ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ (Mysore Dasara) ಮೂರನೇ ದಿನ ಬುಧವಾರ ಅರಮನೆ ಅಂಗಳದಲ್ಲಿ ವಿಶೇಷ ನವರಾತ್ರಿ ಪೂಜಾ ಕೈಂಕರ್ಯಗಳು ನೆರವೇರಿದವು. ಚಲನಚಿತ್ರೋತ್ಸವದಲ್ಲಿ ಡಾ.ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಸಿನಿಮಾ ವೀಕ್ಷಿಸಿದರು. ಯೋಗ ದಸರಾ, ಪ್ಯಾಕೇಜ್ ಟೂರ್, ಗೊಂಬೆ ಮನೆ, ಕವಿಗೋಷ್ಠಿ, ನಾಡಕುಸ್ತಿ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.
ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮುಂಜಾನೆ ಯೋಗ ದಸರಾ ಉಪಸಮಿತಿಯವರು ಅರಮನೆ ಅಂಗಳದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಆಯೋಜಿಸಿದ್ದರು. ಯೋಗ ದಸರಾಗೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಸ್.ಎ.ರಾಮದಾಸ್, ಉಪಮೇಯರ್ ರೂಪಾ ಮತ್ತಿತರರು ಭಾಗಿಯಾದ್ದರು.
ಇದನ್ನೂ ಓದಿ | Channapatna doll | ದಶಪಥ ಹೆದ್ದಾರಿಯ ವೇಗದೊಳಗೆ ಕಳೆದು ಹೋಗುತ್ತಿರುವ ಚನ್ನಪಟ್ಟಣದ ಬೊಂಬೆ!
ಇದೇ ವೇಳೆ ಅರಮನೆ ಆವರಣದಲ್ಲಿ ರಾಜವಂಶಸ್ಥರ ನವರಾತ್ರಿ ಪೂಜಾ ಕೈಂಕರ್ಯಗಳು ಪ್ರಾರಂಭವಾದವು. ಪಟ್ಟದ ಆನೆ, ಹಸು, ಕುದುರೆಯೊಂದಿಗೆ ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಮೆರವಣಿಗೆಯಲ್ಲಿ ಸಾಗಿ ಪೂಜೆ ಸಲ್ಲಿಸಲಾಯಿತು.
ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಜಾರಿಗೆ ತಂದಿರುವ ಪ್ಯಾಕೇಜ್ ಟೂರ್‌ಗೆ ಚಾಲನೆ ನೀಡಲಾಯಿತು. ಸಾರಿಗೆ ಸಚಿವ ಶ್ರೀರಾಮುಲು ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪ್ಯಾಕೇಜ್ ಟೂರ್ ಉದ್ಘಾಟಿಸಿದರು. ಗಿರಿದರ್ಶಿನಿ ಹೆಸರಲ್ಲಿ ಬೆಟ್ಟಗಳು, ಜಲದರ್ಶಿನಿ ಹೆಸರಲ್ಲಿ ನದಿ ಮತ್ತು ಅಣೆಕಟ್ಟು, ದೇಗುಲ ದರ್ಶಿನಿ ಹೆಸರಲ್ಲಿ ಪ್ರಸಿದ್ಧ ದೇವಾಲಯಗಳಿಗೆ ಪ್ಯಾಕೇಜ್ ಟೂರ್ ಮಾಡಬಹುದಾಗಿದೆ.
ದಸರಾ ಚಲನಚಿತ್ರೋತ್ಸವವನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ಉದ್ಘಾಟಿಸಿದರು. ಚಲನಚಿತ್ರೋತ್ಸವದಲ್ಲಿ ರಣವಿಕ್ರಮ, ರಾಜಕುಮಾರ, ಜೇಮ್ಸ್ ಸೇರಿ ಡಾ.ಪುನೀತ್ ರಾಜ್‌ಕುಮಾರ್ ಅಭಿನಯದ ಸಿನಿಮಾಗಳ 16 ಶೋಗಳನ್ನು ಪ್ರದರ್ಶಿಸಲಾಯಿತು. ಅಶ್ವಿನಿ ಪುನೀತ್ ರಾಜ್‍ಕುಮಾರ್ ಐನಾಕ್ಸ್ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ರಾಜಕುಮಾರ ಸಿನಿಮಾ ವೀಕ್ಷಿಸಿದರು.
ಕಾರ್ಯಕ್ರಮಗಳು ಮಾತ್ರವಲ್ಲ, ಮೈಸೂರಿನ ಮನೆ ಮನೆಯಲ್ಲೂ ಗೊಂಬೆ ಪ್ರದರ್ಶನದ ಮೂಲಕ ಹಬ್ಬ ಆಚರಣೆ ಮಾಡಲಾಗುತ್ತಿದೆ. ಶಾಲೆ, ಕಾಲೇಜು, ಸಂಘ- ಸಂಸ್ಥೆಗಳೂ ಗೊಂಬೆ ಕೂರಿಸಿವೆ. ದಟ್ಟಗಳ್ಳಿಯ ಕೇಂಬ್ರಿಡ್ಜ್ ಮಾಂಟೆಸರಿಯಲ್ಲಿ ಬರೋಬ್ಬರಿ 10 ಸಾವಿರ ಬೊಂಬೆಗಳನ್ನು ಕೂರಿಸಲಾಗಿದೆ. ಸಾಂಪ್ರದಾಯಿಕ ಗೊಂಬೆಗಳ ಜತೆಗೆ ರಾಮಾಯಣ, ಮಹಾಭಾರತ, ಗ್ರಾಮೀಣ ಕ್ರೀಡೆ, ಜಂಬೂ ಸವಾರಿ, ಖಾಸಗಿ ದರ್ಬಾರ್, ಜ್ಯೋತಿರ್ಲಿಂಗಗಳು, ಕ್ರಿಕೆಟ್ ಹೀಗೆ ತರಹೇವಾರಿ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಕವಿಗೋಷ್ಠಿ ಉದ್ಘಾಟನೆ
ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಕಾರ್ಯಕ್ರಮವನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು. ಸಾಹಿತಿಗಳಾದ ದೊಡ್ಡರಂಗೇಗೌಡ, ಪ್ರೊ.ಎಂ.ಕೃಷ್ಣೇಗೌಡ, ಬಿ.ಆರ್.ಲಕ್ಷ್ಮಣರಾವ್, ಉಪಮೇಯರ್ ರೂಪಾ, ಮೂಡ ಮಾಜಿ ಅಧ್ಯಕ್ಷ ರಾಜೀವ್, ಜಂಗಲ್ಸ್ ಲಾಡ್ಜ್ ಆ್ಯಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷ ಅಪ್ಪಣ್ಣ, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ ಮತ್ತಿತರರು ಭಾಗಿಯಾಗಿದ್ದರು.
ವಾಯುಸೇನೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ
ಇದೇ ಮೊದಲ ಬಾರಿಗೆ ಭಾರತೀಯ ವಾಯುಸೇನೆಯಿಂದ ಅರಮನೆ ಸಾಂಸ್ಕೃತಿಕ ವೇದಿಕೆಯಲ್ಲಿ ಏರ್ಫೋರ್ಸ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. 50ಕ್ಕೂ ಹೆಚ್ಚು ಏರ್ಫೋರ್ಸ್ ಅಧಿಕಾರಿಗಳು ವಾಯುಪಡೆ ಸಮವಸ್ತ್ರದಲ್ಲಿ ವೈವಿಧ್ಯಮಯ ವಾದ್ಯಗಳ ಜತೆಯಲ್ಲಿ ದೇಶ ಭಕ್ತಿ ಗೀತೆಗಳನ್ನು ಹಾಡಿದರು. ಇದೆಲ್ಲದರ ನಡುವೆ ಯುವ ದಸರಾ ಶುರುವಾಗಿದೆ.
ಇದನ್ನೂ ಓದಿ | ಮೈಷುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಪ್ರಾರಂಭಿಸಿ; ಸಿಎಂಗೆ ಪತ್ರ ಬರೆದ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ