಕೆ ಹೋದ ಸಂದರ್ಭವನ್ನು ಹೊಂಚು ಹಾಕಿ ಅಲ್ಲಿಗೆ ಧಾವಿಸಿದೆ. ಅಲ್ಲಿದ್ದ ಮೂರ್ತಿಗಳನ್ನು ಪುಡಿಗಟ್ಟಿದೆ. ಇದನ್ನು ಸ್ಥಳೀಯರು ಯಾರೋ ನೋಡುತ್ತಿದ್ದಾರೆ ಎಂಬುದು ಗಮನಕ್ಕೆ ಬರುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದೆ.
ಆದರೆ, ಹೊರ ಜಗತ್ತಿಗೆ ಇದು ಅನ್ಯ ಧರ್ಮೀಯ ಯುವಕರ ಮೂರ್ತಿ ಭಂಜನ ಕೃತ್ಯ ಎಂಬಂತೆ ಕಂಡಿದೆ. ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ಕಾರ್ಯಕರ್ತರು ಜಿಹಾದಿ ಮನಸ್ಥಿತಿಯುಳ್ಳವರು ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಅರಸೀಕೆರೆ ಬಂದ್ ಕೂಡಾ ಮಾಡಿದ್ದರು. ಆದರೆ, ಹಾಸನ ಎಸ್ಪಿ, ಇದು ಅನ್ಯಧರ್ಮದವರ ಕೆಲಸವಲ್ಲ ಎಂದು ಅದೇ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಹಾಸನದಲ್ಲಿ ದೇವರ ವಿಗ್ರಹಗಳನ್ನು ವಿರೂಪಗೊಳಿಸಿದ ಕಿಡಿಗೇಡಿಗಳು, ಎಫ್‌ಐಆರ್ ದಾಖಲು