Site icon Vistara News

ಗಣಿ ಇಲಾಖೆ ಕಾರ್ಯವೈಖರಿಗೆ ಕೇಂದ್ರದ ಶಹಬ್ಬಾಸ್‌ಗಿರಿ: ಅಂದು ತಿರಸ್ಕಾರ, ಇಂದು ಪುರಸ್ಕಾರ!

ಬಳ್ಳಾರಿ

ಶಶಿಧರ್‌ ಮೇಟಿ, ಬಳ್ಳಾರಿ

ಕರ್ನಾಟಕದ ಪಾಲಿಗೆ ಗಣಿ ಎಂಬುದು ಕಪ್ಪು ಚುಕ್ಕೆಯಾಗಿ ಬಹಳ ವರ್ಷಗಳ ಕಾಲ ಕಾಡಿತ್ತು. ಗಣಿ ಹಗರಣಗಳ ಮಧ್ಯೆ ವರ್ಚಸ್ಸಿಗೆ ಧೂಳು ಹಿಡಿದಿತ್ತು. ಬಳ್ಳಾರಿಯ ಗಣಿ ಧೂಳು ನವ ದೆಹಲಿಯಲ್ಲೂ ಧೂಳೆಬ್ಬಿಸಿತ್ತು. ಇದು ರಾಜ್ಯದ ಗಣಿ ಇಲಾಖೆಯ ಕಾರ್ಯವೈಖರಿ ಮೇಲೂ ಅನೇಕ ಅನುಮಾನಗಳನ್ನು ಮೂಡಿಸಿತ್ತು. ಈಗ ಒಂದು ಹಂತದ ಪರದೆ ಸರಿದಿದ್ದು, ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಕೇಂದ್ರದ ಪುರಸ್ಕಾರ ಲಭ್ಯವಾಗಿದೆ.

ರಾಷ್ಟ್ರೀಯ ಖನಿಜ ವಿಕಾಸ್ ಪುರಸ್ಕಾರ ಮತ್ತು ಪ್ರೋತ್ಸಾಹ ಧನದ ರೂಪದಲ್ಲಿ ಒಟ್ಟಾರೆಯಾಗಿ ೩ ಕೋಟಿ ರೂ.ಗೂ ಹೆಚ್ಚು ಹಣವನ್ನು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪಡೆದುಕೊಂಡಿದೆ. ಪ್ರಮುಖ ಖನಿಜಾಂಶಗಳ ಹರಾಜು ಪ್ರಕ್ರಿಯೆ, ಅದಿರು ಅನ್ವೇಷಣೆ, ಯಶಸ್ವಿ ಗಣಿಗಾರಿಕೆ ನಡೆಸಿರುವ ವಿಚಾರದಲ್ಲಿ ಕೇಂದ್ರದ ಗಣಿ ಸಚಿವಾಲಯ ನೀಡುವ 2020-21ನೇ ಸಾಲಿನ ರಾಷ್ಟ್ರೀಯ ಖನಿಜ ವಿಕಾಸ್ ಪುರಸ್ಕಾರಕ್ಕೆ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪಾತ್ರವಾಗಿದೆ. ಮೊದಲ ಪುರಸ್ಕಾರಕ್ಕೆ ಒಡಿಶಾ ಪಾತ್ರವಾಗಿದ್ದು, 2ನೇ ಪುರಸ್ಕಾರಕ್ಕೆ ಮಧ್ಯಪ್ರದೇಶ ಹಾಗೂ ಮೂರನೇ ಪುರಸ್ಕಾರಕ್ಕೆ ಕರ್ನಾಟಕ ಪಾತ್ರವಾಗಿದೆ. ಕರ್ನಾಟಕಕ್ಕೆ ಈ ಮೂಲಕ 1 ಕೋಟಿ ರೂ.ಗಳ ಬಹುಮಾನದ ಹಣ ಬಂದಿದೆ.

ಮೊದಲ ಸ್ಥಾನದ ನಿರೀಕ್ಷೆ

ದೆಹಲಿಯ ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಜುಲೈ 12ರಂದು ನಡೆದ ಗಣಿ ಸಚಿವಾಲಯದ 6ನೇ ಕಾನ್ ಕ್ಲೇವ್‌ನಲ್ಲಿ ಕೇಂದ್ರದ ಗೃಹಸಚಿವ ಅಮಿತ್ ಷಾ ಪುರಸ್ಕಾರ ನೀಡಿದ್ದಾರೆ. 2021-22ರಲ್ಲಿ 27 ಗಣಿ ಗುತ್ತಿಗೆಗಳ ಹರಾಜಿನ ಪೈಕಿ, 12 ಗುತ್ತಿಗೆ ಹರಾಜು ಮಾಡುವಲ್ಲಿ ಯಶಸ್ವಿಯಾಗಿದ್ದು, ಈ ವರ್ಷದಲ್ಲಿ ರಾಷ್ಟ್ರೀಯ ಖನಿಜ ಪುರಸ್ಕಾರಕ್ಕೆ ನಮ್ಮ ರಾಜ್ಯವು ಮೊದಲ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Reservation | ರಾಜ್ಯದಲ್ಲಿ ಮೀಸಲಾತಿ ಕಿಚ್ಚು: ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ

2.05 ಕೋಟಿ ರೂ.ಗಳ ಪ್ರೋತ್ಸಾಹ ಧನ

ಕೇಂದ್ರ ಸರ್ಕಾರವು ಪ್ರಮುಖ ಖನಿಜಗಳ ಹರಾಜು ಪ್ರಕ್ರಿಯೆ ನಡೆಸುವ ರಾಜ್ಯಗಳಿಗೆ ಪ್ರೋತ್ಸಾಹ ಧನವನ್ನು ನೀಡಲಿದೆ. ಪ್ರತಿಯೊಂದು ಗಣಿ ಗುತ್ತಿಗೆ ಯಶಸ್ವಿ ಹರಾಜಿಗೆ 20 ಲಕ್ಷ ರೂ.ಗಳ ಪ್ರೋತ್ಸಾಹ ಧನ ನೀಡಲಿದೆ. ಕೇವಲ ಹರಾಜು ನಡೆಸಿದರೂ ಸಹ (ಹರಾಜು ಪ್ರಕ್ರಿಯೆ ನಡೆಸಿ ಯಾರೂ ಆಯ್ಕೆ ಮಾಡಿಕೊಳ್ಳದಿದ್ದರೂ) ಒಂದು ಪ್ರಕ್ರಿಯೆಗೆ 5 ಲಕ್ಷ ರೂ. ನೀಡಲಾಗುತ್ತದೆ. ಹೀಗಾಗಿ ರಾಜ್ಯದಲ್ಲಿ 202೦-2೧ರಲ್ಲಿ ಯಶಸ್ವಿ ಗಣಿ ಗುತ್ತಿಗೆ ಹರಾಜಿಗೆ 2.05 ಕೋಟಿ ರೂ.ಗಳ ಪ್ರೋತ್ಸಾಹ ಧನ ರಾಜ್ಯ ಪಡೆದುಕೊಂಡಿದೆ‌.

ರಾಜ್ಯದ 8 ಗಣಿ ಕಂಪನಿಗಳಿಗೆ 5 ಸ್ಟಾರ್ ರೇಟಿಂಗ್

ನಿಯಮಗಳ ಅಡಿಯಲ್ಲಿ ಕ್ರಮ ಬದ್ಧವಾಗಿ ಗಣಿಗಾರಿಕೆ ನಡೆಸಿರುವ ಆಧಾರದ ಮೇಲೆ ಕೇಂದ್ರ ಗಣಿ ಸಚಿವಾಲಯ ನೀಡುವ ಫೈವ್ ಸ್ಟಾರ್ ರೇಟಿಂಗನ್ನು ದೇಶದ 40 ಕಂಪನಿಗಳ ಪೈಕಿ ರಾಜ್ಯದ 8 ಕಂಪನಿಗಳು ಪಡೆದುಕೊಂಡಿವೆ. ಚಿತ್ರದುರ್ಗದ ಪ್ರವೀಣ್ ಚಂದ್ರ ಮೈನ್ಸ್, ಸಂಡೂರಿನ ಸ್ಮಯೋರ್ ಐರನ್ ಮತ್ತು ಮ್ಯಾಂಗನೀಸ್‌ಗೆ ಎರಡು ಪ್ರಶಸ್ತಿ, ಹೊಸಪೇಟೆಯ ಎಂಎಸ್ ಪಿಎಲ್ (ವ್ಯಾಸನಕೆರೆ), ಸಂಡೂರಿನ ಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್, ಬಾಗಲಕೋಟೆಯ ಜೆಕೆ ಸಿಮೆಂಟ್ ಲೈಮ್ ಸ್ಟೋನ್ ಮೈನ್ಸ್ ಮತ್ತು ಕಲಬುರಗಿಯ ಅಲ್ಟ್ರಾಟೆಕ್ ರಾಜಶ್ರೀ ಸಿಮೆಂಟ್ ಲೈಮ್ ಸ್ಟೋನ್ ಮೈನ್ಸ್‌ಗೆ 5 ಸ್ಟಾರ್ ರೇಟಿಂಗನ್ನು ಕೇಂದ್ರ ಗಣಿ ಸಚಿವಾಲಯ ನೀಡಿ ಗೌರವಿಸಿದೆ.

ಇದನ್ನೂ ಓದಿ | Rajasthan Murder | ಕನ್ಹಯ್ಯ ಲಾಲ್‌ ಹತ್ಯೆ ಖಂಡಿಸಿ ರಾಜ್ಯದಲ್ಲಿ ಮುಂದುವರಿದ ಪ್ರತಿಭಟನೆ

Exit mobile version