ಬೆಂಗಳೂರು: ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಬಾಂಬ್, ಬಂದೂಕು, ಪಿಸ್ತೂಲ್ ಇಲ್ಲದೆಯೇ ನಡೆಸುವ ಹೊಸ ಮಾದರಿಯ ಭಯೋತ್ಪಾದನೆಯನ್ನು ಅತ್ಯಂತ ಸಶಕ್ತವಾಗಿ ಅನಾವರಣಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರು ತಿಳಿಸಿದರು. ಈ ಮೂಲಕ ಅದಾ ಶರ್ಮ ನಟಿಸಿದ ಈ ಚಿತ್ರದ ಪರವಾಗಿ ಬಿಜೆಪಿಯ ಹಿರಿಯ ನಾಯಕರರೊಬ್ಬರು ಸಮರ್ಥನೆಯನ್ನು ನೀಡಿದಂತಾಗಿದೆ.
ಎಂ.ಜಿ. ರಸ್ತೆಯಲ್ಲಿರುವ ಐನಾಕ್ಸ್ ಚಿತ್ರಮಂದಿರದಲ್ಲಿ `ದಿ ಕೇರಳ ಸ್ಟೋರಿ’ ಸಿನಿಮಾವನ್ನು ವೀಕ್ಷಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಹೊಸ ಥರದ ಆತಂಕವಾದದ ಬಗ್ಗೆ ಈ ಸಿನಿಮಾ ಮಾಹಿತಿ ಕೊಡುತ್ತಿದೆ. ಯುವಜನರನ್ನು ಪ್ರಾಯೋಜಿತ ರೀತಿಯಲ್ಲಿ ಆತಂಕವಾದದತ್ತ ಸೆಳೆಯುವುದನ್ನು ಈ ಸಿನಿಮಾ ತೋರಿಸುತ್ತದೆ. ಭಯೋತ್ಪಾದನೆಯ ದಾರಿಯಲ್ಲಿ ನಡೆದ ಯುವಜನರು ಮತ್ತೆ ಹಿಂತಿರುಗಲಾಗದ ಹಂತ ತಲುಪುತ್ತಾರೆ ಎಂದು ವಿಶ್ಲೇಷಿಸಿದರು. ಹೀಗಾಗಿ ಸಮಾಜದ ಬಗ್ಗೆ ಕಳಕಳಿ ಇರುವ ಪ್ರತಿಯೊಬ್ಬರೂ ಸಿನಿಮಾವನ್ನು ನೋಡಬೇಕು
ʻನಾವು ಹೊಸ ಹೊಸ ಮಾದರಿಯ ಭಯೋತ್ಪಾದನೆಗಳ ಬಗ್ಗೆ ಕೇಳಿದ್ದೇವೆ.. ಬುಲೆಟ್‌ಗಳು, ಬಾಂಬ್‌ಗಳು, ಮದ್ದುಗುಂಡುಗಳು, ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಮೂಲಕ ನಡೆಸುವ ಭಯೋತ್ಪಾದನೆಯನ್ನು ನೋಡಿದ್ದೇವೆ. ಆದರೆ, ಯಾವುದೇ ಶಸ್ತ್ರಾಸ್ತ್ರ, ಮದ್ದುಗುಂಡುಗಳಿಲ್ಲದೆ ನಡೆಸುವ ಭಯಾನಕ ಶೈಲಿಯ ಭಯೋತ್ಪಾದನೆಯನ್ನು ಇಲ್ಲಿ ತೋರಿಸಲಾಗಿದೆ. ಇದೊಂದು ರೀತಿಯ ವಿಷಕಾರಿ ಭಯೋತ್ಪಾದನೆಯಾಗಿದ್ದು, ಅದರ ಹಿಂದಿನ ಸಂಚುಗಳನ್ನು ಸಿನಿಮಾ ಬಯಲುಗೊಳಿಸುತ್ತದೆʼʼ ಎಂದು ಅವರು ಹೇಳಿದರು.
ಆದರೆ, ಈ ಹೊಸ ಮಾದರಿಯ ಭಯೋತ್ಪಾದನೆಯನ್ನು ಯಾವುದೇ ರಾಜ್ಯ ಇಲ್ಲವೇ ಒಂದು ಧರ್ಮಕ್ಕೆ ಸೀಮಿತಗೊಳಿಸಿ ನೋಡಬಾರದು ಎಂದು ಕೂಡಾ ಅವರು ಹೇಳಿದರು.
ಈ ಸಿನಿಮಾ ವೀಕ್ಷಿಸಿ ಸಮಾಜದ ಹೆಚ್ಚು ಹೆಚ್ಚು ಜನರು ಈ ಷಡ್ಯಂತ್ರದ ಕುರಿತು ಜಾಗೃತಗೊಳ್ಳಲಿ. ಇದಕ್ಕೆ ಧರ್ಮ, ಒಂದು ರಾಜ್ಯ ಎಂಬ ಸೀಮಿತತೆ ಇಲ್ಲ. ಕೇರಳದ ಈ ಗಂಭೀರ ಸಮಸ್ಯೆ ಕುರಿತು ಅಲ್ಲಿನ ಮಾಜಿ ಮುಖ್ಯಮಂತ್ರಿಯೂ ಆತಂಕ ಸೂಚಿಸಿದ್ದಾರೆ ಎಂದರು.
ನಮ್ಮ ಸಮಾಜವನ್ನು ದುರ್ಬಲಗೊಳಿಸಲು ನಡೆಯುವ ಷಡ್ಯಂತ್ರದ ವಿಷಯವನ್ನು ಇದು ತಿಳಿಸಿದೆ. ನಾನು ಈಗಾಗಲೇ ಸಿನಿಮಾ ವೀಕ್ಷಿಸಿದ್ದೇನೆ ಎಂದು ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಸಂಸದ ತೇಜಸ್ವಿಸೂರ್ಯ, ರಾಷ್ಟ್ರೀಯ ವಕ್ತಾರ ಜಾಫರ್ ಇಸ್ಲಾಂ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಅವರೂ ನಡ್ಡಾ ಅವರ ಜೊತೆ ಈ ಸಿನಿಮಾ ವೀಕ್ಷಿಸಿದರು.
ವಿಪುಲ್ ಅಮೃತ್ ಲಾಲ್ ಶಾ ಅವರು ನಿರ್ಮಿಸಿ ಸುದೀಪ್ತೋ ಸೇನ್ ಅವರು ನಿರ್ದೇಶಿಸಿರುವ ಈ ಸಿನಿಮಾವು ಮೇ 5ರಂದು ತೆರೆ ಕಂಡಿದೆ. ಚಿತ್ರದ ನಿರ್ಮಾಪಕರ ಪ್ರಕಾರ ಕೇರಳದ ಸುಮಾರು 32000 ಮಹಿಳೆಯರನ್ನು ಮತಾಂತರ ಮಾಡಿ ಐಸಿಸ್ ಸಂಘಟನೆಗೆ ಸೇರಿಸಲಾಗಿದೆ. ಈ ಮಾತು ಮತ್ತು ಸಿನಿಮಾ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.
ಇದನ್ನೂ ಓದಿ : The Kerala Story: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಿ: ಹಿಂದು ಜನಜಾಗೃತಿ ಸಮಿತಿ