Site icon Vistara News

ಮುರುಘಾಶ್ರೀ ಪ್ರಕರಣ | ಎರಡನೇ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಟ್ವಿಸ್ಟ್‌; ಇನ್ನಿಬ್ಬರು ಪೋಷಕರ ಉಲ್ಟಾ ಹೇಳಿಕೆ?

muruga seer

ಚಿತ್ರದುರ್ಗ: ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಮೇಲೆ ಮೈಸೂರಿನಲ್ಲಿ ಮತ್ತಿಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಶುಕ್ರವಾರ ದಾಖಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ.

ತನ್ನಿಬ್ಬರು ಮಕ್ಕಳ ಸಹಿತ ಇನ್ನೂ ಇಬ್ಬರು ಮಕ್ಕಳ ಮೇಲೆ ಮುರುಘಾಶರಣರು ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಠದ ಅಡುಗೆ ಸಹಾಯಕಿಯು ದೂರು ನೀಡಿದ್ದರು. ಮಕ್ಕಳ ಸಹಿತ ತಾಯಿಯನ್ನು ರಕ್ಷಣೆ ಹಿತದೃಷ್ಟಿಯಿಂದ ಮೈಸೂರಿನಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಆದರೆ, ಪ್ರಕರಣ ದಾಖಲಾಗುತ್ತಿದ್ದಂತೆ ಕಾನೂನು ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಇನ್ನಿಬ್ಬರು ಮಕ್ಕಳ ಹಾಗೂ ಪೋಷಕರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದು, ಆ ವೇಳೆ ತಮ್ಮ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೇ ನಡೆದಿಲ್ಲ ಎಂದು ಪೋಷಕರು ಹೇಳಿದ್ದಾರೆನ್ನಲಾಗಿದೆ.

ಮೈಸೂರಿನಲ್ಲಿ ನೀಡಿದ ದೂರಿನಲ್ಲಿ ಏನಿತ್ತು?
ತನ್ನ ಇಬ್ಬರು ಮಕ್ಕಳ ಮೇಲೆ ಕಳೆದ ಎರಡೂವರೆ ವರ್ಷಗಳಿಂದ ಮುರುಘಾ ಶರಣರು ನಿರಂತರ ಅತ್ಯಾಚಾರ ಎಸೆಗಿದ್ದರು. ನಾವು ಬಡವರಾಗಿದ್ದರಿಂದ ಮಠದಲ್ಲಿ ಓದಲು ಬಿಟ್ಟಿದ್ದೆ. ಈ ವೇಳೆ ಈ ಕೃತ್ಯ ಎಸಗಿದ್ದಾರೆ. ತನ್ನ ಇಬ್ಬರು ಮಕ್ಕಳ ಜತೆ ಇನ್ನೂ ಇಬ್ಬರು ಮಕ್ಕಳ ಮೇಲೂ ಶ್ರೀಗಳು ದೌರ್ಜನ್ಯ ಎಸಗಿದ್ದಾರೆ ಎಂದು ಮಠದ ಅಡುಗೆ ಸಹಾಯಕಿ ನೀಡಿದ ದೂರಿನ ಪ್ರತಿಯಲ್ಲಿ ಆ ಮಕ್ಕಳ ಹೆಸರನ್ನು ಉಲ್ಲೇಖಿಸಿದ್ದರು.

ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಅಧಿಕಾರಿಗಳು ಚಿತ್ರದುರ್ಗಕ್ಕೆ ಶನಿವಾರ ಭೇಟಿ ನೀಡಿದ್ದು, ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದ ಇನ್ನಿಬ್ಬರು ಮಕ್ಕಳು ಹಾಗೂ ಪೋಷಕರಿಂದ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. ಈ ವೇಳೆ, ಅಡುಗೆ ಸಹಾಯಕಿಯ ದೂರಿನ ಬಗ್ಗೆ ಇನ್ನಿಬ್ಬರು ಬಾಲಕಿಯರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, “ತಮ್ಮ ಮಕ್ಕಳ ಹೆಸರನ್ನು ಬಳಸಿ ದೂರು ನೀಡಲು ಅಡುಗೆ ಸಹಾಯಕಿ ಯಾರು?” ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಬಾಲಕಿಯರ ಜತೆ ಮಕ್ಕಳ ಕಲ್ಯಾಣ ಸಮಿತಿಯವರು ಆಪ್ತ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಆ ಇಬ್ಬರು ಹೆಣ್ಣುಮಕ್ಕಳು, “ತಮ್ಮ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಆಗಿಲ್ಲ” ಎಂಬುದಾಗಿ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈಸೂರಿನಲ್ಲಿರುವ ಬಾಲಕಿಯರು ಚಿತ್ರದುರ್ಗಕ್ಕೆ?
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ ಶುಕ್ರವಾರ ಮೈಸೂರಿನಲ್ಲಿ ದೂರು ದಾಖಲಿಸಿರುವ ಇಬ್ಬರು ಸಂತ್ರಸ್ತ ಹೆಣ್ಣು ಮಕ್ಕಳನ್ನು ಆಪ್ತ ಸಮಾಲೋಚನೆಗಾಗಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಕರೆತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೂರು ನೀಡಿದ ಬಳಿಕ ಸಂತ್ರಸ್ತ ಬಾಲಕಿಯರು ಹಾಗೂ ತಾಯಿ ಒಡನಾಡಿ ಸಂಸ್ಥೆಯ ಆಶ್ರಯದಲ್ಲಿ ಮೈಸೂರಿನಲ್ಲಿಯೇ ಉಳಿದುಕೊಂಡಿದ್ದರು.

ಸಿಡಬ್ಲ್ಯೂಸಿ ಅಧಿಕಾರಿಗಳು ಸಂತ್ರಸ್ತ ಬಾಲಕಿಯರ ಜತೆ ಆಪ್ತ ಸಮಾಲೋಚನೆ ನಡೆಸಲಿದ್ದಾರೆ. ಅಲ್ಲದೆ, ಪೊಲೀಸರು ಸಹ ಸಿಆರ್‌ಪಿಸಿ 161ರ ಅಡಿಯಲ್ಲಿ ಸಂತ್ರಸ್ತ ಬಾಲಕಿಯ ಹೇಳಿಕೆ ಪಡೆಯಬೇಕಿದ್ದು, ಅವರನ್ನು ಕರೆಸುವಂತೆ ಸಿಡಬ್ಲ್ಯೂಸಿ ಅಧಿಕಾರಿಗಳಿಗೆ ಪೊಲೀಸರು ಮನವಿ ಮಾಡಿದ್ದಾರೆ. ತನಿಖಾಧಿಕಾರಿ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರಿಂದ ಶನಿವಾರವೇ ಮಕ್ಕಳ ಹೇಳಿಕೆ ದಾಖಲು ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಸಂತ್ರಸ್ತ ಬಾಲಕಿಯರ ವೈದ್ಯಕೀಯ ತಪಾಸಣೆ?
ಈಗಾಗಲೇ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಬಾಲಕಿಯರು ದೂರು ನೀಡಿದ ಹಿನ್ನೆಲೆಯಲ್ಲಿ ಸಂತ್ರಸ್ತ ಬಾಲಕಿಯರಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಮೈಸೂರಿನಲ್ಲಿರುವ ಬಾಲಕಿಯರನ್ನು ಮುರುಘಾಮಠಕ್ಕೆ ಕರೆತಂದು ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ. ಅಲ್ಲದೆ, ನ್ಯಾಯಾಧೀಶರ ಎದುರು ಸಿಆರ್‌ಪಿಸಿ 164ರ ಅಡಿ ಹೇಳಿಕೆ ದಾಖಲು ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಪ್ರಕರಣದ ಸಾರಾಂಶ
ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಮುರುಘಾಶರಣರು ಜೈಲಿನಲ್ಲಿ ಇರುವ ಬೆನ್ನಲ್ಲೇ ಶುಕ್ರವಾರ (ಅ.೧೪) ಮೈಸೂರಲ್ಲಿ ಮಠದ ಅಡುಗೆ ಸಹಾಯಕಿಯೊಬ್ಬರು ತನ್ನಿಬ್ಬರು ಮಕ್ಕಳು ಸೇರಿದಂತೆ ಮತ್ತಿಬ್ಬರು ಮಕ್ಕಳ ಮೇಲೆ ಮುರುಘಾಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲು ಮಾಡಿದ್ದರು. ಈ ವೇಳೆ ಪೊಲೀಸರು ಹಾಗೂ ಸಿಡಬ್ಲ್ಯೂಸಿ ಅಧಿಕಾರಿಗಳು ಆಕೆಯ ಹಾಗೂ ಒಬ್ಬಳು ಮಗಳ ಹೇಳಿಕೆಯನ್ನು ಪಡೆದುಕೊಂಡಿದ್ದರು. ನಾಲ್ಕು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ತಾಯಿ ಹೇಳಿದ್ದಾರೆ. “ಪತಿ ಇಲ್ಲದ ಕಾರಣ ತಾನು ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೆ. ನನ್ನ ಮಕ್ಕಳು ಮಠದ ವಸತಿ ಶಾಲೆಯಲ್ಲಿ ಓದುತ್ತಿದ್ದರು. ನನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಮುರುಘಾ ಶರಣರು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಪ್ರಭಾವ ಹೊಂದಿರುವ ಕಾರಣ ತಡವಾಗಿ ದೂರು ನೀಡುತ್ತಿದ್ದೇನೆ” ಎಂದೂ ಸಹ ಸಂತ್ರಸ್ತ ಬಾಲಕಿಯರಿಬ್ಬರ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಸಂಬಂಧ ಮೈಸೂರಿ‌ನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಒಟ್ಟು 7 ಮಂದಿ ಮೇಲೆ ಕೇಸ್‌ ಹಾಕಲಾಗಿತ್ತು. ಸ್ವಾಮೀಜಿಯವರ ಸಹಾಯಕರಾದ ಮಹಾಲಿಂಗ, ಅಡುಗೆ ಸಹಾಯಕ ಕರಿಯಪ್ಪ ಎಂಬ ಇಬ್ಬರ ಮೇಲೆ ಹೊಸದಾಗಿ ಎಫ್‌ಐಆರ್ ದಾಖಲಾದಂತಾಗಿತ್ತು.

ಶಿವಮೂರ್ತಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದು, ಉಳಿದವರಾದ ಲೇಡಿ ಹಾಸ್ಟೆಲ್ ವಾರ್ಡನ್, ಮಠದ ಉತ್ತರಾಧಿಕಾರಿ, ಮಠದ ಕಾರ್ಯದರ್ಶಿ ಪರಮಶಿವಯ್ಯ, ವಕೀಲ ಗಂಗಾಧರಯ್ಯ, ಮುರುಘಾಶ್ರೀ ಸಹಾಯಕ ಮಹಾಲಿಂಗ, ಮುರುಘಾಶ್ರೀ ಅಡುಗೆಭಟ್ಟ ಕರಿಬಸಪ್ಪ ವಿರುದ್ಧ ಕ್ರಮವಾಗಿ ಕೇಸ್ ದಾಖಲಾಗಿದೆ.

ಏನಿದು ಮೊದಲ ಲೈಂಗಿಕ ಕಿರುಕುಳ ಪ್ರಕರಣ?
ಚಿತ್ರದುರ್ಗ ಜಿಲ್ಲೆಯ ಮುರುಘಾ ಮಠದ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ವಸತಿ ಶಾಲೆಯಲ್ಲಿದ್ದ ಈ ಈ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆಂದು ದೂರು ನೀಡಲಾಗಿತ್ತು. ಅಲ್ಲದೆ, ಇದಕ್ಕೆ ಅಲ್ಲಿನ ವಾರ್ಡನ್‌ ಸೇರಿ ಹಲವರು ಸಹಕಾರ ನೀಡುತ್ತಿದ್ದಾರೆ ಎಂದು ಆಗಸ್ಟ್‌ ೨೭ರಂದು ಇಬ್ಬರು ವಿದ್ಯಾರ್ಥಿನಿಯರು ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನ ನಜರ್‌ಬಾದ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಒಬ್ಬಳು ವಿದ್ಯಾರ್ಥಿನಿ ಮೇಲೆ ೩ ವರ್ಷದಿಂದ ಹಾಗೂ ಇನ್ನೊಬ್ಬ ವಿದ್ಯಾರ್ಥಿನಿಯ ಮೇಲೆ ಕಳೆದ ಒಂದೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯವನ್ನು ನಡೆಸುತ್ತಾ ಬರಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಯಾರೆಲ್ಲ ಭಾಗಿಗಳು?
ಡಾ. ಶಿವಮೂರ್ತಿ ಮುರುಘಾಶರಣರ ಮೇಲೆ ಅತ್ಯಾಚಾರ ಆರೋಪವನ್ನು ಹೊರಿಸಲಾಗಿದ್ದು, ಅವರಿಗೆ ಸಹಕಾರ ನೀಡಿದ ಆರೋಪದಡಿ ವಸತಿ ಶಾಲೆಯ ವಾರ್ಡನ್‌ ರಶ್ಮಿ, ಮಠದ ಮರಿಸ್ವಾಮಿ ಬಸವಾದಿತ್ಯ, ಕಾರ್ಯದರ್ಶಿ ಪರಮಶಿವಯ್ಯ, ವಕೀಲ ಗಂಗಾಧರ್‌ ಮೇಲೆ ದೂರು ದಾಖಲಾಗಿತ್ತು. ಈ ಇಬ್ಬರು ವಿದ್ಯಾರ್ಥಿನಿಯರನ್ನು ಒತ್ತಾಯಪೂರ್ವಕವಾಗಿ ಸ್ವಾಮೀಜಿ ಬಳಿ ಕಳುಹಿಸಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಲೈಂಗಿಕ ಕ್ರಿಯೆಗೆ ಒಪ್ಪದೇ ಇದ್ದರೆ ಹಣ್ಣು, ಸಿಹಿಯಲ್ಲಿ ಮತ್ತುಬರುವ ಔಷಧವನ್ನು ಬೆರೆಸಿ ಅತ್ಯಾಚಾರ ನಡೆಸಲಾಗುತ್ತದೆ ಎಂದೂ ಹೇಳಲಾಗಿದೆ.

ಬಂಧನದ ಬಳಿಕ
ಆಗಸ್ಟ್‌ ೨೭ರಂದು ದೂರು ದಾಖಲಾಗಿತ್ತಾದರೂ ಮುಂದಿನ ನಾಲ್ಕು ದಿನಗಳ ಕಾಲ ಕಾನೂನು ಪ್ರಕ್ರಿಯೆಯನ್ನು ತೆಗೆದುಕೊಂಡಿರಲಿಲ್ಲ. ಸೆಪ್ಟೆಂಬರ್‌ ೧ರಂದು ರಾತ್ರಿ ಸ್ವಾಮೀಜಿಯನ್ನು ಬಂಧನ ಮಾಡಲಾಯಿತು. ಎರಡನೇ ಆರೋಪಿ, ಹಾಸ್ಟೆಲ್‌ ವಾರ್ಡನ್‌ ರಶ್ಮಿಯನ್ನು ಸಹ ಬಳಿಕ ಬಂಧನ ಮಾಡಿ ಶಿವಮೊಗ್ಗದ ಜೈಲಿಗೆ ಕಳುಹಿಸಲಾಗಿದೆ. ಇದರ ಜತೆಗೆ ಉಳಿದ ಆರೋಪಿಗಳ ಪೈಕಿ ಬಸವಾದಿತ್ಯ ಮತ್ತು ಪರಮಶಿವಯ್ಯ ತಲೆಮರೆಸಿಕೊಂಡಿದ್ದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಕೋರ್ಟ್‌ ಅದನ್ನು ಪುರಸ್ಕರಿಸದೆ ವಿಚಾರಣೆಯನ್ನು ಮುಂದೂಡುತ್ತಲೇ ಬಂದಿದೆ. ಇದರ ನಡುವೆ, ವಕೀಲರಾಗಿರುವ ಗಂಗಾಧರಯ್ಯ ಅವರನ್ನು ಪೊಲೀಸರು ವಿಚಾರಣೆ ನಡೆಸಿ, ಕರೆದಾಗ ಬರುವ ಷರತ್ತಿನೊಂದಿಗೆ ಬಿಟ್ಟುಕಳುಹಿಸಲಾಗಿದೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಇನ್ನೂ 30-35 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಸ್ಟ್ಯಾನ್ಲಿ ಗಂಭೀರ ಆರೋಪ

Exit mobile version