ಸುಳ್ಯ (ದಕ್ಷಿಣ ಕನ್ನಡ): ಕಳ್ಳನೊಬ್ಬ ಒಂದು ಸ್ಕೂಟಿ ಕದ್ದುಕೊಂಡು (Theft case) ಬಂದು ಹೋಟೆಲ್ ಒಂದರ ಶೌಚಾಲಯದಲ್ಲಿ ನಿದ್ದೆ ಮಾಡಿ ಕೊನೆಗೆ ಪೋಲಿಸರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.
ಮಂಡ್ಯದ ನಿವಾಸಿ ಸುಲ್ತಾನ್ ಎಂಬಾತ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶವೊಂದರಿಂದ ಸ್ಕೂಟಿ ಕದ್ದಿದ್ದ. ಅದನ್ನು ಮಂಡ್ಯದತ್ತ ತೆಗೆದುಕೊಂಡು ಹೋಗುವ ದಾರಿಯಲ್ಲಿ ಸುಳ್ಯ ಸಮೀಪದ ಗೂನಡ್ಕದ ದೊಡ್ಡಡ್ಕದಲ್ಲಿರುವ ತಾಜುದ್ದೀನ್ ಟರ್ಲಿ ಎಂಬುವವರ ಇಂಡಿಯನ್ ಗೇಟ್ ಹೋಟೆಲ್ ನಲ್ಲಿ ಟೀ ಕುಡಿಯಲೆಂದು ವಾಹನ ನಿಲ್ಲಿಸಿದ್ದಾನೆ.
ಟೀ ಕುಡಿದ ಬಳಿಕ ಈತ ಶೌಚಾಲಯಕ್ಕೆ ಎಂದು ಹೋದವನು ಸುಮಾರು ಅರ್ಧ ಗಂಟೆ ಕಳೆದರೂ ಹೊರಬಂದಿರಲಿಲ್ಲ. ಆಗ ಹೋಟೆಲ್‌ನಲ್ಲಿ ಇದ್ದವರು ಶೌಚಾಲಯದ ಬಾಗಿಲನ್ನು ಬಡಿದಿದ್ದಾರೆ. ಆದರೆ ಒಳಗಿನಿಂದ ಯಾವುದೇ ಶಬ್ದ ಬರಲಿಲ್ಲ. ಶೌಚಾಲಯದ ಬಾಗಿಲಿನ ಮೇಲ್ಭಾಗದ ರಂಧ್ರದಿಂದ ಇಣುಕಿ ನೋಡಿದಾಗ ಆತ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಗಾಬರಿಗೊಂಡ ಹೋಟೆಲ್‌ನವರು ಆತನ ಮೇಲೆ ನೀರು ಚಿಮುಕಿಸಿದ್ದಾರೆ. ಈ ವೇಳೆ ನಿದ್ದೆಯಿಂದ ಎದ್ದ ಆತ ಶೌಚಾಲಯದ ಬಾಗಿಲು ತೆಗೆದು ಹೊರಬಂದಿದ್ದಾನೆ.
ಈ ವೇಳೆ ಹೋಟೆಲ್‌ನವರು ಆತನ ಬಳಿ ವಿಚಾರಿಸಿದಾಗ ಸಂಶಯಾಸ್ಪದವಾಗಿ ಮಾತನಾಡಿದ್ದು ಬಳಿಕ ಅಲ್ಲಿಂದ ಸ್ಕೂಟಿಯಲ್ಲಿ ಮಡಿಕೇರಿ ಕಡೆ ತೆರಳಲು ಪ್ರಯತ್ನ ಮಾಡಿದ್ದಾನೆ.
ಈತನ ಬಗ್ಗೆ ಸಂಶಯಗೊಂಡ ಹೋಟೆಲ್‌ನವರು ಕಲ್ಲುಗುಂಡಿ ಪೊಲೀಸರಿಗೆ ಮಾಹಿತಿಯನ್ನು ನೀಡಿದರು. ಕಲ್ಲುಗುಂಡಿಯಲ್ಲಿ ವಾಹನ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸರು ಆತನನ್ನು ತಡೆದು ವಿಚಾರಣೆ ನಡೆಸಿದಾಗ ಈತ ಮಾಡಿದ ಕಳ್ಳತನ ಬೆಳಕಿಗೆ ಬಂದಿದೆ.
ಬಳಿಕ ಆತನನ್ನು ಸುಳ್ಯ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಕೋಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಅಲ್ಲಿನ ಪೋಲಿಸರು ಸ್ಕೂಟಿ ವಾಹನವೊಂದು ಕಳ್ಳತನವಾಗಿರುವ ದೂರು ದಾಖಲಾಗಿರುವ ಮಾಹಿತಿ ನೀಡಿದ್ದಾರೆ. ಬಳಿಕ ಕೋಟಾ ಪೊಲೀಸರು ಸುಳ್ಯಕ್ಕೆ ಆಗಮಿಸಿ ಆತನನ್ನು ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಭವಿಷ್ಯ ಹೇಳುವ ನೆಪದಲ್ಲಿ 73 ಗ್ರಾಂ ಚಿನ್ನದ ದೋಚಿದ ನಕಲಿ ಜ್ಯೋತಿಷಿಗಳು
ಬೆಂಗಳೂರು: ಇಲ್ಲಿನ ಕುಂಬಾರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನ (Dharmarayaswamy Temple) ಸಮೀಪ ಚಿನ್ನದ ವ್ಯಾಪಾರಿಯೊಬ್ಬರಿಗೆ ನಕಲಿ ಜ್ಯೋತಿಷಿಗಳು (Fake astrologer) ಭವಿಷ್ಯ ಹೇಳುವ ನೆಪದಲ್ಲಿ ಆತನ ಬಳಿಯಿದ್ದ 73 ಗ್ರಾಂ ಚಿನ್ನದ ಗಟ್ಟಿಯನ್ನು ದೋಚಿ ಪರಾರಿ (Theft Case) ಆಗಿರುವ ಘಟನೆ ಕುಂಬಾರಪೇಟೆ ಸಮೀಪ ನಡೆದಿದೆ.
ಓಂ ಗೋಲ್ಡ್ ಎಂಬ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಮನ್ ಸರ್ಕಾರ್ (20) ಎಂಬಾತನ ಬಳಿ ಬಂಗಾಲಿ ಬಾಬ ಎಂದು ಹೇಳಿದ ನಯವಂಚಕರು ಕೈ ರೇಖೆ ನೋಡಿ ಭವಿಷ್ಯ ಹೇಳುವುದಾಗಿ ನಂಬಿಸಿ ವಂಚಿಸಿದ್ದಾರೆ. ಕಳೆದ ಮಾರ್ಚ್ 27ರ ಮಧ್ಯಾಹ್ನ 3.30ರ ಸುಮಾರಿಗೆ ಮಾಲೀಕನ ಅಣತಿಯಂತೆ 75 ಗ್ರಾಂ ಚಿನ್ನವನ್ನು ಟೆಸ್ಟಿಂಗ್ ಮಾಡಿಸುವ ಸಲುವಾಗಿ ಸುಮನ್ ಚಿನ್ನದ ಗಟ್ಟಿಯನ್ನು ಬಾಲಾಜಿ ಗೋಲ್ಡ್ ಟೆಸ್ಟಿಂಗ್ ಅಂಗಡಿಗೆ ತೆಗೆದುಕೊಂಡು ಹೋಗಿದ್ದರು.
ಟೆಸ್ಟ್ ಮಾಡಿಸಿ ಸುಮನ್ ವಾಪಸ್ ಬರುವಾಗ ಗಾಣಿಗರ ಸಿ ಲೇನ್ ಹತ್ತಿರ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು, ಇವರದ್ದೇ ಬಂಗಾಳಿ ಭಾಷೆಯಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ನಾವುಗಳು ಬಂಗಾಲಿ ಜ್ಯೋತಿಷಿಗಳು ನಿನ್ನ ಕೈ ರೇಖೆಯನ್ನು ನೋಡಿ ಭವಿಷ್ಯ ಹೇಳುತ್ತೇವೆ ಎಂದು ನಂಬಿಸಿದ್ದಾರೆ. ಬಳಿಕ ನಮ್ಮೊಂದಿಗೆ ಬಂದರೆ ಕೈ ನೋಡಿ ಒಳ್ಳೆಯ ಮಂತ್ರಿಸಿದ ದಾರವನ್ನು ಕೊಡುವುದಾಗಿ ಹೇಳಿದ್ದಾರೆ.
ನಕಲಿ ಜ್ಯೋತಿಷಿಗಳ ಮಾತಿಗೆ ಮರುಳಾದ ಸುಮನ್ ಅವರೊಟ್ಟಿಗೆ ಹೋಗಿದ್ದಾರೆ. ಕುಡಿಯಲು ಯಾವುದೋ ನೀರನ್ನು ತೀರ್ಥ ಎಂದು ನೀಡಿದ್ದು ಬಳಿಕ ಏನಾಗುತ್ತಿದೆ ಎಂದು ತಿಳಿಯದ ಸುಮನ್, ನಕಲಿ ಜ್ಯೋತಿಷಿಗಳು ಹೇಳಿದ ಹಾಗೇ ಕೇಳಲು ಶುರು ಮಾಡಿದ್ದಾರೆ. ಬಳಿ ಇಟ್ಟುಕೊಂಡಿದ್ದ ಚಿನ್ನದ ಗಟ್ಟಿಯನ್ನು ಕೊಡು ಎಂದು ಕೇಳಿದ ಕೂಡಲೇ ಅರಿವಿಗೆ ಬಾರದೆ ತಂದಿದ್ದ 75 ಗ್ರಾಂ ಚಿನ್ನವನ್ನು ಕೊಟ್ಟಿದ್ದಾರೆ. ನಂತರ ವಂಚಕರು ಈತನಿಗೆ 100 ಹೆಜ್ಜೆ ಮುಂದಕ್ಕೆ ಹೋಗಿ ವಾಪಸ್ ಬರುವಂತೆ ತಿಳಿಸಿದ್ದಾರೆ. ಅವರು ಹೇಳಿದಂತೆ ಸ್ವಲ್ಪ ಮುಂದೆ ನಡೆದು ಹೋಗಿ ಹಿಂದಿರುಗಿ ನೋಡುವಷ್ಟರಲ್ಲಿ, ಆ ವ್ಯಕ್ತಿಗಳು ಪರಾರಿ ಆಗಿದ್ದಾರೆ. ಆಗಲೇ ಸುಮನ್‌ಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.
ಇದನ್ನೂ ಓದಿ : Viral News: 100ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾದ! ಹೆಂಡತಿಯರಿಗೆ ಗೊತ್ತೇ ಇರಲಿಲ್ಲಈ ವಂಚನೆ, ಕೊನೆಗೆ ಆತ ಏನಾದ?