Site icon Vistara News

60 ವಿದ್ಯಾರ್ಥಿಗಳಿದ್ದ ಸರ್ಕಾರಿ ಶಾಲೆಯಲ್ಲೀಗ 430 ಮಕ್ಕಳು, ಗುಣಮಟ್ಟಕ್ಕೆ ಒತ್ತು; ಸಚಿವ ಅಶ್ವತ್ಥನಾರಾಯಣ

ಮಾಗಡಿ: ವಿದ್ಯಾರ್ಥಿಗಳ ತೀವ್ರ ಕೊರತೆ ಎದುರಿಸುತ್ತಿದ್ದ ಕಾರಣ ಎಂಟು ಶಾಲೆಗಳನ್ನು ವಿಲೀನಗೊಳಿಸಿ ಪ್ರಾರಂಭಿಸಲಾಗಿದ್ದ ಸಂಕೀಘಟ್ಟದ ಗ್ರಾಮ‌ ಪಂಚಾಯಿತಿ ಪಬ್ಲಿಕ್‌ ಶಾಲೆಯನ್ನು ಗುಣಮಟ್ಟದ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಅವರು ಮಂಗಳವಾರ ಶಾಲೆಗೆ ಭೇಟಿ ನೀಡಿ ಪೋಷಕರೊಂದಿಗೆ ಸಂವಾದ ನಡೆಸಿದರು. ಬಳಿಕ ಮಾತನಾಡಿದ ಸಚಿವರು, ‘ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿದ್ದರಿಂದ ಈಗ ಈ ಶಾಲೆಯಲ್ಲಿ 430 ವಿದ್ಯಾರ್ಥಿಗಳು ಇದ್ದಾರೆ. ಜತೆಗೆ ಆ ಶಾಲೆಗಳ ಶಿಕ್ಷಕರೂ ಸಂಕೀಘಟ್ಟದ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ಅಡೆತಡೆ ಇಲ್ಲದೆ ಕಲಿಕೆ ಸಾಧ್ಯವಾಗಿದೆ. ವಿಷಯಾಧಾರಿತವಾಗಿ ಬೋಧನೆ ನಡೆಯುತ್ತಿದೆ ಎಂದು ತಿಳಿಸಿದರು.

ಶಾಲೆಯಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಭಾಷಾ ಲ್ಯಾಬ್‌ಗಳಿವೆ. ಜತೆಗೆ ಮಕ್ಕಳನ್ನು ಮನೆ ಬಾಗಿಲಿಗೆ ಹೋಗಿ ಕರೆದುಕೊಂಡು ಮತ್ತು ಬಿಟ್ಟು ಬರಲು ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲೇ ಮೊಟ್ಟಮೊದಲ ಶಾಲೆ ಇದಾಗಿದ್ದು, ಮಾದರಿಯಾಗಿದೆ ಎಂದು ಸಚಿವರು ಬಣ್ಣಿಸಿದರು.

ಇದನ್ನೂ ಓದಿ | ತಿಪಟೂರು ಸ್ನಾತಕೋತ್ತರ ಕೇಂದ್ರ `ಕಲ್ಪಸಿರಿ’ ನಿರ್ಮಾಣಕ್ಕೆ ಸಚಿವ ಅಶ್ವತ್ಥನಾರಾಯಣ ಚಾಲನೆ

ಶಾಲೆಯನ್ನು ಅಭಿವೃದ್ಧಿಪಡಿಸಲು ಗ್ರಾಮ ಪಂಚಾಯ್ತಿ, ಜಿಲ್ಲಾಡಳಿತ, ಶಾಸಕರು, ಮಹಿಳಾ ಸ್ವಸಹಾಯ ಸಂಘಗಳು, ಸಮಾಜ ಸೇವಾಸಕರು ಸೇರಿದಂತೆ ಹಲವರು ಸಹಕಾರವನ್ನು ಪಡೆಯಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆ ಜತೆಗೆ ಆಟದ ಮೈದಾನ, ಶೌಚಾಲಯ ವ್ಯವಸ್ಥೆ ಎಲ್ಲದಕ್ಕೂ ಗಮನ ಕೊಡಲಾಗಿದೆ ಎಂದರು.

ವಾಹನದ ನಿರ್ವಹಣೆ ಮಾಡಲು ಮಹಿಳಾ ಸ್ವಸಹಾಯ ಸಂಘಗಳ ನೆರವು ತೆಗೆದುಕೊಳ್ಳುವ ಚಿಂತನೆ ಇದೆ. ಶಾಲೆಗಾಗಿ ಗೋಮಾಳಕ್ಕೆ ಸೇರಿದ 5 ಎಕರೆ ಜಮೀನು ಹಾಗೂ ಧನಂಜಯ ಎಂಬುವವರು ನೀಡಲು ಮುಂದಾಗಿರುವ 2 ಎಕರೆ ಜಮೀನನ್ನು ಮಂಜೂರು ಮಾಡಿಸಲು ಕ್ರಮ ವಹಿಸಲಾಗುವುದು. ಸಂಕೀಘಟ್ಟದಲ್ಲಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮುಂದಾಗಲಾಗಿದ್ದು, ನವೆಂಬರ್‌ನಲ್ಲಿ ಉದ್ಘಾಟನೆ ನಡೆಯಲಿದೆ ಎಂದು ಸಚಿವರು ತಿಳಿಸಿದರು.

ಇದೇ ವೇಳೆ, ಸಚಿವರು ತಮ್ಮ ಹುಟ್ಟೂರು ಚಿಕ್ಕಕಲ್ಯಕ್ಕೆ ಭೇಟಿ ಕೊಟ್ಟು, 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಜಿಟಿಟಿಸಿ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದರು. ಜನವರಿ ತಿಂಗಳಲ್ಲಿ ಶಂಕುಸ್ಥಾಪನೆಗೊಂಡ ಈ ಕಟ್ಟಡ ಕಾಮಗಾರಿಯನ್ನು ನವೆಂಬರ್ ಹೊತ್ತಿಗೆ ಮುಗಿಸಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಇದ್ದರು.

ಇದನ್ನೂ ಓದಿ| ಸರ್ಕಾರಿ ಶಾಲಾ ಮಕ್ಕಳ ಕರೆತರಲು ಬರಲಿವೆ ಸ್ಕೂಲ್‌ ಬಸ್‌!

Exit mobile version